Advertisement

‘ಬರ’ದ ನಾಡಿನಲ್ಲೂ ವಿದೇಶಿ ಹಣ್ಣಿನ ಘಮ: ಡ್ರ್ಯಾಗನ್ ಫ್ರೂಟ್

04:32 PM Jul 24, 2022 | Team Udayavani |

ಗದಗ: ಸತತ ಬರಗಾಲ, ಬಿತ್ತಿದರೂ ಬಾರದ ಫಲ. ಇದರಿಂದ ಬೇಸತ್ತ ಜಿಲ್ಲೆಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ವಿದೇಶಿ ಹಣ್ಣು ‘ಡ್ರ್ಯಾಗನ್ ಫ್ರೂಟ್ʼ ಬೆಳೆದು ಅಧಿಕ ಲಾಭಾಂಶ ಪಡೆಯುವುದರ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

Advertisement

ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದ ರೈತ ಕುಟುಂಬದ ಮಣ್ಣೆ ವೇಣುಗೋಪಾಲ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಡ್ರ್ಯಾಗನ್ ಫ್ರೂಟ್ ಬೆಲೆದು ಎಲ್ಲರ ಗಮನ ಸೆಳೆದಿದ್ದಾರೆ. 2016-17 ನೇ ಸಾಲಿನಲ್ಲಿ ತಮ್ಮ 2 ಎಕರೆ ಪ್ರದೇಶದಲ್ಲಿ ‘ಡ್ರ್ಯಾಗನ್ ಫ್ರೂಟ್ʼ ಸಸಿ ನಾಟಿ ಮಾಡಿದ ಅವರು, ಇಂದು ಎಕರೆಗೆ ವರ್ಷಕ್ಕೆ 20-22 ಟನ್‌ ಇಳುವರಿ ಪಡೆಯುವುದರೊಂದಿಗೆ 20 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ತಮ್ಮ 13 ಎಕರೆ ಜಮೀನಿನಲ್ಲಿ ಕೇವಲ 4 ಎಕರೆ ಪ್ರದೇಶದಲ್ಲಿ ಜಂಬೋ ರೆಡ್‌ ತಳಿಯ ‘ಡ್ರ್ಯಾಗನ್ ಫ್ರೂಟ್ʼ ಬೆಳೆದ ಅವರು, ಕಡಿಮೆ ನಿರ್ವಹಣೆ, ಅಧಿಕ ಇಳುವರಿ, ಲಾಭಾಂಶದ ಬೆಳೆಯಾಗಿರುವ ಇದನ್ನು ಬೆಳೆಯಲು ಇತರೆ ಪ್ರೋತ್ಸಾಹ ನೀಡುತ್ತಿದ್ದಾರೆ.

2004ರಲ್ಲಿ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆಯುತ್ತಿದ್ದ ವೇಣುಗೋಪಾಲ ಅವರು, ವರ್ಷಕ್ಕೆ ಎಕರೆಗೆ 25 ರಿಂದ 30 ಸಾವಿರ ರೂ. ಆದಾಯ ಪಡೆಯುತ್ತಿದ್ದರು. ನಂತರ ಆವರಿಸಿದ ಬರಗಾಲದಿಂದ ತತ್ತರಿಸಿದ ಅವರು, ಸಂಬಂಧಿಕರ ಮಾರ್ಗದರ್ಶನದೊಂದಿಗೆ ಮುಂಬೈ, ಔರಂಗಬಾದ್‌ ಸೇರಿದಂತೆ ಮಹಾರಾಷ್ಟ್ರದ ವಿವಿಧ ಪ್ರದೇಶಗಳಿಗೆ ಬೇಟಿ ನೀಡಿ ಡ್ರ್ಯಾಗನ್ ಫ್ರೂಟ್ ಬೆಳೆಯ ಮಾಹಿತಿ ಪಡೆದರು.

ನಂತರ ತಮ್ಮ ಜಮೀನಿನಲ್ಲೂ ಈ ಬೆಳೆಯನ್ನು ಯಾಕೆ ಬೆಳೆಯಬಾರದೆಂದು ಯೋಚಿಸಿ, ಬೆಳೆದು ಯಶಸ್ವಿಯಾಗಿದ್ದಾರೆ.

Advertisement

ಬೆಂಗಳೂರು, ಹೈದರಾಬಾದ್‌, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಇತರೆ ಪ್ರದೇಶಗಳಿಂದ ಆಗಮಿಸುವ ರೈತರು ಜಂಬೋ ರೆಡ್‌ ತಳಿಯ ಡ್ರ್ಯಾಗನ್ ಫ್ರೂಟ್ ಬೆಳೆ ವೀಕ್ಷಿಸಿ ಮಾಹಿತಿ ಪಡೆಯುತ್ತಿದ್ದಾರೆ. ಮಾತ್ರವಲ್ಲ ಹಣ್ಣುಗಳ ಜತೆಗೆ ತಮ್ಮ ಜಮೀನುಗಳಲ್ಲಿ ಕೊಯ್ಲು ಮಾಡಲು ಜಂಬೋ ರೆಡ್‌ ತಳಿಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಜಿಲ್ಲೆಯ 25 ಹೆಕ್ಟೇರ್ ನಲ್ಲಿ ಡ್ರ್ಯಾಗನ್ ಫ್ರೂಟ್: 2016 ರಲ್ಲಿ 2 ಎಕರೆ ಪ್ರದೇಶದಲ್ಲಿ ಮಾತ್ರ ಆರಂಭವಾದ ಡ್ರ್ಯಾಗನ್ ಫ್ರೂಟ್ ಈವರೆಗೆ ಜಿಲ್ಲೆಯ ನರಗುಂದ ತಾಲೂಕು ಹೊರತುಪಡಿಸಿ ಮುಂಡರಗಿ, ಗದಗ ಗಜೇಂದ್ರಗಡ, ರೋಣ, ಲಕ್ಷ್ಮೇಶ್ವರ, ಶಿರಹಟ್ಟಿ ಭಾಗದ 25ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶ ಆವರಿಸಿದೆ.

ಮಸಾರಿಯಲ್ಲಿ ಉತ್ತಮ ಬೆಲೆ: ನೀರು ಸರಾಗವಾಗಿ ಹರಿದು ಹೋಗುವ ಮಾಸರಿ(ಕೆಂಪು) ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಉತ್ತಮವಾಗಿ ಬೆಳೆಯುತ್ತದೆ. ಕಡಿಮೆ ನಿರ್ವಹಣೆ, ಕಡಿಮೆ ನೀರು ಹಾಗೂ ಬರಗಾಲ ಪ್ರದೇಶದಲ್ಲೂ ಬೆಳೆಯಬಹುದಾದ ಬೆಳೆಯಾಗಿದೆ.

ಡ್ರ್ಯಾಗನ್ ಫ್ರೂಟ್ ಕೊಯ್ಲು ಮಾಡಿದ ವರ್ಷದಲ್ಲಿ ಹೂವು ಬಿಡಲು ಆರಂಭಿಸುತ್ತದೆ. ಎರಡನೇ ವರ್ಷದಲ್ಲಿ ಹಣ್ಣು ಬಿಡುತ್ತದೆ.

ಪೋಷಕಾಂಶಗಳ ಆಗರ: ಕಾರ್ಬೋಹೈಡ್ರೇಟ್‌, ಶರ್ಕರ ಪಿಷ್ಠ, ಲವಣಾಂಶ, ವಿಟಮಿನ್‌ ಎ ಮತ್ತು ಸಿ ಹೊಂದಿರುವ ಡ್ರ್ಯಾಗನ್ ಫ್ರೂಟ್ ಪೋಷಕಾಂಶಗಳ ಆಗರವಾಗಿದೆ. ಹೃದಯ ಸಂಬಂಧಿ, ಮಧುಮೇಹ, ರಕ್ತದೊತ್ತಡ, ಯಕೃತ್‌ ಸಮಸ್ಯೆ ಅಷ್ಟೇ ಅಲ್ಲ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಉತ್ತಮ ಹಣ್ಣಾಗಿದೆ. ಜತೆಗೆ ಗರ್ಭಿಣಿಯರಿಗೂ ಉತ್ತಮ ಪೋಷಾಂಶ ಒದಗಿಸುತ್ತದೆ. ಕಜಿ ಹಣ್ಣಿಗೆ 150ರೊಂದ 200 ರೂ. ವರೆಗೆ ಮಾರಾಟವಾಗುತ್ತದೆ.

ಸಹಾಯಧನ ಲಭ್ಯ: ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆಯಲು ಮುಂದಾಗುವ ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಪ್ರತೀ ಹೆಕ್ಟೇರ್‌ ಗೆ 30 ಸಾವಿರ ರೂ. ಸಹಾಯ ಧನ ನೀಡಲಾಗುತ್ತದೆ. ಜತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೂಗ ಖಾತ್ರಿ ಯೋಜನೆಯಡಿ ಎಸ್ಸಿ-ಎಸ್ಟಿ, ಬಿಪಿಎಲ್‌, ಸಣ್ಣ-ಅತೀ ಸಣ್ಣ ರೈತರಿಗೆ ಪ್ರತೀ ಹೆಕ್ಟೇರ್‌ ಗೆ 1.5 ಲಕ್ಷ ರೂ. ಸಹಾಯ ಧನ ನೀಡಲಾಗುತ್ತಿದೆ.

ಡ್ರ್ಯಾಗನ್ ಫ್ರೂಟ್ ಲಾಭ ನೀಡುವ ಬೆಳೆಯಾಗಿದ್ದು, 4 ಎಕರೆ ಪ್ರದೇಶದಲದಲಿ ಬೆಳೆಯಲಾಗಿದೆ. ಮೊದ ಮೊದಲು ಎಕರೆಗೆ 7 ರಿಂದ 8 ಟನ್‌ ಇಳುವರಿ ಇತ್ತು. ಈಗ 20 ರಿಂದ 22 ಟನ್‌ ಇಳುವರಿ ಇದೆ. ಡ್ರ್ಯಾಗನ್ ಫ್ರೂಟ್ ಅನ್ನು ಬೆಂಗಳೂರು, ತುಮಕೂರು, ದಾವಣಗೆರೆ ಸೇರಿದಂತೆ ಬೇಡಿಕೆಯಿರುವ ಜಿಲ್ಲೆಗಳಿಗೆ ಕಳುಹಿಸಲಾಗುತ್ತಿದೆ. – ವೇಣುಗೋಪಾಲ ಮಣ್ಣೆ, ಗಂಗಾಪೂರಾ ಗ್ರಾಮದ ರೈತ

ಡ್ರ್ಯಾಗನ್ ಫ್ರೂಟ್ ಬರಗಾಲ ಪ್ರದೇಶದಲ್ಲಿ ಬೆಳೆಯುವಂತಹ ಸೂಕ್ತ ಬೆಳೆಯಾಗಿದೆ. ಜಿಲ್ಲೆಯ ರೈತರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಮುಂದೆ ಬರುತ್ತಿದ್ದಾರೆ. ಅವರಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದೆ. –ಸುರೇಶ ಕುಂಬಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು.

-ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next