Advertisement

ಒಳಚರಂಡಿ ವ್ಯವಸ್ಥೆಗೆ ಬೇಕು ಚಿಕಿತ್ಸೆ

06:56 PM Apr 04, 2021 | Team Udayavani |

ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಅವಳಿನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಮೊದಲ ಹಂತದ ಒಳಚರಂಡಿ ವ್ಯವಸ್ಥೆಯ ಕಳಪೆ ಕಾಮಗಾರಿ ಇದೀಗ ಆಡಳಿತ ಮತ್ತು ಜನರ ಅನುಭವಕ್ಕೆ ಬರತೊಡಗಿದೆ. ಒಳಚರಂಡಿ ವ್ಯವಸ್ಥೆ ನಂತರವೂ ನಾಲಾಗಳಲ್ಲಿ ನೀರಿನ ಹರಿವು ನಿಂತಿಲ್ಲ. ನಾಲಾಗುಂಟ ಇರುವ ಛೇಂಬರ್‌ ಸೇರಿದಂತೆ ಅನೇಕ ಕಡೆಗಳಲ್ಲಿ ನೀರು ಪದೇ ಪದೇ ಹೊರ ಪುಟಿಯುತಿದ್ದು, ಮಳೆಗಾಲದಲ್ಲಿ ಸ್ಥಿತಿ ಏನಾದೀತು ಎಂಬ ಆತಂಕ ಅನೇಕರದ್ದಾಗಿದೆ.

ಅವಳಿನಗರದಲ್ಲಿ ಶೇ.60 ಪ್ರದೇಶಕ್ಕೆ ಒಳಚರಂಡಿ ವ್ಯವಸ್ಥೆಯೇ ಇರಲಿಲ್ಲ. ಕೆಲ ವರ್ಷಗಳ ಹಿಂದೆ ಜನಪ್ರತಿನಿ  ಧಿಗಳ ಯತ್ನದಿಂದಾಗಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಆರಂಭವಾಗಿತ್ತು. ಮೊದಲ ಹಂತದ ಕಾಮಗಾರಿ ಮುಗಿದಿದ್ದೇ ಮೆಗಾ ಧಾರವಾಹಿ ಎನ್ನುವಂತಾಗಿತ್ತು. ಆದರೀಗ ಕಾಮಗಾರಿಯ ಕಳಪೆತನದ ದರ್ಶನ ಆಗತೊಡಗಿದೆ.

ಒಂದು ಕಡೆ ಒಳಚರಂಡಿಯಿಂದ ಬರುವ ನೀರನ್ನೇ ನಂಬಿ ನಿರ್ಮಿಸಲಾಗಿರುವ ತ್ಯಾಜ್ಯನೀರು ಸಂಸ್ಕರಣಾ ಘಟಕ(ಎಸ್‌ ಟಿಪಿ)ಕ್ಕೆ ನಿರೀಕ್ಷಿತ ನೀರು ಹೋಗುತ್ತಿಲ್ಲ. ಜತೆಗೆ ಒಳಚರಂಡಿ ವ್ಯವಸ್ಥೆಯಲ್ಲಿ ಆಗಿರುವ ಲೋಪ, ಕಳಪೆತನ ಸರಿಪಡಿಸಲು ಇನ್ನು ಕನಿಷ್ಠ 1 ಕೋಟಿಗೂ ಹೆಚ್ಚಿನ ಹಣ ಬೇಕೆಂಬ ಅನಿಸಿಕೆ ವ್ಯಕ್ತವಾಗಿದೆ. ಸದ್ಯದ ಸ್ಥಿತಿಯಲ್ಲಿ ಇದು ಆಗುವ ಕೆಲಸವಲ್ಲ ಎಂಬುದು ಹಲವರ ಅಭಿಪ್ರಾಯ. ಸ್ವತ್ಛತೆ, ಪರಿಸರ ಕಾಳಜಿ ಹಾಗೂ ನಾಲಾಗಳಲ್ಲಿ ನೀರಿನ ಹರಿವು ಕಡಿಮೆ, ತ್ಯಾಜ್ಯ ನೀರು ಸಂಸ್ಕರಿಸಿ ಪುನರ್‌ ಬಳಕೆ ಉದ್ದೇಶದೊಂದಿಗೆ ಒಳಚರಂಡಿ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸದ್ಯದ ಸ್ಥಿತಿಯಲ್ಲಿ ಇದ್ಯಾವ ಉದ್ದೇಶವೂ ಈಡೇರಿಲ್ಲ. ಎಸ್‌ ಟಿಪಿ ಘಟಕದಿಂದ ಸಂಸ್ಕರಿಸಿದ ನೀರು ದೊರೆಯಲಿದೆ ಎಂದು ನಿರೀಕ್ಷೆ ಹೊತ್ತಿದ್ದ ಸುತ್ತಮುತ್ತಲಿನ ರೈತರಿಗೂ ನಿರಾಸೆಯಾಗಿದೆ.

1 ಹುಬ್ಬಳ್ಳಿಯಲ್ಲಿ ಕೈಗೊಂಡ ಒಳಚರಂಡಿ ವ್ಯವಸ್ಥೆಯಿಂದ ತ್ಯಾಜ್ಯ ನೀರನ್ನು ಗಬ್ಬೂರು ಬಳಿ ನಿರ್ಮಿಸಿರುವ ಎಸ್‌ಟಿಪಿ ಘಟಕಕ್ಕೆ ತಲುಪಿಸುವುದು, ಅಲ್ಲಿ ಸಂಸ್ಕರಣೆಗೊಂಡ ನೀರನ್ನು ಕೃಷಿ ಬಳಕೆಗೆ ಸುತ್ತಮುತ್ತಲ ರೈತರಿಗೆ ನೀಡಲು ಯೋಜಿಸಲಾಗಿದೆ. ಕಾಮಗಾರಿ ಮುಗಿದ ಹೊಸತರಲ್ಲಿ ಒಂದಿಷ್ಟು ದಿನ ನೀರು ಎಸ್‌ಟಿಪಿಗೆ ತಲುಪಿತು, ಸಂಸ್ಕರಣೆಗೊಂಡು ರೈತರಿಗೂ ನೀಡಲಾಗುತ್ತಿತ್ತು. ಇದೀಗ ಎಸ್‌ಟಿಪಿ ಘಟಕಕ್ಕೆ ಇರಲಿ, ಗಬ್ಬೂರಿಗೂ ಒಳಚರಂಡಿ ನೀರು ಹೋಗುತಿಲ್ಲ, ಗಬ್ಬೂರು ಬಳಿ ಒಳಚರಂಡಿ ಲೈನ್‌ ಬತ್ತಿದಂತಾಗಿದೆ. ಇದರಿಂದ ಘಟಕ ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸಲಾಗದೆ ಬಹುತೇಕ ಸ್ಥಗಿತಗೊಂಡಿದೆ.

Advertisement

2 ಗಬ್ಬೂರು ಎಸ್‌ಟಿಪಿ ಘಟಕಕ್ಕೆ ನೀರು ತಲುಪಿಸುವ ನಿಟ್ಟಿನಲ್ಲಿ ಉಣಕಲ್ಲನಿಂದ ಬರುವ ಪ್ರಮುಖ ನಾಲಾಗುಂಟ ಒಳಚರಂಡಿ ಛೇಂಬರ್‌ಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ ಅನೇಕವು ಕುಸಿದಿದ್ದು, ನಾಲಾದಲ್ಲಿ ಹಿಂದಿನಂತೆಯೇ ನೀರು ಹರಿಯುತ್ತಿದೆ. ಕೊನೆ ಭಾಗಗಳಲ್ಲಿ ಛೇಂಬರ್‌ಗಳು ಪದೇ ಪದೇ ಒಡೆಯುತ್ತಿರುವುದು ರಸ್ತೆ ಮೇಲೆ ನೀರು ಹರಿಯುವುದು ಜನರಿಗೆ ಬೇಸರ ತರಿಸಿದೆ.

3 ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಎಸ್‌ಟಿಪಿ ಘಟಕದ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದರಿಂದ ಕ್ಲೀನಿಂಗ್‌ ಪ್ಯಾನ್‌ ಸೇರಿದಂತೆ ವಿವಿಧ ಉಪಕರಣಗಳು ಹಾಳಾಗುತ್ತಿವೆ. ಇದನ್ನು ದುರಸ್ತಿ ಮಾಡಬೇಕೆಂದರೆ ಮತ್ತೆ ಹಣ ಸುರಿಯಬೇಕಾಗಿದೆ. ಒಳಚರಂಡಿ ವ್ಯವಸ್ಥೆಯ ಪೂರ್ಣ ಪರಿಶೀಲನೆ ನಂತರವೇ ಬಿಲ್‌ ಪಾವತಿಸಬೇಕೆಂಬ ಸಲಹೆ ಬದಿಗೊತ್ತಿ ಗುತ್ತಿಗೆದಾರನಿಗೆ ಬಿಲ್‌ ಪಾವತಿ ಮಾಡಿ ಇದೀಗ ಪರಿತಪಿಸುವಂತಾಗಿದೆ. ಒಳಚರಂಡಿಯ ವ್ಯವಸ್ಥೆ ಹದಗೆಟ್ಟು, ಎಸ್‌ಟಿಪಿ ಘಟಕ ಬಹುತೇಕ ಸ್ಥಗಿತ ಸ್ಥಿತಿಗೆ ತಲುಪಿರುವ ಕುರಿತಾಗಿ ಜನಪ್ರತಿನಿಧಿಗಳು, ಪಾಲಿಕೆ-ಕೆಯುಡಿಎಫ್‌ಸಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸ್ವತ್ಛತೆ, ಪರಿಸರ ಸಂರಕ್ಷಣೆ, ತ್ಯಾಜ್ಯನೀರು ಮರುಬಳಕೆ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಸ್ಪಷ್ಟ ಆದೇಶ ನೀಡಿದ್ದು, ಇದರ ಉಲ್ಲಂಘನೆ ಕುರಿತಾಗಿ ಯಾರಾದರೂ ಕೋರ್ಟ್‌ ಮೊರೆ ಹೋದರೆ ಮೊದಲು ಪಾಲಿಕೆ ಆಯುಕ್ತರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ ಎಂಬುದು ಹಲವರ ಆಭಿಪ್ರಾಯವಾಗಿದೆ.

ಯೋಜನೆಯ ಹಾದಿ

ಮೊದಲ ಹಂತದಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಕೈಗೊಳ್ಳುವುದು, ಇದಕ್ಕೆ ಪೂರಕವಾಗಿ ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು, ನಂತರದ ಹಂತದಲ್ಲಿ ಅವಳಿನಗರದ ಎಲ್ಲ ಕಡೆಗಳಲ್ಲೂ ಒಳಚರಂಡಿ ವ್ಯವಸ್ಥೆ ಜಾರಿಗೊಳಿಸುವ ಯೋಜನೆ ಹೊಂದಲಾಗಿತ್ತು. ಮೊದಲ ಹಂತವೇ ಅನೇಕ ಪಾಠಗಳನ್ನು ಕಲಿಸಿತ್ತು. ಜನ ಪರಿತಪಿಸುವಂತೆ ಮಾಡಿತ್ತು. ಅವಳಿನಗರದಲ್ಲಿ ಸುಮಾರು 250 ಕಿಮೀ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಇನ್ನೂ ಸುಮಾರು 202 ಕಿಮೀ ಒಳಚರಂಡಿ ವ್ಯವಸ್ಥೆ ಕೈಗೊಳ್ಳಬೇಕಾಗಿದೆ. ಅಮೃತ ಯೋಜನೆಯಡಿ ಇದೀಗ ಕಾಮಗಾರಿ ಪ್ರಗತಿಯಲ್ಲಿದೆ.

ಕೋಟಿ ರೂ. ಬೇಕಂತೆ

ಪ್ರಸ್ತುತ ಹದಗೆಟ್ಟ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕಾದರೆ ಅಂದಾಜು 1 ಕೋಟಿ ರೂ. ಬೇಕಾಗುತ್ತದೆಯಂತೆ. ಸದ್ಯದ ಆರ್ಥಿಕ ಸ್ಥಿತಿಯಲ್ಲಿ ಸರಕಾರ ಈ ಹಣ ನೀಡುವುದು ಕಷ್ಟ ಸಾಧ್ಯ. ಇಷ್ಟೊಂದು ಹಣ ಭರಿಸುವ ಶಕ್ತಿ ಪಾಲಿಕೆಗೂ ಇಲ್ಲವಾಗಿದೆ. ಮಳೆಗಾಲ ಬಂದರೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಮಳೆನೀರಿನಿಂದ ನಾಲಾದಲ್ಲಿ ಹರಿಯುವ ನೀರಿನ ಒತ್ತಡ, ಛೇಂಬರ್‌ನಿಂದ ನಾಲಾಕ್ಕೆ ಹರಿಯುವ ನೀರಿಗೆ ತಡೆಯಾಗಲಿದ್ದು, ಒಂದು ವೇಳೆ ಈ ಒತ್ತಡಕ್ಕೆ ಚರಂಡಿ ನೀರು ಹಿಂದಕ್ಕೆ ಸಾಗಲು ಆರಂಭಿಸಿದರೆ ನಗರದಲ್ಲಿ ಹೆಚ್ಚಿನ ಕಡೆಗಳಲ್ಲಿ ಛೇಂಬರ್‌ ನೀರು ಪುಟಿಯತೊಡಗುತ್ತದೆ. ಮಳೆಗಾಲ ಬರುವುದರೊಳಗೆ ಇರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next