ಮೈಸೂರು: ಭಾರತ ಹಿಂದೂ ರಾಷ್ಟ್ರವಾದರೆ ದೇಶಕ್ಕೆ ಅಪಾಯಕಾರಿ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಾ.ಯತೀಂದ್ರ ಸಿದ್ದರಾಮಯ್ಯ, ಅಂಬೇಡ್ಕರ್ ಅವರ ತತ್ವಗಳನ್ನು ಒಪ್ಪುವವರು ಯಾರೂ ನನ್ನ ಹೇಳಿಕೆಯನ್ನು ತಪ್ಪು ಎಂದು ಹೇಳುವುದಿಲ್ಲ. ಅಂಬೇಡ್ಕರ್ ಅವರು ಹೇಳಿರುವುದನ್ನೇ ನಾನು ಪುನರುಚ್ಚರಿಸಿದ್ದೇನೆ ಅಷ್ಟೇ ಎಂದಿದ್ದಾರೆ.
ಈ ದೇಶ ಜ್ಯಾತ್ಯತೀತವಾಗಿರಬೇಕು. ಯಾವುದೇ ಒಂದು ಧರ್ಮದ ವಿಚಾರವಾಗಿ ದೇಶ ಇರಬಾರದು. ಅದು ಯಾವತ್ತಿದ್ದರೂ ಅಪಾಯಕಾರಿ. ಧರ್ಮದ ಹೆಸರಿನಲ್ಲಿರುವ ಪಾಕಿಸ್ತಾನ ಮತ್ತು ಕೆಲವು ದೇಶಗಳ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಕಾರಣ ನಾನು ಹಿಂದೂ ರಾಷ್ಟ್ರವಾಗುವುದು ಅಪಾಯಕಾರಿ ಎಂದು ಹೇಳಿದ್ದೇನೆ. ನನ್ನ ಮಾತಿಗೆ ಈಗಲೂ ಬದ್ಧ. ನಾನು ಹೇಳಿರುವುದರಲ್ಲಿ ಯಾವ ತಪ್ಪು ಸಹ ಇಲ್ಲ ಎಂದು ಡಾ.ಯತೀಂದ್ರ ಹೇಳಿದರು.
ಧರ್ಮದ ಕೆಲಸ ಸರ್ಕಾರ ಮಾಡುವುದಲ್ಲ. ಧರ್ಮದ ವಿಚಾರದಲ್ಲಿ ಕೆಲಸ ಮಾಡುವುದಕ್ಕೆ ಬೇರೆ ವ್ಯವಸ್ಥೆಗಳಿವೆ. ಇದು ಸರ್ಕಾರದ ಕೆಲಸವಾಗಬಾರದು. ಬಿಜೆಪಿ ಅಭಿವೃದ್ಧಿಯನ್ನೇ ಮಾಡದೆ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಏನನ್ನು ಅಭಿವೃದ್ಧಿ ಮಾಡದ ಬಿಜೆಪಿ ಧರ್ಮದ ವಿಚಾರವನ್ನು ಮುನ್ನಡೆಗೆ ಬಿಟ್ಟು ವಿಚಾರಗಳನ್ನು ಬಿಜೆಪಿ ಮರೆ ಮಾಚುತ್ತಿದೆ ಎಂದರು.
ಟಿಕೆಟ್ ಕೇಳಿಲ್ಲ: ಮೈಸೂರು ಲೋಕಸಭಾ ಚುನಾವಣೆಗೆ ನಾನಂತೂ ಟಿಕೆಟ್ ಕೇಳಿಲ್ಲ. ಪಕ್ಷ ನಾನೇ ಸ್ಪರ್ಧಿಸಬೇಕು ಎಂದರೆ ಪಕ್ಷದ ತೀರ್ಮಾನಕ್ಕೆ ಬದ್ಧ. ನಾನು ಇವತ್ತಿನವರೆಗೆ ಆ ವಿಚಾರದಲ್ಲಿ ಯಾವ ಯೋಚನೆ ಮಾಡಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರು ಅವರನ್ನ ಗೆಲ್ಲಿಸುವುದು ನಮ್ಮ ಜವಾಬ್ದಾರಿ. ಈ ದೃಷ್ಟಿಯಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದರು.
ಪ್ರತಾಪ ಸಿಂಹ ತಮ್ಮನ್ನ ತಾವು ನ್ಯಾಷನಲ್ ಲೀಡರ್ ಎಂದುಕೊಂಡಿದ್ದಾರೆ. ಸಿದ್ದರಾಮಯ್ಯನವರು ಪ್ರತಾಪ ಸಿಂಹರನ್ನು ಟಾರ್ಗೆಟ್ ಮಾಡಲು ಅವರೇನು ರಾಷ್ಟ್ರೀಯ ನಾಯಕರಾ? ತಾವು ರಾಷ್ಟ್ರೀಯ ನಾಯಕನೆಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ನವರ ವಿರುದ್ದ ಹೇಳಿಕೆ ಕೊಡುತ್ತಿದ್ದಾರೆ ಅಷ್ಟೆ. ನಮ್ಮ ತಂದೆ ಯಾವತ್ತು ಟಾರ್ಗೆಟ್ ರಾಜಕಾರಣ ಮಾಡಿಲ್ಲ. ತಮಗೆ ರಾಜಕೀಯವಾಗಿ ಅನೇಕ ಭಾರಿ ಅನ್ಯಾಯವಾಗಿದ್ದರು ಕೂಡ ಅನ್ಯಾಯ ಮಾಡಿದ್ದವರ ವಿರುದ್ಧ ಅವರು ರಾಜಕಾರಣ ಮಾಡಲಿಲ್ಲ. ಇಂಥದರಲ್ಲಿ ಪ್ರತಾಪ ಸಿಂಹನನ್ನು ಯಾಕೆ ತಂದೆಯವರು ಟಾರ್ಗೆಟ್ ಮಾಡುತ್ತಾರೆ. ಅವರ ತಮ್ಮ ತಪ್ಪು ಮಾಡಿದ್ದಾರೆ ಅದಕ್ಕಾಗಿ ಕೇಸ್ ಆಗಿದೆ ಅಷ್ಟೇ. ಇದರಲ್ಲಿ ಟಾರ್ಗೆಟ್ ಎಲ್ಲಿಂದ ಬಂತು. ತಮ್ಮನ ತಪ್ಪು ಮುಚ್ಚಿಕೊಳ್ಳಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಇಲ್ಲಿ ನನ್ನ ರಾಜಕೀಯ ಭದ್ರತೆಯೆ ಪ್ರಶ್ನೆಯೇ ಇಲ್ಲ ಎಂದು ಯತೀಂದ್ರ ಹೇಳಿದರು.