Advertisement

ರಸ್ತೆಯಲ್ಲೇ ಹರಿಯುವ ಚರಂಡಿ ನೀರು

11:17 PM Jun 11, 2019 | sudhir |

ಸಿದ್ದಾಪುರ: ಮಳೆಯೊಂದಿಗೆ ಸಿದ್ದಾಪುರದಲ್ಲಿ ಈ ಬಾರಿ ಸಂಕಷ್ಟದ ಸುರಿಮಳೆಯೂ ಖಂಡಿತ. ಮಳೆಗಾಲ ಪೂರ್ವದಲ್ಲಿ ನಡೆಸಬೇಕಿದ್ದ ಚರಂಡಿ ಹೂಳೆತ್ತುವ ಕಾಮಗಾರಿ ಯಾವ ಭಾಗದಲ್ಲೂ ನಡೆಸದ್ದರಿಂದ ಒಳಚರಂಡಿಯಲ್ಲಿ ಕೊಳಚೆ ತುಂಬಿ ಗಬ್ಬೆದ್ದು ನಾರುತ್ತಿದೆ. ಜತೆಗೆ ಮಳೆ ನೀರು ರಸ್ತೆಗೆ ನುಗ್ಗಿ ಸಮಸ್ಯೆ ಜಟಿಲವಾಗುವ ಸಾಧ್ಯತೆ ಹೆಚ್ಚಿದೆ.

Advertisement

ಚರಂಡಿಯಲ್ಲಿ ಬೆಳೆದ ಕಳೆ
ಚರಂಡಿ ನಿರ್ವಹಣೆ ಇಲ್ಲದಿರುವುದರಿಂದ ಕಳೆ ಬೆಳೆದಿದೆ. ಕೆಲವು ಕಡೆಗಳಲ್ಲಿ ಚರಂಡಿ ಮೇಲೆ ಹಾಕಿರುವ ಸಿಮೆಂಟ್‌ ಹಲಗೆ ಕುಸಿದು ಬಿದ್ದಿದೆ. ಬಸ್‌ ನಿಲ್ದಾಣದ ಬಲ ಭಾಗದ ಚರಂಡಿಯಲ್ಲಿ ಹೂಳು ತುಂಬಿ, ಮೊದಲ ಮಳೆಗೆ, ನೀರು ಹೊರಗೆ ಹರಿದಿದೆ. ಪಕ್ಕದಲ್ಲಿರುವ ರಿಕ್ಷಾ ನಿಲ್ದಾಣ ಹಿಂಭಾಗ ಕಳೆ ಬೆಳೆದ ಪರಿಣಾಮ ಕೊಳಚೆ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗುತ್ತಿ¤ವೆ. ಪರಿಸರ ವಾಸನೆ ಬೀರುತ್ತಿದೆ.

ರೋಗ ಭೀತಿ
ನೀರು ಹರಿದು ಹೋಗದೆ ಇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಜನರನ್ನು ಕಾಡುತ್ತಿದೆ. ಬಸ್‌ ನಿಲ್ದಾಣದ ಮುಂಭಾಗ ಹಾಗೂ ಕಡ್ರಿ ರಸ್ತೆ ಒಳ ಚರಂಡಿಯಲ್ಲಿ ಹೂಳು ತುಂಬಿ ಕೊಳಚೆ ನೀರು ಸಂಗ್ರಹವಾಗಿದೆ. ಗಣೇಶ ದರ್ಶನ್‌ ಹೋಟಲ್‌ ಮುಂಭಾಗ, ಗಿರಿಜಾ ಟೆಕ್ಸ್‌ಟೈಲ್ಸ್‌, ಕಾಮತ್‌ ಹಾರ್ಡ್‌ವೇರ್‌ ಮತ್ತು ಸದಾನಂದ ಭಟ್‌ ಅಂಗಡಿಯ ಮುಂಭಾಗ ಕೊಳಚೆ ತುಂಬಿದೆ. ದುರ್ಗಾ ಕಾಂಪ್ಲೆಕ್ಸ್‌ನ ಹಿಂಭಾಗವೂ ಕೊಳಚೆ ಸಂಗ್ರಹ ಕೇಂದ್ರವಾಗಿದೆ.

ಆರೋಗ್ಯ ಇಲಾಖೆ ಎಲ್ಲಿ?
ಕೊಳಚೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಸ್ಥಳೀಯರನ್ನು ಕಾಡುತ್ತಿದ್ದರೂ, ಆರೋಗ್ಯ ಇಲಾಖೆ ಮಾತ್ರ ಎಚ್ಚರಿಸುವ ಕೆಲಸ ಮಾಡುತ್ತಿಲ್ಲ. ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ಕೈಗೊಳ್ಳಬೇಕು ಎನ್ನುವುದು ಜನರ ಆಗ್ರಹ.

ಒಳಚರಂಡಿಯ ವಾಸನೆಯ ಬಗ್ಗೆ ದೂರುಗಳು ಬರುತ್ತಿವೆ. ಹೂಳೆತ್ತುವ ಕಾಮಗಾರಿ ಜೂನ್‌ ಪ್ರಥಮ ವಾರದಲ್ಲಿ ಶುರುಮಾಡಬೇಕಾಗಿತ್ತು. ಚರಂಡಿಯಲ್ಲಿರುವ ಕೊಳಚೆ ಮೇಲಕ್ಕೆತ್ತಲು ಕಾರ್ಮಿಕರು ಸಿಗದೆ ಇರುವುದರಿಂದ ಕಾಮಗಾರಿ ಕೂಡ ತಡವಾಗಿದೆ. ಮಳೆ ಆರಂಭವಾಗುತ್ತಿರುವುದರಿಂದ ಕೂಡಲೆ ಕಾಮಗಾರಿ ಶುರುಮಾಡುತ್ತೇವೆ.
-ಸತೀಶ್‌ ನಾಯ್ಕ ಪಿಡಿಒ, ಗ್ರಾ. ಪಂ. ಸಿದ್ದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next