ಮಂಗಳೂರು: ಬುಧವಾರ ಬೆಳಗ್ಗೆ ಅರ್ಧ ಗಂಟೆ ಸುರಿದ ಮಳೆಗೆ ಮಂಗಳೂರಿನ ರಸ್ತೆಗಳು ಜಲಾವೃತವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರೆಲ್ಲಾ ರಸ್ತೆಯಲ್ಲೇ ಹರಿಯುತ್ತಿದ್ದು ವಾಹನ ಚಾಲಕರು ಮತ್ತು ಪಾದಾಚಾರಿಗಳು ಪರದಾಟ ಪಡುವಂತಾಗಿದೆ.
ಕೆಲವು ದಿನಗಳ ನಂತರ ಇಂದು ಬೆಳಗ್ಗೆ ಮಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ. ಆದರೆ ರಸ್ತೆಯ ತುಂಬೆಲ್ಲಾ ಕೆಸರು ನೀರು ಹರಿಯುತ್ತಿದ್ದು, ಬೆಳಗ್ಗೆ ಶಾಲಾ, ಕಾಲೇಜಿಗೆ, ಕಚೇರಿಗೆ ಹೋಗುವ ಜನ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ತೊಕ್ಕೊಟ್ಟು ಜಂಕ್ಷನ್: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ ನೀರಿನಿಂದ ಆವೃತವಾಗಿದೆ. ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೇ ಇರುವುದೇ ಇಲ್ಲಿ ನೀರು ರಸ್ತೆಯಲ್ಲಿ ಹರಿಯಲು ಕಾರಣವಾಗಿದ್ದು, ಈ ಹಿಂದೆ ಚರಂಡಿ ಸಮಸ್ಯೆಯ ಬಗ್ಗೆ ʼ
ಉದಯವಾಣಿʼ ವರದಿ ಮಾಡಿ ಎಚ್ಚರಿಸಿದ್ದರೂ, ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ.
ತೊಕ್ಕೊಟ್ಟು ಜಂಕ್ಷನ್ ನ ಫ್ಲೈ ಓವರ್ ನ ಮೇಲಿನಿಂದ ನೀರು ಬೀಳುತ್ತಿದ್ದು ಕೆಳ ಭಾಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಮೇಲೆ ನೀರು ಬೀಳುತ್ತಿದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಾಹನ ಸವಾರರು ಆಗ್ರಹ ಮಾಡುತ್ತಿದ್ದಾರೆ.
ಚಿಲಿಂಬಿ: ನಗರದ ಊರ್ವ ರ್ಸ್ಟೋರ್ ನಿಂದ ಚಿಲಿಂಬಿಗೆ ತೆರಳುವ ಮುಖ್ಯರಸ್ತೆಯ ಬಾರ್ ಆಂಡ್ ರೆಸ್ಟೋರೆಂಟ್ ನ ಬಳಿಯ ರಸ್ತೆಯಲ್ಲಿ ಚರಂಡಿಗೆ ಸೇರಬೇಕಾದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಚರಂಡಿಯ ಮಣ್ಣು ತೆಗೆಯದೇ ಇರುವುದು ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಆದಷ್ಟು ಬೇಗ ಚರಂಡಿ ಸಮಸ್ಯೆ ನಿವಾರಿಸಬೇಕು ಎಂದು ಸ್ಥಳೀಯರು ಮನವಿ ಮಾಡುತ್ತಿದ್ದಾರೆ.
ಮಂಗಳೂರು ಕಂಬಳ ವಾರ್ಡ್ ನಲ್ಲಿ ಕಂಡು ಬಂದ ದೃಶ್ಯ