Advertisement

ಒಳಚರಂಡಿ ಕಾಮಗಾರಿಗಳಿಂದ ರಸ್ತೆ ಹಾಳು

06:00 AM Jun 23, 2018 | Team Udayavani |

ಕುಂದಾಪುರ: ವಾರ್ಡ್‌ಗಳ ಪೈಕಿ ಅತಿ ಹೆಚ್ಚು, ಅತಿ ದೊಡ್ಡ ತೋಡುಗಳಿರುವ ವಾರ್ಡು ಬಹುಶಃ ಚಿಕ್ಕನ್‌ಸಾಲ್‌ ಎಡಬದಿ ವಾರ್ಡ್‌ ಇರಬಹುದು ಎನಿಸುತ್ತಿದೆ. ಈ ವಾರ್ಡಿಗೆ ಭೇಟಿ ಕೊಟ್ಟಾಗ ಕಾಣಿಸುತ್ತಿದ್ದುದು ಹರಿಯುತ್ತಿದ್ದ ತೋಡುಗಳೇ. ಸದಸ್ಯರ ಮಾತು, ಈ ಭಾಗದ ಜನರ ಮಾತು ಕೂಡಾ ಇದಕ್ಕೆ ಪೂರಕವಾಗಿತ್ತು. ಸುಮಾರು 800 ಮತದಾರರು, 240ರಷ್ಟು  ಮನೆಗಳಿರುವ ವಾರ್ಡು ಇದು.

Advertisement

ಮಳೆಗಾಲದ ಸಿದ್ಧತೆ ಆಗಿದೆ
ಮಳೆಗಾಲಕ್ಕೆ  ಮುನ್ನ ಚರಂಡಿಗಳ ದುರಸ್ತಿಯಾಗಿದೆ. ಹೂಳೆತ್ತಲಾಗಿದೆ. ಆದರೆ ಅನೇಕ ಕಡೆ ಚರಂಡಿಯೇ ಇಲ್ಲದಿರುವುದು ಸಮಸ್ಯೆಯಾಗಿದೆ. ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿರುವುದು ದೊಡ್ಡ ತೋಡಿಗೆ ಸ್ಲಾಬ್‌ ಹಾಕಿ ರಸ್ತೆಯನ್ನಾಗಿ ಮಾಡಿಕೊಡಿ ಎನ್ನುವುದು. ಆದರೆ ಅದಕ್ಕೆ ಅನುದಾನದ ಕೊರತೆ ಇರುವ ಕಾರಣ ಕಾಮಗಾರಿ ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಗದ್ದೆಬೈಲಿನ ಬದಿ ತೋಡುಗಳ ಕಾಮಗಾರಿಗೆ ಅಂದಿನಿಂದ ಇಂದಿನವರೆಗೂ ಜನರ ಬೇಡಿಕೆ ಇರುವುದು ಪೂರೈಕೆಯಾಗಲೇ ಇಲ್ಲ.

ಒಳಚರಂಡಿ ಅವಸ್ಥೆ
ಕಾಂಕ್ರಿಟ್‌ ರಸ್ತೆ ಆದ ಬಳಿಕ ಒಳಚರಂಡಿ ಕಾಮಗಾರಿ ಮಾಡಿದ ಕಾರಣ ರಸ್ತೆಯ ಅಂದವೆಲ್ಲ ಹಾಳಾಗಿದೆ. ಅಲ್ಲಲ್ಲಿ ಬಿರುಕು ಬಿಟ್ಟಂತೆ ಕಾಣುವ ತೇಪೆ ಕಾರ್ಯಗಳು ವಾಹನಗಳ ಸುಗಮ ಓಡಾಟಕ್ಕೆ ತಡೆಯೊಡ್ಡಿವೆ. ಕೆಲವೆಡೆ ಕಂದಕದಂತೆ ರಸ್ತೆ ಬಾಯಿಬಿಟ್ಟು ನಿಂತಿದೆ.

ಪರ್ಯಾಯ ರಸ್ತೆ
ಚಿಕ್ಕಮ್ಮನ ಸಾಲ್‌ ರಸ್ತೆಗೆ ಪರ್ಯಾಯ ವಾಗಿ ರಸ್ತೆ ಮಾಡಬೇಕೆಂದು ಬಂದ ಬೇಡಿಕೆಯನ್ವಯ ಇಲ್ಲಿ ಬಾದ್‌ಶಾ ರಸ್ತೆಮೂಲಕ ಸೇತುವೆ ನಿರ್ಮಾಣ ಮಾಡಿ ಗದ್ದೆಯಲ್ಲಿ ರಸ್ತೆ ಮಾಡಲಾಗಿದೆ. ಆದರೆ ಅದಕ್ಕೆ ಕಾಂಕ್ರೀಟ್‌ ಹಾಕುವ ಕಾರ್ಯವಾಗಲೀ, ಇಂಟರ್‌ಲಾಕ್‌ ಅಳವಡಿಸುವ ಕಾರ್ಯ ಆಗಲಿಲ್ಲ. ಕಾರಣ ಮತ್ತದೇ ಅನುದಾನದ ಕೊರತೆ. 

ಇಂಟರ್‌ಲಾಕ್‌ ಕಾಮಗಾರಿ
ಜೈನ್‌ಹೋಟೆಲ್‌ ಕೆಳಗಡೆಯಿಂದ ರಾಮಕೃಷ್ಣ ಅವರ ಮನೆವರೆಗೆ ಚರಂಡಿ ರಚಿಸಿ ಇಂಟರ್‌ಲಾಕ್‌ ಹಾಕಲಾಗಿದೆ. ಹೆಲೆನ್‌ ಡಿಸೋಜಾ ಅವರ ಮನೆಯಿಂದ ರಾಮಕೃಷ್ಣ ಅವರ ಮನೆವರೆಗೆ ಇಂಟರ್‌ಲಾಕ್‌ ಅಳವಡಿಸಲಾಗಿದ್ದು ನಾರಾಯಣ ನಾಯ್ಕ ಅವರ ಮನೆಯಿಂದ  ನಾಗಬನ ರಸ್ತೆಗೆ ಡಾಮರು ಹಾಕಲಾಗಿದೆ. ನಾರಾಯಣ ನಾಯ್ಕ ಅವರ ಮನೆಯ ನಂತರ ಚರಂಡಿಗೆ ಸ್ಲಾಬ್‌ ಹಾಕಬೇಕೆಂಬ ಬೇಡಿಕೆ ಇದೆ. ಹಳೆಕೋಟೆ ಅಂಗನವಾಡಿ ಯನ್ನು ದುರಸ್ತಿ ಮಾಡಲಾಗಿದೆ. ಗದ್ದೆಬೈಲಿ ನಲ್ಲಿ ಇಂಟರ್‌ಲಾಕ್‌ ಹಾಕಿ ರಸ್ತೆ ಮಾಡಲು ಸಿದ್ಧತೆ ನಡೆದಿದೆ. ಕಾಮಗಾರಿ ನಡೆದಿಲ್ಲ. 

Advertisement

ಬಾಕಿ ಇಲ್ಲ
ಮೊಗೇರಭವನ, ಮೈಲಾರೇಶ್ವರ ದೇವಸ್ಥಾನ, ರಾಯಲ್‌ ಸಭಾಭವನ ಬಳಿ ಚರಂಡಿ ಕಾಮಗಾರಿ ಮಾಡಲಾಗಿದೆ. ಹಾಗಾಗಿ ಯಾವುದೇ ಸಮಸ್ಯೆಗಳಿಲ್ಲ. ಆದರೆ ಗ್ಯಾರೇಜ್‌ ನಂತರ ಸ್ವಲ್ಪ ಸಮಸ್ಯೆ ಇದೆ.                              
– ರಾಧಾಕೃಷ್ಣ, ಸ್ಥಳೀಯರು

2 ಕೋ. ರೂ. ಅನುದಾನ ಬೇಕು
ನಮ್ಮ ವಾರ್ಡಿನಲ್ಲಿರುವ ತೋಡುಗಳಿಗೆ ಮುಚ್ಚಿಗೆ ಹಾಕಿ ರಸ್ತೆಯಾಗಿಸಬೇಕಿದೆ. ಗದ್ದೆಬೈಲಿನಲ್ಲಿ ರಸ್ತೆಗೆ ಇಂಟರ್‌ಲಾಕ್‌ ಹಾಕಬೇಕಿದೆ. ಬೇಡಿಕೆ ಇರುವ ಎಲ್ಲ ಕಾಮಗಾರಿ ಮಾಡಬೇಕಾದರೆ ಇನ್ನೂ 2 ಕೋ.ರೂ. ಅನುದಾನ ಬೇಕು. ಈ ಬಾರಿ 50ರಿಂದ 60 ಲಕ್ಷ ರೂ.ಗಳ ಕಾಮಗಾರಿ ಮಾಡಲಾಗಿದೆ. 
– ಶಕುಂತಲಾ ಗುಲ್ವಾಡಿ, ಸದಸ್ಯರು, ಪುರಸಭೆ 

ದೀಪದ ಬೆಳಕಿಲ್ಲ
ಬೀದಿ ದೀಪ ಸರಿ ಇರುವುದಿಲ್ಲ. ಚರಂಡಿಯನ್ನು ಮಳೆಗಾಲಕ್ಕೆ ಮೊದಲೇ ದುರಸ್ತಿ ಮಾಡಲಾಗಿದೆ. ಹಾಗಾಗಿ ನೀರು ಹರಿಯುವ ಸಮಸ್ಯೆ ಇಲ್ಲ.
– ಕೃಷ್ಣಮೂರ್ತಿ, ಸ್ಥಳೀಯರು

ಅನುದಾನ ಕೊರತೆ
ಹಳೆಯ ಆಡಳಿತ ಮಾಡಿದ ಕಾಮಗಾರಿಗಳಿವೆ. ಈ ಆಡಳಿತದ ಅವಧಿಯಲ್ಲಿ ಅಂತಹ ನಿರೀಕ್ಷಿತ ಕಾಮಗಾರಿ ನಡೆಯುವಷ್ಟು ಅನುದಾನ ಬಂದಂತಿಲ್ಲ. ಮೂಲಸೌಕರ್ಯ ಪರವಾಗಿಲ್ಲ. ಬಂದ ಅನುದಾನದ ಬಳಕೆಯಾಗಿದೆ. ಹೊಸ ಅನುದಾನ ಬಂದಿಲ್ಲ.
– ಅರುಣ್‌ ಕುಮಾರ್‌ ಬಾಣ, ಸ್ಥಳೀಯರು 

Advertisement

Udayavani is now on Telegram. Click here to join our channel and stay updated with the latest news.

Next