Advertisement

ಬರಿದಾದ ಶರಾವತಿ ಒಡಲು; ಅಪಾಯಕಾರಿಯಾಗುತ್ತಿರುವ ಸಿಗಂದೂರು ಲಾಂಚ್ ಪಯಣ

04:25 PM Jun 27, 2023 | Team Udayavani |

ಸಾಗರ: ಲಿಂಗನಮಕ್ಕಿ ಆಣೆಕಟ್ಟೆಯ ಶರಾವತಿ ಹಿನ್ನೀರಿನ ಭಾಗಗಳಲ್ಲಿ ಜೂನ್‌ನಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ಈಗಲೂ ಲಾಂಚ್‌ನಲ್ಲಿ ಸಾವಿರಾರು ಜನರನ್ನು ಅಂಬಾರಗೋಡ್ಲು ದಡದಿಂದ ಕಳಸವಳ್ಳಿ ದಡಕ್ಕೆ ಜನರನ್ನು ಸಾಗಿಸುತ್ತಿರುವುದು ಅಪಾಯಕ್ಕೆ ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

Advertisement

ಶರಾವತಿ ನದಿ ಸುಮಾರು ೧೪ ವರ್ಷಗಳ ನಂತರ ಬರಿದಾಗಿ ಬತ್ತಿದೆ. ಹೀಗೆಯೇ ಪರಿಸ್ಥಿತಿ ಮುಂದುವರಿದರೆ ಲಾಂಚುಗಳನ್ನು ಇನ್ನು ಕೆಲವೇ ದಿನಗಳಲ್ಲಿ ನಿಲ್ಲಿಸಬೇಕಾಗಬಹುದು ಎಂದು ಒಳಜಲಸಾರಿಗೆ ಮಂಡಳಿಯ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಈ ನಡುವೆ ಹಿನ್ನೀರಿನಲ್ಲಿ ಮುಳುಗಿರುವ ಮರಗಳು ಲಾಂಚಿನ ರೇಡರ್‌ಗಳಿಗೆ ಸಿಕ್ಕಿ ಅಪಾಯ ಸಂಭವಿಸಬಹುದು ಎಂಬ ಎಚ್ಚರಿಕೆ ವ್ಯಕ್ತವಾಗಿದೆ.

ನೀರು ಕಡಿಮೆಯಾದ ಜಾಗದಲ್ಲಿ ಪ್ರಯಾಣಕ್ಕೆ ಈಗಿರುವ ದೊಡ್ಡ ಲಾಂಚುಗಳು ಯೋಗ್ಯವಲ್ಲ. ದಡಕ್ಕೆ ಚಾಚಲು ಪ್ಲಾಟ್‌ಪಾರಂಗಳು ಇಲ್ಲದ ಕಾರಣ ಇಳಿಯುವ ಜನರಿಗೆ ತೀವ್ರ ತರದ ಕಷ್ಟಗಳಾಗುತ್ತಿವೆ. ಕೆಸರಿನ ಗುಂಡಿಯಲ್ಲಿ ಇಳಿದು ದಡ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಸರು ಗದ್ದೆಯಲ್ಲಿ ಲಾಂಚು ನಿಲ್ಲಿಸಿದರೆ ಮಹಿಳೆಯರು, ಬಾಣಂತಿಯರು, ಮಕ್ಕಳು ನರಕ ಯಾತನೆಯಲ್ಲಿ ಸಂಚಾರಿಸುವಂತಾಗಿದೆ. ಬೈಕ್‌ಗಳಿಗೆ ಕೂಡ ಲಾಂಚ್‌ನಿಂದ ದಡಕ್ಕೆ ತೆರಳುವುದು ಸಾಹಸಮಯವಾಗಿ ಜೀವಭಯ ಹುಟ್ಟಿಸುವಂತಾಗಿದೆ.

ಹತ್ತಿಪ್ಪತ್ತು ಸಾವಿರ ಬಂಡವಾಳ ಹಾಕಿ ಈಗಿರುವ ಲಾಂಚ್‌ಗಳ ಬಾಗಿಲಿನಲ್ಲಿ ಮಾರ್ಪಾಡು ಮಾಡಿದರೆ ಲಾಂಚ್‌ನಿಂದ ಹತ್ತಿಳಿಯುವ ಕೆಲಸ ಸುಲಭವಾಗುತ್ತದೆ. ಜಲಸಾರಿಗೆ ಇಲಾಖೆಗೆ ತಿಂಗಳಿಗೆ ಇಪ್ಪತ್ತರಿಂದ ಮೂವತ್ತು ಲಕ್ಷ ಆದಾಯ ಬರುವ ಈ ಹೊಳೆಬಾಗಿಲು ಲಾಂಚುಗಳಿಗೆ ಹತ್ತಿಪ್ಪತ್ತು ಸಾವಿರ ಖರ್ಚು ಮಾಡಿ ಈ ಬಾಗಿಲುಗಳನ್ನು ಸರಿಮಾಡುವುದು ದೊಡ್ಡ ವಿಷಯವಲ್ಲ. ಆದರೆ ಆ ಕೆಲಸವೂ ಆಗಿಲ್ಲ. ಮುಪ್ಪಾನೆಯಲ್ಲಿ ಸುಮ್ಮನೆ ನಿಂತಿರುವ ಸಣ್ಣ ಲಾಂಚು ಹಾಗೂ ಹಸಿರುಮಕ್ಕಿಯ ಲಾಂಚುಗಳನ್ನು ಇಲ್ಲಿ ತರಿಸಿದರೆ ಬಹಳ ಒಳ್ಳೆಯದು ಎಂದು ಸ್ಥಳೀಯರು ಹೇಳುತ್ತಾರೆ.

ಈ ನಡುವೆ ಹಿನ್ನೀರಿನ ಆಸ್ಪತ್ರೆಗಳಲ್ಲಿ ಬಸುರಿ ಹೆಂಗಸರಿಗೆ, ವಿಷ ಕುಡಿದವರಿಗೆ, ಹಾವು ಕಚ್ಚಿದವರಿಗೆ ತುರ್ತು ಚಿಕಿತ್ಸೆಗಳು ದೊರೆಯುತ್ತಿಲ್ಲ. ಲಾಂಚುಗಳಲ್ಲಿ ವಾಹನ ಸಂಚಾರ ಇಲ್ಲವಾದ ಕಾರಣ ದೂರದ ಕುಂದಾಪುರ ಅಥವಾ ಹೊಸನಗರ ಒಂದೆರಡು ಗಂಟೆಗಳ ವ್ಯಯ ಮಾಡಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಆಸ್ಪತ್ರೆಗಳಿಗೆ ಒಬ್ಬ ಮಹಿಳಾ ವೈದ್ಯರನ್ನಾದರೂ ನೇಮಿಸಬೇಕಿತ್ತು. ಬೇರೆ ಕಡೆಯ ಸಣ್ಣ ಲಾಂಚು ತಂದು ಅಂಬುಲೆನ್ಸ್ ಸಂಚಾರಕ್ಕೆ ಅವಕಾಶ ಕೊಡಬೇಕಿತ್ತು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ತುರ್ತು ಗಮನ ನೀಡಬೇಕು ಎಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗಿದೆ.

Advertisement

ಇದನ್ನೂ ಓದಿ: Mangaluru: ಜನರ ಭಾವನೆಗಳಿಗೆ ವಿರುದ್ಧವಾಗಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ: ಕಟೀಲ್

Advertisement

Udayavani is now on Telegram. Click here to join our channel and stay updated with the latest news.

Next