Advertisement
ಇಷ್ಟು ವರ್ಷದಲ್ಲಿ ಯಾವ ಜನಪ್ರತಿನಿಧಿ ಮಾಡದಂತಹ ಕೆಲಸವನ್ನು ಈಗಿನ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾಡಿದ್ದಾರೆ. ಅದೆಂದರೆ, ಮಳೆಗಾಲದಲ್ಲಿ ನೀರು ಹರಿಯುವ ತೋಡುಗಳ ಹೂಳೆತ್ತುವ ಕಾರ್ಯ. ಇದೀಗ ಕೊಟ್ಟಾರಚೌಕಿಯಿಂದ 4ನೇ ಮೈಲಿನವರೆಗೆ ತೋಡುಗಳು ತುಂಬಾ ಚೆನ್ನಾಗಿ ಕಾಣಿಸುತ್ತಿವೆೆ. ಆದರೆ ಹೆಚ್ಚಿನ ಕಡೆಗಳಲ್ಲಿ ತೋಡಿನ ಇಕ್ಕೆಲಗಳಲ್ಲಿ ಹೂಳನ್ನು ದಂಡೆಯ ಮೇಲೆ ಹಾಗೆಯೇ ಬಿಟ್ಟಿದ್ದಾರೆ. ಅದು ಮುಂದಿನ ಒಂದೇ ಮಳೆಗೆ ಪುನಃ ತೋಡಿಗೆ ಬಿದ್ದು ನೀರು ಹರಿಯಲು ಅಡಚಣೆಯಾಗಲಿದೆ. ಹಾಗಾಗಿ ತತ್‌ಕ್ಷಣವೇ ಅದನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಯವರು ಸೂಚಿಸಬೇಕು. ತೋಡು ಅಗಲ 20 ಅಡಿ ಇರಬೇಕಾದಲ್ಲಿ ಮನುಷ್ಯನ ದುರಾಸೆಯಿಂದ 6-7 ಅಡಿ ಮಾತ್ರ ಅಗಲ ಉಳಿದಿದೆ. ಇದನ್ನು ಕೂಡ ಸರಿಪಡಿಸಬೇಕು.-ನಾಗರಿಕ, ಮಂಗಳೂರು
ನಗರದ ಬಹುತೇಕ ತೋಡು ಚರಂಡಿ ಕ್ಲೀನ್ ಮಾಡಿದ್ದಾರೆ ಎಂದು ವರದಿಯಾಗುತ್ತಿದೆ. ಆದರೆ, ಸದ್ಯ ಬಲ್ಲಾಳ್‌ಬಾಗ್‌ನಲ್ಲಿರುವ ತೋಡಿನ ಸ್ಥಿತಿಯನ್ನು ನೋಡಿದರೆ ಕ್ಲೀನ್ ಮಾಡಿದ್ದು ಹೌದಾ ಎಂಬ ಪ್ರಶ್ನೆ ಮೂಡುವಂತಾಗಿದೆ. ಇಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳೇ ತುಂಬಿಕೊಂಡಿದ್ದು, ಗಲೀಜು ಸೃಷ್ಟಿಯಾಗಿದೆ. ಇದ್ದವರೆಲ್ಲ ತ್ಯಾಜ್ಯಗಳನ್ನು ಇಲ್ಲಿಗೆ ಬಿಸಾಕುವುದರಿಂದ ಈ ತೋಡು ತ್ಯಾಜ್ಯಗುಂಡಿಯಾಗಿದೆ. ರಿಲಾಯನ್ಸ್ ಪೆಟ್ರೋಲ್ ಪಂಪ್ ಬಳಿಯ ತೋಡಿನಲ್ಲಿ ಈ ಸಮಸ್ಯೆ ಜಾಸ್ತಿಯೇ ಇದೆ. ಸಂಬಂಧಪಟ್ಟವರು ಇನ್ನಾದರೂ ಇದರ ಬಗ್ಗೆ ಗಮನಹರಿಸಲಿ.
-ನಾಗರಿಕರು, ಬಲ್ಲಾಳ್‌ಬಾಗ್ ತೋಡಲ್ಲಿ ಹರಿಯುತ್ತಿದೆ ಡ್ರೈನೇಜ್ ನೀರು
ಮಾರ್ನಮಿಕಟ್ಟೆ ಜೆಪ್ಪು ಕುಡುಪಾಡಿಯ ತೋಡಿಗೆ ಯಾವುದೋ ಫ್ಲ್ಯಾಟ್‌ನವರು ಡ್ರೈನೇಜ್ ನೀರನ್ನು ಬಿಟ್ಟಿದ್ದಾರೆ. ಇದರಿಂದಾಗಿ ಇಲ್ಲಿನ ಸುತ್ತಮುತ್ತಲಿನ ಬಾವಿಯಲ್ಲಿ ಕುಡಿಯುವ ನೀರಿಗೆ ಸಂಚಕಾರ ಉಂಟಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಇನ್ನೂ ಪ್ರತಿಕ್ರಿಯೆ ದೊರಕಿಲ್ಲ. ಸದ್ಯ ನಗರದಲ್ಲಿ ನೀರಿಲ್ಲ ಎಂಬ ಆತಂಕ ಇರುವಾಗ ನಮ್ಮ ವ್ಯಾಪ್ತಿಯಲ್ಲಿ ಬಾವಿ ಇದೆಯಾದರೂ ಅದೂ ಕೂಡ ಬಳಕೆಯಾಗದ ಸ್ಥಿತಿಗೆ ಬಂದಿದೆ. ಮಳೆ ನೀರು ಹರಿಯಬೇಕಾದ ತೋಡಿನಲ್ಲಿ ಒಳಚರಂಡಿ ನೀರು ಹರಿದು ಈ ಭಾಗದಲ್ಲಿ ವಾಸನೆ ಕೂಡ ತುಂಬಿಕೊಂಡಿದೆ. ಜತೆಗೆ ಕುಡಿಯುವ ನೀರು ಕೂಡ ಹಾಳಾಗಿದೆ. ದಯವಿಟ್ಟು ಇನ್ನಾದರೂ ಸಂಬಂಧಪಟ್ಟವರು ಈ ಸಮಸ್ಯೆ ಪರಿಹರಿಸಿಕೊಡಲಿ.
-ಗೋಪಾಲಕೃಷ್ಣ, ಜೆಪ್ಪು ಕುಡುಪಾಡಿ
Related Articles
ಮಂಗಳೂರು ಸ್ಮಾರ್ಟ್ ಸಿಟಿ ಎಂದೆಲ್ಲ ಹೇಳುವ ಈ ಕಾಲದಲ್ಲಿ ರಿಕ್ಷಾಗಳ ಮೀಟರ್‌ಗಳು ಮಾತ್ರ ಇನ್ನೂ ಹಳೆಯ ಕಾಲದ್ದೇ ಇದೆ. ನಗರದ ಬಹುತೇಕ ರಿಕ್ಷಾದವರು ಡಿಜಿಟಲ್ ಮೀಟರ್ ಅಳವಡಿಸಿದ್ದರೂ ಕೆಲವು ರಿಕ್ಷಾದವರು ಮಾತ್ರ ಇನ್ನೂ ಹಳೆಯ ಕಾಲದ ಮೀಟರ್‌ನಲ್ಲಿಯೇ ರಿಕ್ಷಾ ಓಡಿಸುತ್ತಿದ್ದಾರೆ. ನಿಜಕ್ಕೂ ಮಂಗಳೂರಿನ ಸ್ಮಾರ್ಟ್‌ನೆಸ್‌ಗೆ ಇದು ಹೇಳಿಮಾಡಿದ್ದಲ್ಲ. ಹಳೆಯ ಮೀಟರ್‌ನಲ್ಲಿ ರೀಡಿಂಗ್ ಕೂಡ ಕಷ್ಟ. ಹೀಗಾಗಿ ಪ್ರಯಾಣಿಕರು- ರಿಕ್ಷಾದವರಿಗೂ ಗೊಂದಲ-ಮಾತುಕತೆಗೆ ಇದು ಕಾರಣವಾಗಿದ್ದೂ ಇದೆ. ಹೀಗಾಗಿ ಡಿಜಿಟಲ್ ಮೀಟರ್ ಅಳವಡಿಸದವರು ಇನ್ನಾದರೂ ಡಿಜಿಟಲ್ ಮೀಟರ್‌ಗೆ ಬದಲಾಗುವುದು ಉತ್ತಮ.
– ಪ್ರಯಾಣಿಕ, ಮಂಗಳೂರು
Advertisement
ಮೈದಾನ ರಸ್ತೆಯಲ್ಲಿ ಕಸದ ಕೊಂಪೆನಗರದಲ್ಲಿ ಕಸ ನಿರ್ವಹಣೆ ದೊಡ್ಡ ಸಮಸ್ಯೆಯಿಲ್ಲ ಎನ್ನುವುದು ಕೆಲವರ ಅಭಿಪ್ರಾಯ. ಆದರೆ, ನಗರದ ಕೆಲವು ಭಾಗಗಳನ್ನು ಪರಿಶೀಲಿಸಿದರೆ ಇಲ್ಲಿನ ವಾಸ್ತವ ಗೊತ್ತಾಗುತ್ತದೆ. ಒಂದೆರಡು ದಿನ ಕಸ ತೆಗೆಯದಿದ್ದರೆ ಇಲ್ಲಿ ಕಸದ ಪರ್ವತವೇ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಮೈದಾನ ಮೂರನೇ ಅಡ್ಡ ರಸ್ತೆ ವ್ಯಾಪ್ತಿಯಲ್ಲಿ ಮೂರು ದಿನ ಕಸ ಕ್ಲೀನಿಂಗ್ ಮಾಡದಿದ್ದ ಕಾರಣಕ್ಕೆ ಆದ ಕಥೆಯಿದೆ. ಬಹುತೇಕ ಈ ಭಾಗದಲ್ಲಿ ಕಸ ಬಿದ್ದು ಒಂದೆರಡು ದಿನವಾದ ಬಳಿಕವೂ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ಸ್ಥಳೀಯರಿಗೆ ಇದೊಂದು ನಿತ್ಯದ ಸಮಸ್ಯೆ. ಜತೆಗೆ, ದೂರದೂರಿನಿಂದ ಬರುವವರಿಗೆ ನಗರದ ಸ್ಥಿತಿಯನ್ನು ಬಿಚ್ಚಿಟ್ಟಂತಾಗುತ್ತದೆ.
-ಸ್ಥಳೀಯರು, ಸ್ಟೇಟ್‌ಬ್ಯಾಂಕ್ ಅರಸಲಚ್ಚಿಲ್‌ನಲ್ಲಿ ಚರಂಡಿ ಕ್ಲೀನ್ ಮಾಡಿ
ಕೂಳೂರು ಸಮೀಪದ ಅರಸಲಚ್ಚಿಲ್ ಕಾಂಪೌಂಡ್ ವ್ಯಾಪ್ತಿಯ ಮಳೆ ನೀರಿನ ಚರಂಡಿಯನ್ನು ಈ ಬಾರಿ ಮಳೆಗಾಲ ಸಮೀಪಿಸಿದರೂ ಇನ್ನೂ ಸ್ವತ್ಛ ಗೊಳಿಸಿಲ್ಲ. ಹೀಗಾಗಿ ಈ ಬಾರಿಯ ಮಳೆಗೆ ಇಲ್ಲಿ ನೆರೆ ನೀರು ಬರುವುದು ಗ್ಯಾರಂಟಿ ಎಂಬ ಆತಂಕ ಎದುರಾಗಿದೆ. ಕೂಳೂರು ಅಮೃತ ಸರಕಾರಿ ಶಾಲೆಯ ಕ್ರಾಸ್ ರಸ್ತೆ ಹತ್ತಿರ, ಎನ್‌ಎಚ್ 66 ಬದಿಯ ಚರಂಡಿ ಸಂಪೂರ್ಣ ಹುಲ್ಲುಮಣ್ಣಿನಿಂದ ಮುಚ್ಚಿಹೋಗಿದೆ. ಇಲ್ಲಿ ಮಳೆ ನೀರು ಹರಿಯಲು ಆಗದೆ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಕಳೆದ ಮಳೆಗಾಲದಲ್ಲಿ ಇಲ್ಲಿ ಮಳೆ ಸಮಸ್ಯೆ ಬಹುವಾಗಿ ಕಾಡಿತ್ತು.
-ರವೀಂದ್ರ, ಅರಸಲಚ್ಚಿಲ್ ಗಲೀಜು ಹುಟ್ಟಿಸಿದ ತೋಡು
ನೀರು ಹೋಗುವ ಚರಂಡಿ ಈಗ ಸಿಟಿ ಆಸ್ಪತ್ರೆಯ ಪಕ್ಕದಲ್ಲಿ ಗಬ್ಬೆದ್ದು ಹೋಗಿದೆ. ಅಕ್ಕಪಕ್ಕದಲ್ಲಿದ್ದವರು ಅನ್ನ, ತಿಂಡಿ ಸಹಿತ ಎಲ್ಲ ರೀತಿಯ ಕಸಕಡ್ಡಿಗಳನ್ನು ಇದೇ ತೋಡಿಗೆ ಬಿಸಾಡುವುದರಿಂದ ಇಲ್ಲಿ ಗಲೀಜು ತುಂಬಿಹೋಗಿದೆ. ಸ್ವತ್ಛವಾದ ಮಂಗಳೂರಿಗೆ ಇಂತಹುದು ನರಕದ ದರ್ಶನ ಮಾಡುವಂತಿದೆ. ಸುಶಿಕ್ಷಿತ ಜನರು ತ್ಯಾಜ್ಯ, ಕಸಕಡ್ಡಿಗಳು ಎಲ್ಲೆಂದರಲ್ಲಿ ಎಸೆಯದೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಎಲ್ಲ ತ್ಯಾಜ್ಯವೂ ತೋಡಿಗೆ ಎಸೆಯುವುದರಿಂದ ಸೊಳ್ಳೆ ಉತ್ಪತ್ತಿ ತಾಣವಾಗಿದ್ದು, ಸಾಂಕ್ರಾಮಿಕ ರೋಗಗಳನ್ನು ಹರಡುವ ಭೀತಿ ಎದುರಾಗಿದೆ. ಆದರೆ ಮಹಾನಗರ ಪಾಲಿಕೆಯವರು ಮಾತ್ರ ಇದನ್ನು ನೋಡಿಯೂ ನೋಡದಂತಿದ್ದಾರೆ.
ಸ್ಥಳೀಯರು, ಕದ್ರಿ