Advertisement

ರೈತನ ಹೊಲಕ್ಕೆ ನುಗ್ಗಿದ ಚರಂಡಿ ನೀರು

02:51 PM Apr 04, 2022 | Team Udayavani |

ರಬಕವಿ-ಬನಹಟ್ಟಿ: ಕಳೆದ ಒಂದು ತಿಂಗಳಿಂದ ರಬಕವಿ- ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಮಪುರ ಹೊಸೂರ ಮಧ್ಯ ಭಾಗದಲ್ಲಿರುವ ಎರಡು ಎಕರೆ ಕಬ್ಬಿನ ಗದ್ದೆಯಲ್ಲಿ ಚರಂಡಿ ನೀರು ನುಗ್ಗಿ ಹರಿದು ಹೋಗಲಾರದೆ ನಿಂತಲ್ಲೇ ನಿಂತ ಪರಿಣಾಮ ಕಬ್ಬು ಸಂಪೂರ್ಣ ಹಾಳಾಗಿದೆ. ನೀರು ಹೆಚ್ಚಾಗಿ ಕೊಳೆತು ಹೋಗಿದ್ದರಿಂದ ರೈತ ಕಣ್ಣೀರಿಡುವಂತಾಗಿದೆ.

Advertisement

ಜನರು ಬಳಸಿದ ನೀರು ಚರಂಡಿ ಮೂಲಕ ಹರಿದು ಬಂದು ರಾಮಪುರ ರೈತ ತಮ್ಮಣ್ಣಿ ಮಾಯನ್ನವರ ಅವರಿಗೆ ಸೇರಿದ ಎರಡು ಎಕರೆ ಕಬ್ಬಿನ ಗದ್ದೆಗೆಯೊಳಗೆ ನಿಲ್ಲುತ್ತಿದೆ. ಇದರಿಂದ ನಮಗೆ ತೊಂದರೆಯಾಗಿದೆ ಎಂದು ಹಲವು ಬಾರಿ ನಗರಸಭೆಗೆ ಭೇಟಿ ನೀಡಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಚರಂಡಿ ನೀರು ಲೋಕೋಪಯೋಗಿ ಇಲಾಖೆಯಡಿಯ ರಸ್ತೆ ಕೆಳ ಬದಿಯಲ್ಲಿರುವ ನಾಲೆ ಮುಖಾಂತರ ಹೋಗುತ್ತಿತ್ತು. ಪಕ್ಕದ ಜಮೀನಿನವರು ಈ ಚರಂಡಿ ನೀರನ್ನು ಬಾವಿಯಲ್ಲಿ ಸಂಗ್ರಹಿಸಿಕೊಂಡು ತಮ್ಮ ಹೊಲಗದ್ದೆಗೆ ಬಳಸಿಕೊಳ್ಳುತ್ತಿದ್ದರು. ಈಗ ಆ ಜಮೀನನ್ನು ಪ್ಲಾಟ್‌ ಮಾಡಲು ಮಾರಾಟ ಮಾಡಿದ್ದರಿಂದ ಆ ಬಾವಿ ಮುಚ್ಚಿ ನೀರು ಹೋಗುವ ನಾಲೆಗೆ ಅಡ್ಡಲಾಗಿ ಗೋಡೆ ನಿರ್ಮಿಸಿದ್ದರಿಂದ ನೀರು ಗದ್ದೆಗೆ ನುಗ್ಗಿದೆ ಎನ್ನುತ್ತಾರೆ ರೈತ ತಮ್ಮಣ್ಣಿ ಮಾಯನ್ನವರ.

ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಇದು ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಬರುವುದರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇವೆ. ನೀರು ಸರಾಗವಾಗಿ ಹೋಗಲು ರಸ್ತೆಗೆ ಅಡ್ಡಲಾಗಿ ಕೆಳಭಾಗದಲ್ಲಿ ನಾಲೆಯಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಲೆ ಗುರುತಿಸಿ ಕೊಟ್ಟರೆ ಅದರ ನಿರ್ವಹಣೆಗಾಗಿ ನಗರಸಭೆ ವತಿಯಿಂದ 27 ಲಕ್ಷ ಹಣವನ್ನು ಈಗಾಗಲೇ ಕಾಯ್ದಿರಿಸಿದ್ದೇವೆ. ತಕ್ಷಣ ಕಾಮಗಾರಿ ಪ್ರಾರಂಭಿಸಿ ರೈತರಿಗಾಗುವ ತೊಂದರೆಗೆ ಸ್ಪಂದಿಸುತ್ತೇವೆ. –ಶ್ರೀನಿವಾಸ ಜಾಧವ, ಪೌರಾಯುಕ್ತರು ನಗರಸಭೆ ರಬಕವಿ-ಬನಹಟ್ಟಿ

ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ರಸ್ತೆ ರಾಮಪುರ ಮಾರ್ಗವಾಗಿ ಹೋಗಿದ್ದು. ಸಮಸ್ಯೆ ಉದ್ಬವಿಸಿದ ಸ್ಥಳದಲ್ಲಿನ ರಸ್ತೆ ತಳಭಾಗದಲ್ಲಿ ನಾಲೆಯಿದೆ. ಅದರ ಮುಖಾಂತರ ನೀರು ಈ ಮೊದಲಿನಿಂದಲೂ ಹರಿದು ಹೋಗುತ್ತಿತ್ತು. ಯಾರು ತಡೆದಿದ್ದಾರೆ ಎನ್ನುವುದರ ಕುರಿತು ವಿಚಾರಿಸುತ್ತೇವೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುತ್ತೇವೆ. ನಗರಸಭೆ ಅಧಿ ಕಾರಿಗಳು ನಗರದ ಜನ ಬಳಸಿದ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದಿಸಿ ರೈತರ ಗದ್ದೆಗೆ ನೀರು ಹರಿದು ಹೋಗದಂತೆ ಸರಿಪಡಿಸುತ್ತೇವೆ. –ಶಂಕರ ಬಂಡಿವಡ್ಡರ, ಎಇಇ ಜಮಖಂಡಿ ಪಿಡಬ್ಲೂಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next