Advertisement

ಬರಿದಾಗುತ್ತಿರುವ ಹೊಳೆ ಒಡಲು; ಕೃಷಿ, ಕುಡಿಯುವ ನೀರಿಗೆ ತತ್ವಾರ ಭೀತಿ !

11:59 PM Mar 26, 2019 | sudhir |

ಕುಂಬಳೆ: ನಲ್ವತ್ತನಾಲ್ಕು ನದಿಗಳು ಹರಿಯುತ್ತಿರುವ ಕೇರಳ ರಾಜ್ಯದಲ್ಲಿ ನೀರಿನ ಬರ ವರ್ಷದಿಂದ ವರ್ಷಕ್ಕೆ ಎದುರಾಗುತ್ತಿದೆ. ದಿನೇ ದಿನೇ ಬಿಸಿಲ ಧಗೆ ಏರಿ ತಾಪಮಾನದಿಂದ ಕೆಲವರ ಸಾವುನೋವಿಗೆ ಕಾರಣವಾಗುತ್ತಿದೆ. ಅತಿ ಹೆಚ್ಚು ಮಳೆ ಸುರಿಯುವ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ನೀರಿನ ಕೊರತೆ ಕಾಡುತ್ತಿದೆ. ಒಂದು ಡಜನ್‌ ಹೊಳೆಗಳು ಹರಿಯುವ ಕಾಸರಗೋಡು ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಬರದ ಭೀತಿ ಪ್ರತಿವರ್ಷ ಬರುತ್ತಿದೆ.

Advertisement

ಇದರಿಂದ ಕೃಷಿಕರು ಕಂಗಾಲಾಗಿದ್ದಾರೆ. ಪ್ರಾಣಿಪಕ್ಷಿ ಸಂಕುಲ ನೀರಿನ ದಾಹಕ್ಕೆ ಹಾತೊರೆಯುವಂತಾಗಿದೆ. ವಾಹನಗಳ ಮೂಲಕ ಕುಡಿಯುವ ನೀರು ವಿತರಣೆ ಮಾಡಿ ಕೇರಳ ಸರಕಾರ ಹೇರಳ ನಿಧಿ ಪೋಲು ಮಾಡುವುದಲ್ಲದೆ ಶಾಶ್ವತ ನೀರಿನ ಪರಿಹಾರಕ್ಕೆ ಯೋಜನೆ ಇಲ್ಲವೆಂಬ ಆರೋಪ ಕೇಳಿ ಬರುತ್ತಿದೆ.

ನದಿಯಲ್ಲಿ ನೀರಿನ ಹರಿವಿಲ್ಲ
ಜಿಲ್ಲೆಯ ಹೆಚ್ಚಿನ ನದಿಗಳ ಹರಿವು ಕ್ಷೀಣಿಸಿದೆ. ಹೊಳೆಗಳಲ್ಲಿ ಮರಳು ತುಂಬಿ ನೀರಿನ ಪಾತ್ರ ಮಾಯವಾಗಿದೆ.ಇದರಿಂದ ಮಳೆಗಾಲದ ನೀರು ಹೊಳೆಯ ಮೂಲಕ ಸರಾಗವಾಗಿ ಹರಿಯದೆ ನದಿ ಇಕ್ಕೆಲಗಳ ತೋಟ ಗದ್ದೆಗಳಿಗೆ ನುಗ್ಗಿ ಹರಿಯುವುದರಿಂದ ಕೃಷಿಕರ ಬೆಳೆ ನಷ್ಟವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಿಲ್ಲದಾಗಿದೆ.

ಉಚಿತ ವಿದ್ಯುತ್‌ ದುರುಪಯೋಗ
ಸರಕಾರ ಕೃಷಿಗೆ ನೀಡಿದ ಉಚಿತ ವಿದ್ಯುತ್‌ ಸವಲತ್ತು ದುರುಪಯೋಗದ ಆರೋಪ ಬಲವಾಗಿದೆ. ಹೊಳೆಯ ನೀರನ್ನು ರಾತ್ರಿ ಹಗಲೆನ್ನದೆ ಪಂಪ್‌ ಮೂಲಕ ಹರಿಸಿ ನೀರಿನ ಅಪವ್ಯಯ ಮಾಡುವವವರ ಸಂಖ್ಯೆ ಹೆಚ್ಚಾಗಿದೆ.ಕಾಸರಗೋಡು ಜಿಲ್ಲಾಧಿಕಾರಿಯವರು ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವರು.ಆದರೆ ರಾಜಕೀಯ ಒತ್ತಡದಲ್ಲಿ ಡಿ.ಸಿ.ಅವರಿಗೆ ಇದು ಸಾಧ್ಯವೇ ಎಂಬ ಸಂಶಯ ಬಲವಾಗಿದೆ.

ಜಲನಿಧಿಯ ಮೂಲಕ ರಾಷ್ಟ್ರೀಯ ನಷ್ಟ
ಮನೆ ಮನೆಗಳಿಗೆ ಕುಡಿಯುವ ನೀರನ್ನು ತಲಪಿಸುವ ಜಲನಿಧಿ ಯೋಜನೆಯನ್ನು ಕೇಂದ್ರ ರಾಜ್ಯ ಸರಕಾರಗಳು ಮಂಜೂರು ಮಾಡಿ ನಿಧಿಯನ್ನು ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸ್ಥಳೀಯಾಡಳಿತಗಳಿಗೆ ನೀಡಿವೆ. ಆದರೆ ಹೆಚ್ಚಿನ ಕಡೆಗಳಲ್ಲಿ ಕಳಪೆ ಕಾಮಗಾರಿಯಿಂದಾಗಿ ಈ ಯೋಜನೆಯ ಮೂಲಕ ನೀರು ಹರಿಯದೆ ಸರಕಾರದ ಕೋಟಿಗಟ್ಟಲೆ ನಿಧಿ ಪೋಲಾಗಲು ಕಾರಣವಾಗಿದೆ.ಆದರೆ ಇದರತ್ತ ಗಮನಹರಿಸಲು ಯಾವ ಚುನಾಯಿತರಿಗೂ ಸಮಯವಿಲ್ಲದಾಗಿದೆ.

Advertisement

ಶಿಥಿಲ ಶಿರಿಯಾ ಅಣೆಕಟ್ಟು
ಕಳೆದ ಸುಮಾರು 70 ವರ್ಷಗಳಿಂದ ಪುತ್ತಿಗೆ ಮತ್ತು ಪೈವಳಿಕೆ ಪಂಚಾಯತ್‌ ವ್ಯಾಪ್ತಿಯ ಕೆಲವು ಪ್ರದೇಶಗಳಿಗೆ ನೀರು ಪೂರೈಸುತ್ತಿದ್ದ ಧರ್ಮತ್ತಡ್ಕ, ಮಣಿಯಂಪಾರೆಯ ಶಿರಿಯಾ ಹೊಳೆ ಅಣೆಕಟ್ಟು ಪ್ರಸ್ತುತ ಶಿಥಿಲಾವಸ್ಥೆಯಲ್ಲಿದೆ.

ಇದರಿಂದ ಕೆಲವು ವರ್ಷಗಳಿಂದ ಹೆಚ್ಚಿನ ನೀರಿನ ಸಂಗ್ರಹ ಮತ್ತು ಸಮರ್ಪಕ ನೀರು ಪೂರೈಕೆ ತೊಡಕಾಗಿದೆ.

ಶಿರಿಯಾ ಹೊಳೆ ಅಣೆಕಟ್ಟೆಯಲ್ಲಿ ಹೂಳು ತುಂಬಿ ನೀರಿನ ಪ್ರಮಾಣ ಕುಸಿಯುತ್ತಿದ್ದರೆ ಮತ್ತೂಂದೆಡೆ ಹದಗೆಟ್ಟ ಕ್ರಸ್ಟ್‌ ಗೇಟುಗಳ ಮುಖಾಂತರ ನೀರು ಪೋಲಾಗುತ್ತಿದೆ. ಮಳೆಗಾಲದಲ್ಲಿ ನೀರಿನ ಜತೆ ಹರಿದು ಬರುವ ಮರದ ದಿಮ್ಮಿಗಳು ಅಣೆಕಟ್ಟೆಯ ಮರದ ಹಲಗೆಗಳ ಮಧ್ಯೆ ನಿಂತು ಬಿರುಕು ಸƒಷ್ಠಿಯಾಗಿ ನೀರಿನ ಸೋರಿಕೆಗೆ ಕಾರಣವಾಗಿದೆ. ಅರ್ಧ ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಅಣೆಕಟ್ಟಿನ ರಕ್ಷಣೆಗೆ ಇಲ್ಲಿನ ಚುನಾಯಿತ ಜನಪ್ರತಿನಿಧಿಗಳು ಶ್ರಮಿಸುತ್ತಿಲ್ಲವೆಂಬ ಆರೋಪ ಪ್ರದೇಶವಾಸಿಗಳದು.

ವಿಶಾಲ ದೂರ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯದ ಶಿರಿಯಾ ಅಣೆಕಟ್ಟು ನಿರ್ಲಕ್ಷಕ್ಕೆ ಒಳಗಾಗಿದೆ. ಅಣೆಕಟ್ಟಿನಲ್ಲಿ ತುಂಬಿರುವ ಮರಳನ್ನು ತೆರವುಗೊಳಿಸಿ, ಅಣೆಕಟ್ಟೆಯ ನೀರು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಕೃಷಿ ಮತ್ತು ನೀರಾವರಿ ಇಲಾಖೆ ಕೈಗೊಂಡಿಲ್ಲ. ಪ್ರಕೃತ ಕೇವಲ ಪ್ರದೇಶಗಳಿಗಷ್ಟೇ ಈ ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತಿದೆ. ನೀರು ಹರಿಯುವ ಕಾಲುವೆ ಸನಿಹದಲ್ಲೇ ಕಾಡು ಪೊದೆಗಳು ಬೆಳೆದು ನಿಂತಿವೆ.

ನೀರಾವರಿಗೆ ಅಗತ್ಯವಾದ ನೀರನ್ನು ಪೂರೈಸುವ ಸಾಮರ್ಥ್ಯವಿರುವ ಅಣೆಕಟ್ಟು ಸಮರ್ಪಕ ನಿರ್ವಹಣೆಯಿಲ್ಲದೆ ನಿಷ್ಪ್ರಯೋಜಕವಾಗುತ್ತಿದೆ.

ಬೇಸಗೆ ಸಮೀಪಿಸುತ್ತಿದ್ದಂತೆ ನೀರಿನ ಹರಿವು ಕಡಿಮೆಯಾಗಿ ನದಿಗಳು ಮರುಭೂಮಿಯಂತಾಗುತ್ತವೆ. ವರ್ಷಗಳ ಹಿಂದೆ ಆರಂಭಿಸಿದ ಜಲನಿಧಿ ಯೋಜನೆಗಳು ಅಪೂರ್ಣಗೊಂಡಿದ್ದು ಹಲವೆಡೆ ಕಾಮಗಾರಿ ಸಮರ್ಪಕವಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪುತ್ತಿಗೆ, ಕುಂಬಳೆ ಮತ್ತು ಪೈವಳಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಹರಿಯುವ ಶಿರಿಯಾ ಅಣೆಕಟ್ಟಿನ ನೀರಿನ ಹರಿವು ಕಡಿಮೆ ಯಾಗುತ್ತಿದ್ದು, ಅಣೆಕಟ್ಟಿನಲ್ಲಿ ಮರಳು ಸಹಿತ ಹೂಳು ತುಂಬಿದ ಪರಿಣಾಮ ನೀರಿನ ಶೇಖರಣೆಯ ಪ್ರಮಾಣ ತೀರಾ ಕಡಿಮೆ ಯಾಗಿದೆ. ಕೃಷಿ ಮತ್ತು ಕುಡಿನೀರಿನ ವಿನಿಯೋಗಕ್ಕಿರುವ ನೀರಿನ ಪ್ರಮಾಣ ಕುಂಠಿಗೊಳ್ಳುತ್ತಿರುದರಿಂದ ಕೃಷಿಕರು ಆತಂಕಕ್ಕೀಡಾಗಿದ್ದಾರೆ.

1951ರಲ್ಲಿ ಮದ್ರಾಸ್‌ ರಾಜ್ಯದ ಅಂಗವಾಗಿದ್ದ ಮಂಜೇಶ್ವರ ತಾಲೂಕಿನ ಧರ್ಮತ್ತಡ್ಕ ಬಳಿಯ ಶಿರಿಯಾ ಅಣೆಕಟ್ಟನ್ನು ಅಂದಿನ ಲೋಕೋಪಯೋಗಿ ಸಚಿವ ಎಂ. ಭಕ್ತವತ್ಸಲಂ ಉದ್ಘಾಟಿಸಿದ್ದರು. ಗಟ್ಟಿ ಕಗ್ಗಲ್ಲಿನಿಂದ ಕಟ್ಟಿದ ಅಣೆಕಟ್ಟು ಮುಂದಿನ ನಿರ್ವಹಣೆಯ ಅನಾಸ್ಥೆಯಿಂದ ಉಪಯೋಗ ಶೂನ್ಯವಾಗುತ್ತಿದೆ.ಅಣೆಕಟ್ಟನ್ನು ಮೇಲ್ದರ್ಜೆಗೇರಿಸಿ, ಹೂಳೆತ್ತಿ ಸಂರಕ್ಷಿಸಿದರೆ ಜಲನಿಧಿ ಕುಡಿಯುವ ನೀರು ಪೂರೈಕೆಗೂ ಇದು ಸಹಕಾರಿಯಾಗಲಿದೆ.

ಹಿಂದೆ ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿದ್ದು ಆದರೆ ಸೂಕ್ತ ನಿರ್ವಹಣೆಯಿಲ್ಲದ ಪ್ರಕೃತ ಹೆಚ್ಚಿನ ನೀರು ಸಂಗ್ರಹವಾಗುತ್ತಿಲ್ಲ. ವರ್ಷ ಕಳೆದಂತೆ ಅಣೆಕಟ್ಟು ಶಿಥಿಲವಾಗುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಅಣೆಕಟ್ಟನ್ನು ಸಂರಕ್ಷಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next