ಬಂಟ್ವಾಳ: ತಡವಾದರೂ ಮಳೆ ಬಂತು. ಈ ಬಾರಿಯೂ ಬಿ.ಸಿ. ರೋಡ್ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಹರಿಯಲಾಗದೆ ತುಂಬಿಕೊಂಡು ಕೃತಕನೆರೆ ಸೃಷ್ಟಿಯಾಗಿದೆ. ಅಸಮರ್ಪಕ ಕಾಂಕ್ರೀಟ್, ಚರಂಡಿಗೆ ನೀರು ಹರಿಯಲು ಎಲ್ಲೂ ಅವಕಾಶ ಇಡದಿರುವುದು, ಒಳ ಚರಂಡಿಗೆ ಸೂಕ್ತ ಸಂಪರ್ಕ ಕಲ್ಪಿಸದೇ ಇರುವುದರಿಂದ ಮಳೆ ನೀರು ಸರಾಗವಾಗಿ ಹರಿ ಯಲು ಅಡ್ಡಿಯಾಗುತ್ತಿದೆ. ಕಳೆದ ಮಳೆಗಾಲದಲ್ಲಿಯೂ ಈ ಪರಿಸರದಲ್ಲಿ ಇದೇ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಮಳೆಗಾಲ ಆರಂಭವಾಗುವ ಮುನ್ನವೇ ಇಲಾಖೆ ಎಚ್ಚೆತ್ತುಕೊಂಡು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕಿತ್ತು.
ಬಂಟ್ವಾಳ ಪುರಸಭೆಯ ಸುಪರ್ದಿ ಯಲ್ಲಿರುವ ಈ ಸರ್ವಿಸ್ ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡುವ ಬಗ್ಗೆ ಕಳೆದ ಮಾರ್ಚ್-ಎಪ್ರಿಲ್ನಲ್ಲಿ ವಿವರವಾದ ವರದಿ ಪ್ರಕಟವಾಗಿತ್ತು. ಮಳೆಗಾಲ ತಡವಾಗಿ ಆರಂಭವಾದರೂ ಸುರಿಯುವ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆಯನ್ನು ಇನ್ನೂ ಕಲ್ಪಿಸಲು ಸಾಧ್ಯವಾಗಿಲ್ಲ.
ವಿವಿಧೆಡೆಗಳಿಂದ ಬರುವ ಬಸ್‌ಗಳು ಪ್ರಯಾಣಿಕರನ್ನು ಇಳಿಸಿಸುವುದು ಇದೇ ಸ್ಥಳದಲ್ಲಿ. ಮಹಿಳೆಯರು, ಮಕ್ಕಳು, ಹಿರಿಯರು ರಸ್ತೆಯಲ್ಲಿ ಇರುವ ನೀರಿನ ಎತ್ತರ ತಿಳಿಯದೆ ಬಟ್ಟೆ ಎತ್ತಿಕೊಂಡು ನಡೆಯಬೇಕು. ಕೊಳಕು ಕೆಸರು ನೀರಿನಲ್ಲಿ ಕಾಲು ಇಡುವುದೇ ವಾಕರಿಕೆ ಬರುವಂತಿರುತ್ತದೆ. ಮಳೆಗಾಲ ಆರಂಭವಾಗುವ ಮುನ್ನವೇ ಚರಂಡಿ ಕೆಲಸ ಮಾಡಿದ್ದರೆ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಸರ್ವೀಸ್ ಬಸ್ ನಿಲ್ದಾಣದಲ್ಲಿ ನೀರು ನಿಂತು ಕೃತಕ ನೆರೆಯಂತಾಗುತ್ತದೆ. ಬಸ್ ನಿಲ್ಲಿಸಲು ಅಥವಾ ಪ್ರಯಾಣಿಕರು ಬಸ್‌ಗೆ ಹತ್ತಿ-ಇಳಿಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಪುರಸಭೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದೇ ಎಂದು ಜನ ಕಾದಿದ್ದಾರೆ.
ಚರಂಡಿ ನಿರ್ವಹಣೆಗೆ ಸೂಚನೆ
ಬಿ.ಸಿ. ರೋಡ್ ಸರ್ವೀಸ್ ರಸ್ತೆಯಲ್ಲಿ ಮಳೆಯ ನೀರು ಹರಿದು ಹೋಗುವಲ್ಲಿ ಆಗಿರುವ ಸಮಸ್ಯೆ ಗಮನಿಸಲಾಗಿದೆ. ಬೇಸಗೆಯಲ್ಲಿ ಚರಂಡಿ ದುರಸ್ತಿ, ರಸ್ತೆ ಕಾಂಕ್ರೀಟ್ ಕಾಮಗಾರಿ ಸಂದರ್ಭ ಮಣ್ಣು, ಮರಳು, ಪ್ಲಾಸ್ಟಿಕ್ ತ್ಯಾಜ್ಯಗಳು ಬದಿಯಲ್ಲಿ ಸಿಕ್ಕಿಕೊಂಡು ನೀರು ವೇಗವಾಗಿ ಬಸಿದು ಹೋಗುವುದಕ್ಕೆ ಸಾಧ್ಯವಾಗಿಲ್ಲ. ಅದನ್ನು ತೆರವು ಮಾಡುವ ಕ್ರಮವನ್ನು ಮಾಡಲಾಗುವುದು. ಚರಂಡಿ ದುರಸ್ತಿಯನ್ನು ನಿರ್ವಹಿಸುವುದಕ್ಕೆ ಸೂಚನೆ ನೀಡಲಾಗಿದೆ.
- ಡೊಮೆನಿಕ್ ಡಿ’ಮೆಲ್ಲೊ, ಎಂಜಿನಿಯರ್, ಬಂಟ್ವಾಳ ಪುರಸಭೆ