Advertisement
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇತ್ತೀಚೆಗೆ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೃದಯಾಘಾತಕ್ಕೆ ಈಡಾಗುವ ಶೇ. 35ರಷ್ಟು ಮಂದಿ 40ರ ಆಸುಪಾಸಿನವರು ಎಂಬುದು ಕಳವಳಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ ಹೃದ್ರೋಗಿಗಳ ಜೀವ ಉಳಿಸಲು ಯೋಜನೆ ರೂಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಮುಂದಿನ ತಿಂಗಳಲ್ಲಿ ದಿನಾಂಕ ನಿಗದಿಪಡಿಸಿ ಚಾಲನೆ ನೀಡಲಾಗುವುದು ಎಂದರು.
ರಾಜ್ಯದ 85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ನ್ಪೋಕ್ ಕೇಂದ್ರಗಳನ್ನಾಗಿ ರೂಪಿಸಿದ್ದು, ಜಯದೇವ ಹೃದ್ರೋಗ ಸಂಸ್ಥೆ, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ಹಬ್‌ಗಳನ್ನು ರಚಿಸಲಾಗಿದೆ. ಬೆಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಗಳ ವ್ಯಾಪ್ತಿಯಲ್ಲಿ 35 ತಾಲೂಕು ಹಾಗೂ 10 ಜಿಲ್ಲಾಸ್ಪತ್ರೆ ಸೇರಿ 45 ನ್ಪೋಕ್ ಕೇಂದ್ರಗಳನ್ನು ಸಂಪರ್ಕದಲ್ಲಿರಿಸಲಾಗಿದೆ. 13 ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಒಳಗೊಂಡ 7 ಹಬ್‌ಗಳನ್ನು ರಚಿಸಿದ್ದು, 34 ತಾಲೂಕು ಮತ್ತು 6 ಜಿಲ್ಲಾಸ್ಪತ್ರೆ ಸೇರಿ 40 ನ್ಪೋಕ್ ಕೇಂದ್ರಗಳನ್ನು ಜೋಡಿಸಲಾಗಿದೆ. ಉಚಿತ ಚುಚ್ಚುಮದ್ದು
ಎದೆನೋವು ಕಾಣಿಸಿಕೊಂಡವರಿಗೆ ನ್ಪೋಕ್ (ಜಿಲ್ಲಾ, ತಾಲೂಕು) ಕೇಂದ್ರಗಳಲ್ಲಿ ತತ್‌ಕ್ಷಣ ಇಸಿಜಿ ಮಾಡಲಾಗುತ್ತದೆ. ಟ್ರಿಕಾಗ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಗಂಭೀರತೆ ಅರಿತು ನ್ಪೋಕ್ ಕೇಂದ್ರದಲ್ಲೇ ಟೆನೆಕ್ಟೆಪ್ಲೇಸ್ ಚುಚ್ಚುಮದ್ದು ನೀಡಲಾಗುತ್ತದೆ. ಇದು ಹಠಾತ್ ಹೃದಯಾಘಾತದಿಂದ ಪಾರು ಮಾಡಲಿದ್ದು, ನಂತರ ಆ್ಯಂಬುಲೆನ್ಸ್ ಮೂಲಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಬ್ ಕೇಂದ್ರಗಳಿಗೆ ಕಳುಹಿಸಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಸೇರಿದಂತೆ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಗುತ್ತದೆ.
Related Articles
ಪುನೀತ್ ರಾಜಕುಮಾರ್ ಹೃದಯಜ್ಯೋತಿ ಯೋಜನೆಯ 2ನೇ ಭಾಗವಾಗಿ ಬಸ್ಸು, ರೈಲು, ವಿಮಾನ ನಿಲ್ದಾಣ, ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 50 ಎಇಡಿ (ಆಟೋಮೇಟೆಡ್ ಎಕ್ಸ್‌ಟರ್ನಲ್ ಡಿಫಿಬ್ರಿಲೇಟರ್) ಸಾಧನಗಳನ್ನು ಅಳವಡಿಸಲಾಗುತ್ತದೆ. ಪ್ರತಿ ಸಾಧನಕ್ಕೆ 1.10 ಲಕ್ಷ ರೂ. ವೆಚ್ಚವಾಗಲಿದ್ದು, 50 ಉಪಕರಣಗಳನ್ನು ಅಳವಡಿಸಲು 5.50 ಕೋಟಿ ರೂ. ಖರ್ಚು ಬರಲಿದೆ. ಈ ಉಪಕರಣಗಳನ್ನು ನುರಿತ ತಜ್ಞರೇ ಬಳಸಬೇಕಿರುವುದರಿಂದ ಸಿಬ್ಬಂದಿಗೆ ಅಗತ್ಯ ತರಬೇತಿ ಕೂಡ ನೀಡಲಾಗುತ್ತದೆ. ಹೃದಯಾಘಾತಕ್ಕೆ ಒಳಗಾದವರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿ ಬದುಕಿಸುವ ಸಲುವಾಗಿ ಈ ಸಾಧನಗಳನ್ನು ಅಳವಡಿಸಲಾಗುತ್ತಿದ್ದು, ಒಟ್ಟಾರೆ ಪುನೀತ್ ರಾಜಕುಮಾರ್ ಹೃದಯಜ್ಯೋತಿ 1 ಮತ್ತು 2ನೇ ಹಂತದ ಯೋಜನೆಗಳಿಗೆ ಸುಮಾರು 600 ಕೋಟಿ ರೂ.ವರೆಗೆ ಖರ್ಚು ಬರುವ ಸಾಧ್ಯತೆಗಳಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.
Advertisement