ಆಲಮಟ್ಟಿ: ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಕೂಡಲೇ ಸಂಬಂ ಧಿಸಿದವರು ನೂತನ ಚರಂಡಿ ನಿರ್ಮಿಸಬೇಕು ಹಾಗೂ ರಸ್ತೆ ಅಭಿವೃದ್ಧಿಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಆಲಮಟ್ಟಿ ಮಾರುಕಟ್ಟೆಯಿಂದ ಹಳೇ ರಾಷ್ಟ್ರೀಯ ಹೆದ್ದಾರಿಗೆ ಹೋಗುವ ರಸ್ತೆಯ ಮೇಲೆ ಮಳೆ ಹಾಗೂ ಚರಂಡಿ ನೀರು ಹರಿಯುತ್ತಿದೆ. ಇದರಿಂದ ನಾಗರಿಕರು ಅದೇ ಗಲೀಜು ನೀರಿನಲ್ಲಿಯೇ ಸಂಚರಿಸುವ ಪರಿಸ್ಥಿತಿ ಎದುರಾಗಿದ್ದು, ಸ್ಥಳೀಯರು ಗ್ರಾಪಂ ಸೇರಿದಂತೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಆಲಮಟ್ಟಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ವಿವಿಧ ಉದ್ಯಾನಗಳ ಸಮುಚ್ಚಯ, ಬೃಹತ್ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ, ಆದರ್ಶರೈಲು ನಿಲ್ದಾಣ, ರಾಜ್ಯ ಹೆದ್ದಾರಿಗಳ ಸಂಗಮ, ರವಿವಾರದ ಬೃಹತ್ ಸಂತೆ ನಡೆಯುತ್ತಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಜನರಿಗೆ ಪಟ್ಟಣದಲ್ಲಿ ಅಗಲವಾದ ಒಳಚರಂಡಿ ನಿರ್ಮಾಣ ಆಗದ್ದರಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿಯುವಂತಾಗಿದೆ.
ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಅವರ ವಿಶೇಷ ಕಾಳಜಿ ಫಲವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಕಲ್ಲಯ್ಯಸ್ವಾಮಿ ಬಡಾವಣೆ ಸಮೀಪದವರೆಗೆ ಸುಸಜ್ಜಿತ ಉತ್ತಮ ಗುಣಮಟ್ಟದ ಚರಂಡಿ ನಿರ್ಮಿಸಲಾಗಿದೆ. ಇದೀಗ ಕಲ್ಲಯ್ಯಸ್ವಾಮಿ ಪ್ಲಾಟ್‌ನಿಂದ ಹಳೇ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾದು ನದಿಗೆ ಸೇರುವ ಕಿನಾರೆವರೆಗೂ ಅಗಲ ಮತ್ತು ಗುಣಮಟ್ಟದ ಚರಂಡಿ ನಿರ್ಮಿಸುವುದು ಅವಶ್ಯವಾಗಿದೆ. ಈಗಿರುವ ಚರಂಡಿ ಅತೀ ಸಣ್ಣದಾಗಿದ್ದು, ನೀರಿನ ಹರಿವು ಹೆಚ್ಚಾಗುವುದರಿಂದ ಗಲೀಜು ನೀರು ರಸ್ತೆಯಲ್ಲಿ ಹರಿದು ರಸ್ತೆ ಹಾಳಾಗುವಂತಾಗಿದೆ. ಕೂಡಲೇ ನೂತನ ಚರಂಡಿ ನಿರ್ಮಿಸಬೇಕು ಮತ್ತು ರಸ್ತೆ ಅಭಿವೃದ್ಧಿಗೊಳಿಸುವಂತೆ ನಾಗರಿಕರು ಒತ್ತಾಯಿಸುತ್ತಿದ್ದಾರೆ.