Advertisement

ಮಳೆ ಹಾನಿ ಎದುರಿಸಲು ಸರ್ವ ಸನ್ನದ್ಧ; ಕಾಮಗಾರಿ ಚುರುಕು

03:07 PM May 27, 2019 | keerthan |

ಮೂಲ್ಕಿ: ಇಲ್ಲಿನ ನ.ಪಂ.ವ್ಯಾಪ್ತಿಯ ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಆಗಬಹುದಾದ ಅನಾಹುತಗಳನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ತಯಾರಾಗಿದ್ದು, ತರಾತುರಿಯಲ್ಲಿ ಕಾಮಗಾರಿ, ಸಭೆಗಳನ್ನು ನಡೆಸಲಾಗುತ್ತಿದೆ.

Advertisement

ಮೂಲ್ಕಿಯ ನಾಲ್ಕು ಗ್ರಾಮಗಳ 16 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಯ 80 ಕಿ.ಮೀ. ಉದ್ದದ ಪೈಪ್‌ಲೈನ್‌ ಕಾಮಗಾರಿಯೂ ಆಮೆ ಗತಿಯಲ್ಲಿ ನಡೆಯುತ್ತಿದೆ. ಕಾಮಗಾರಿಯ ಕೆಲಸವೂ ಚುರುಕು ಕಾಣದೇ ಇರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮೂಲ್ಕಿ ನ. ಪಂ. ಕಳೆದ ವರ್ಷದ ಮಳೆಗಾಲದ ಕೆಲವು ನಿರ್ವಹಣೆಯ ವ್ಯತ್ಯಯಗಳನ್ನು ಕಂಡು ಮುಂಜಾಗ್ರತೆಯ ಕ್ರಮವಾಗಿ ಎಪ್ರಿಲ್ ತಿಂಗಳಿನಿಂದಲೇ ನೀರು ಹರಿದು ಆತಂಕದ ಪರಿಸ್ಥಿತಿ ಉಂಟು ಮಾಡುವ ಎಲ್ಲ ಚರಂಡಿಗಳ ಹೂಳೆತ್ತುವ ಕೆಲಸ ಆರಂಭಿಸಿ ರಸ್ತೆಗಳನ್ನು ಸುಸ್ಥಿರಗೊಳಿಸಲಾಗುತ್ತಿದೆ.

ಚರಂಡಿ ಕಾಮಗಾರಿಗೆ ಅಗೆದ ಹೂಳಿನ ಮಣ್ಣನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದು, ಇದನ್ನು ಸುವ್ಯವಸ್ಥಿತವಾಗಿ ಮುಚ್ಚಲು ತಿಂಗಳುಗಟ್ಟಲೇ ತೆಗೆದುಕೊಳ್ಳಲಾಗುತ್ತಿದೆ. ಈ ಬಗ್ಗೆ ನ. ಪಂ.ಗೆ ಸಾರ್ವಜನಿಕರ ದೂರುಗಳು ಕೇಳಿ ಬಂದಿವೆ. ರಸ್ತೆ ಬದಿಯಿರುವ ಹೂಳನ್ನು ಮುಚ್ಚದೇ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಸಾರ್ವಜನಿಕರ ವಾದ.

ನ. ಪಂ. ವ್ಯಾಪ್ತಿಯಲ್ಲಿ ಸಾಧಾರಣ 75 ಕಿ.ಮೀ. ನಷ್ಟು ಉದ್ದಕ್ಕೆ ಇರುವ ಚರಂಡಿಗಳಲ್ಲಿ ಒಟ್ಟು 26 ಕಿ.ಮೀ. ಚರಂಡಿಗಳು ಮಳೆಗಾಲದ ಪರಿಸ್ಥಿತಿಯನ್ನು ಅಭದ್ರಗೊಳಿಸುವಂತದ್ದು. ಅದಕ್ಕಾಗಿ ಈಗಾಗಲೇ 18 ಕಿ.ಮೀ. ಚರಂಡಿಗಳ ಹೂಳೆತ್ತುವ ಕೆಲಸ ಮುಗಿದಿದೆ.

ಕಾಮಗಾರಿ ಪೂರ್ಣಗೊಳಿಸಲಾಗುವುದು
ಮೂಲ್ಕಿ ನ.ಪಂ. ವ್ಯಾಪ್ತಿಯ ಎಲ್ಲ ರಸ್ತೆ ಚರಂಡಿಗಳ ಹೂಳೆತ್ತುವ ಕಾಮಗಾರಿ ಮುಂದುವರಿದಿದೆ. ಕಂದಾಯ ಇಲಾಖೆಯ ಜತೆಗೆ ನಿರಂತರ ಸಂಪರ್ಕದಲ್ಲಿದ್ದು ಮಳೆಗಾಲದಲ್ಲಿ ಆತಂಕ ತರುವ ಮರಗಳು, ಹಾನಿ ಉಂಟಾಗಬಹುದಾದ ಪ್ರದೇಶಗಳ ಬಗ್ಗೆ ಮುಂಜಾಗ್ರತಾ ವ್ಯವಸ್ಥೆ ಮಾಡಲಾಗಿದೆ. ನಗರದ ನೀರು ಸರಬರಾಜು ವ್ಯವಸ್ಥೆಯ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಗಿಸಲಾಗುವುದು. ಎಲ್ಲ ರಸ್ತೆಗಳ ಚರಂಡಿಯ ನಿರ್ವಹಣೆಯ ಕೆಲಸ ತತ್‌ಕ್ಷಣದಲ್ಲಿ ಪೂರ್ತಿಗೊಳಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲಾಗಿದೆ.
– ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ನ.ಪಂ.ಮೂಲ್ಕಿ.

ಮುಂಜಾಗ್ರತೆ ಕ್ರಮ ರೂಪಿಸಲಾಗಿದೆ

ಮೂಲ್ಕಿ ವ್ಯಾಪ್ತಿಯ ಪ್ರದೇಶಗಳಿಗೆ ಮಳೆಗಾಲದಲ್ಲಿ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನುರೂಪಿಸಲಾಗಿದೆ. ಹಿಂದಿನ ವ್ಯವಸ್ಥೆಯಂತೆ ಈಜುಗಾರರ ತಂಡವನ್ನು ಗುರುತಿಸಿ ಸಂಪರ್ಕ ಬೆಳೆಸಲಾಗಿದೆ. ಗಂಜಿ ಕೇಂದ್ರಗಳ ಸ್ಥಳವನ್ನು ಗುರುತಿಸಲಾಗಿದೆ. ಭದ್ರತೆಗಾಗಿ ವಿಶೇಷ ಕಾಳಜಿ ವಹಿಸಿಲಾಗಿದೆ.
– ಮಾಣಿಕ್ಯ ಎಂ., ವಿಶೇಷ ತಹಶಿಲ್ದಾರರು, ನಾಡ ಕಚೇರಿ
Advertisement

ಸರ್ವೋತ್ತಮ ಅಂಚನ್‌

Advertisement

Udayavani is now on Telegram. Click here to join our channel and stay updated with the latest news.

Next