Advertisement

ಮಾನಸ ಸರೋವರ ಯಾತ್ರಿಗಳಿಗೆ ಡ್ರ್ಯಾಗನ್‌ ಬೆದರಿಕೆ!

03:45 AM Jun 28, 2017 | Harsha Rao |

ಬೀಜಿಂಗ್‌: ಸಿಕ್ಕಿಂ ಗಡಿಯಲ್ಲಿ ಭಾರತೀಯ ಯೋಧರ ಜತೆ ತಳ್ಳಾಟ ನಡೆಸಿ, ಪ್ರಚೋದಿಸುವ ವಿಫ‌ಲ ಯತ್ನ ನಡೆಸಿದ್ದ ಚೀನಾ ಈಗ ರಾಗ ಬದಲಿಸಿ, ಭಾರತೀಯ ಸೈನಿಕರ ಮೇಲೆಯೇ ಗೂಬೆ ಕೂರಿಸಿದೆ. ಅಷ್ಟೇ ಅಲ್ಲ, ಕೈಲಾಶ್‌ ಮಾನಸರೋವರ ಪ್ರವಾಸದಲ್ಲಿರುವ ನೂರಾರು ಯಾತ್ರಿಗಳನ್ನೇ ಬಂಧಿಯಾಗಿಸಿಕೊಂಡಿದೆ.

Advertisement

“ಭಾರತೀಯ ಯೋಧರೇ ಗಡಿಯಿಂದಾಚೆ ನುಗ್ಗಲು ಯತ್ನಿಸಿದ್ದರು. ನಮ್ಮ ಯೋಧರು ಅವರನ್ನು ತಡೆದಿದ್ದಾರೆ’ ಎಂದು ಆರೋಪಿಸಿರುವ ಚೀನಾ, “ಭಾರತ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಯಿಸಿಕೊಳ್ಳದೇ ಇದ್ದಲ್ಲಿ ಕೈಲಾಶ್‌ ಮಾನಸರೋವರ ಯಾತ್ರಿಗಳಿಗೆ ಪ್ರವೇಶ ಅವಕಾಶವನ್ನೇ ನೀಡಲು ಸಾಧ್ಯವಿಲ್ಲ’ ಎಂದು ಖಡಾಖಂಡಿತ ಅಭಿಪ್ರಾಯ ವ್ಯಕ್ತಪಡಿಸಿದೆ. ಯಾತ್ರಿಗಳ ಸಂಪರ್ಕ ಸೇತುವಾದ ನಾಥು ಲಾ ಪ್ರವೇಶ ದ್ವಾರವನ್ನೇ ಸಂಪೂರ್ಣ ಬಂದ್‌ ಮಾಡಿ, ಈ ಮೂಲಕ ಭಾರತಕ್ಕೆ ಪರೋಕ್ಷ ಬೆದರಿಕೆ ಹಾಕಿದೆ.

ಸಿಕ್ಕಿಂ ಸೆಕ್ಟರ್‌ ವ್ಯಾಪ್ತಿಯಲ್ಲಿನ ಕೈಲಾಶ್‌ ಮಾನಸರೋವರದ ಯಾತ್ರಿಗಳನ್ನು ಕಳೆದ ಹತ್ತು ದಿನಗಳ ಅವಧಿಯಲ್ಲಿ ನಾಥು ಲಾ ದ್ವಾರದ ಮೂಲಕ ಪ್ರವೇಶಿಸದಂತೆ ತಡೆದು ತೊಂದರೆ ಉಂಟು ಮಾಡಿದ್ದ ಚೀನಾ ಯೋಧರು, ಬಳಿಕ ಭಾರತೀಯ ಗಡಿಯಿಂದಾಚೆ ನುಗ್ಗುವ ಯತ್ನ ನಡೆಸಿದ್ದರು. ಎರಡು ಸೇನಾ ನೆಲೆಗಳ ಮೇಲೂ ದಾಳಿ ನಡೆಸಿದ್ದರು. ಇದನ್ನು ತಡೆಯಲು ಹೋದ ಭಾರತೀಯ ಯೋಧರ ಜೊತೆಗೆ ತಳ್ಳಾಟ ನಡೆಸಿದ್ದರು. ಈ ದೃಶ್ಯಗಳನ್ನು ಕೆಲ ಯೋಧರು ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡಿದ್ದರು.

ನಾಥು ಲಾ ಪ್ರವೇಶ ದ್ವಾರವನ್ನೇ ಬಂದ್‌ ಮಾಡಿದ್ದರಿಂದ ಸಾಕಷ್ಟು ಮಂದಿ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸದ್ಯಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆ ಇಲ್ಲವಾದ್ದರಿಂದ ಯಾತ್ರಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಚೀನಾ ರಾಜತಾಂತ್ರಿಕ ಪ್ರತಿಭಟನೆ
ಭಾರತೀಯ ಯೋಧರೇ ನಿಯಮ ಉಲ್ಲಂ ಸಿ ಗಡಿಯಿಂದಾಚೆ ಬಂದಿರುವುದರ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ವ್ಯಕ್ತಪಡಿಸಿರುವ ಚೀನಾ, ಕೂಡಲೇ ಗಡಿಯಲ್ಲಿ ನಿಯೋಜಿಸಲಾದ ಸೇನಾ ಪಡೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಒತ್ತಡ ಹೇರಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌, “ಭಾರತೀಯ ಯೋಧರ ಈ ಅಕ್ರಮವನ್ನು ನಾವು ಗಂಭೀರವಾಗಿ ಪರಿಗಣಿಸಿ, ಸೂಕ್ತ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದೇವೆ. ಗಡಿ ನಿಯಮ ಮೀರಿ ನುಗ್ಗುವ ಯತ್ನ ಕಂಡೂ ಕಾಣದಂತೆ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಪ್ರಾದೇಶಿಕ ಸಾರ್ವಭೌಮತ್ವ ಕಾಪಾಡಿಕೊಳ್ಳುವ ಕೆಲಸವನ್ನು ನಮ್ಮ ಯೋಧರು ಮಾಡಿದ್ದಾರೆ. ಭಾರತ ತಕ್ಷಣ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಿ. ಸೌಹಾರ್ದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ತಕ್ಷಣ ನಾವೂ ಯೋಧರ ನಿಯೋಜನೆಯನ್ನು ಸಡಿಲಗೊಳಿಸುತ್ತೇವೆ. ಗಡಿ ರಕ್ಷಣೆಯ ಜವಾಬ್ದಾರಿ ನಿರ್ವಹಿಸುವಲ್ಲಿ ನಮ್ಮ ಯೋಧರು ಬದ್ಧತೆ ತೋರಿದ್ದಾರಷ್ಟೇ ಎಂದು ಕ್ರಮ ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಹಂತದಲ್ಲಿ ಭಾರತ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ನೋಡಿಕೊಂಡು ನಾವು ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ. ಗಡಿಯಲ್ಲಿ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತೇವೆ. ಸಮಸ್ಯೆ ಬಗೆಹರಿಸಿಕೊಳ್ಳಲು ಭಾರತೀಯ ವಿದೇಶಾಂಗ ಸಚಿವಾಲಯದ ಜತೆ ಸಂಪರ್ಕದಲ್ಲಿ ಇದ್ದೇವೆ.
-ಲು ಕಾಂಗ್‌, ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ

ಟ್ರಂಪ್‌-ಮೋದಿ ಮಾತುಕತೆ ಪರಿಣಾಮ
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಚೀನಾ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗಿನ ಮಾತುಕತೆ ಬೆನ್ನಿಗೇ ಭಾರತಕ್ಕೆ ಎಚ್ಚರಿಕೆ ಸಂದೇಶವೊಂದು ರವಾನಿಸಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇದೊಂದು “ಭೂ-ರಾಜಕೀಯ ತಂತ್ರ’ ಎನ್ನುವ ಅರ್ಥದಲ್ಲಿ ವರದಿ ಮಾಡಿ ಎಚ್ಚರಿಸಿವೆ. ಟ್ರಂಪ್‌ ಜತೆಗಿನ ಮಾತುಕತೆ ಚೀನಾದೊಂದಿಗಿನ ಬಾಂಧವ್ಯಕ್ಕೂ ಧಕ್ಕೆಯಾಗಬಹುದು. ಭಾರತಕ್ಕೆ ಇದೇ ತೊಡಕಾಗಿ ಪರಿಣಮಿಸಬಹುದು ಎಂದೆಲ್ಲಾ ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next