Advertisement

ಡಾ.ವಿಷ್ಣುವರ್ಧನ್‌ 8 ನೇ ಪುಣ್ಯಸ್ಮರಣೆ

10:58 AM Dec 31, 2017 | |

ಡಾ.ವಿಷ್ಣುವರ್ಧನ್‌ ಇಲ್ಲದ ಎಂಟು ವರ್ಷಗಳು ಕಳೆದು ಹೋಗಿವೆ. ಅವರಿಲ್ಲದಿದ್ದರೂ ಅವರ ಆದರ್ಶ ಮಾತ್ರ ಇಂದಿಗೂ ಜೀವಂತವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳು ಅಭಿಮಾನ್‌ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ಪುಣ್ಯಸ್ಮರಣೆ ಮಾಡುವ ಮೂಲಕ ಪ್ರೀತಿಯ ಹೀರೋಗೆ ಪುಷ್ಪನಮನ ಸಲ್ಲಿಸಿ, ಅಭಿಮಾನ ಮೆರೆದಿದ್ದಾರೆ. ಶನಿವಾರ ಡಾ.ವಿಷ್ಣುವರ್ಧನ್‌ ಅವರ ಕುಟುಂಬದವರು ಮನೆಯಲ್ಲೇ ವಿಷ್ಣುವರ್ಧನ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ವಿಶೇಷ ಪೂಜೆ ಮಾಡುವ ಮೂಲಕ ಎಂಟನೇ ಪುಣ್ಯಸ್ಮರಣೆ ಮಾಡಿದ್ದಾರೆ.

Advertisement

ಡಾ.ಭಾರತಿ ವಿಷ್ಣುವರ್ಧನ್‌, ಅನಿರುದ್ಧ, ಕೀರ್ತಿ ಅನಿರುದ್ಧ ಸೇರಿದಂತೆ ವಿಷ್ಣುವರ್ಧನ್‌ ಅವರ ಕುಟುಂಬದವರೆಲ್ಲರೂ ಚಾಮರಾಜಪೇಟೆಯಲ್ಲಿರುವ ಬಾಸ್ಕೋ ಅನಾಥಾಶ್ರಮ ಮಕ್ಕಳಿಗೆ ಪುಕಸ್ತಕ, ಪೆನ್ಸಿಲ್‌ ಹಾಗು ಇತರೆ ಶಿಕ್ಷಣಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಿಸಿದರು. ನಂತರ ಮನೆಯಲ್ಲೇ ಅನ್ನಸಂತರ್ಪಣೆ ನಡೆಸಲಾಯಿತು. ನೂರಾರು ಅಭಿಮಾನಿಗಳು ವಿಷ್ಣುವರ್ಧನ್‌ ಅವರ ಮನೆಯ ಮುಂದೆ ಬೆಳಗ್ಗೆಯಿಂದಲೇ ಜಮಾಯಿಸಿ, ಪುಷ್ಪ ನಮನ ಸಲ್ಲಿಸಿದರು.

ಆ ಬಳಿಕ ಪ್ರಸಾದ ಸ್ವೀಕರಿಸಿ, ಪ್ರೀತಿಯ ನಟನಿಗೆ ಜೈಕಾರ ಹಾಕಿದರು. ಮೈಸೂರು ಸಮೀಪ ವಿಷ್ಣುವರ್ಧನ್‌ ಅವರ ಸ್ಮಾರಕಕ್ಕೆ ಸಂಬಂಧಿಸಿದಂತೆ “ಉದಯವಾಣಿ’ ಜತೆ ಮಾತನಾಡಿದ ನಟ ಅನಿರುದ್ಧ, ಸರ್ಕಾರಕ್ಕೆ ಪ್ರತಿ ಸಲವೂ ಮನವಿ ಮಾಡುತ್ತಲೇ ಇದ್ದೇವೆ. ಜಾಗ ವಿವಾದ ವಿಷಯ ಈಗ ಕೋರ್ಟ್‌ನಲ್ಲಿ ಚರ್ಚೆ ನಡೆಯುತ್ತಿದ್ದು, ಇಷ್ಟರಲ್ಲೇ ಅದು ಬಗೆಹರಿಯುವ ವಿಶ್ವಾಸವಿದೆ.

ಸರ್ಕಾರಕ್ಕೆ ಡಿಸೆಂಬರ್‌ 30ರ ಒಳಗೆ ಸಮಸ್ಯೆ ಇತ್ಯರ್ಥಪಡಿಸಿ ಎಂದು ಕೇಳಿಕೊಳ್ಳಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಜನವರಿ 15 ರ ಒಳಗಾಗಿ ಜಾಗದ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದೆ. ಮುಂದಿನ ವರ್ಷದಲ್ಲಿ ಸ್ಮಾರಕ ಆಗುವ ನಂಬಿಕೆ ಇದೆ. ಈಗಾಗಲೇ ಅಭಿಮಾನಿಗಳಿಗೆ ಸಾಕಷ್ಟು ಗೊಂದಲವಿದೆ. ಹಾಗಾಗಿ, ಅದನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಅವರು.

ಮೂರು ಕಡೆ ಪ್ರತಿಮೆ ಅನಾವರಣ: ಎಂಟನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ವಿಷ್ಣು ಸೇನಾ ಸಮಿತಿಯಿಂದ ಮೂರು ಕಡೆ ಡಾ.ವಿಷ್ಣುವರ್ಧನ್‌ ಅವರ ಪ್ರತಿಮೆ ಅನಾವರಣ ಮಾಡಲಾಯಿತು. ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ನೇತೃತ್ವದಲ್ಲಿ ಗಾಂಧಿನಗರ, ಮೈಸೂರು ಸ್ಯಾಟಲೆಟ್‌ ಬಸ್‌ ನಿಲ್ದಾಣ ಮತ್ತು ಕುಂಬಳಗೋಡು ಬಳಿ ಡಾ.ವಿಷ್ಣುವರ್ಧನ್‌ ಅವರ ಮೂರು ಪ್ರತಿಮೆಗಳನ್ನು ಅನಾವರಣಗೊಳಿಸಲಾಯಿತು.

Advertisement

ಸಚಿವ ದಿನೇಶ್‌ ಗುಂಡುರಾವ್‌ ಅವರು ಗಾಂಧಿನಗರದಲ್ಲಿ ಪ್ರತಿಮೆ ಆನಾವರಣ ಮಾಡಿದರೆ, ಶಿಲ್ಪಾಗಣೇಶ್‌ ಮೈಸೂರು ಸ್ಯಾಟಲೆಟ್‌ ಬಸ್‌ ನಿಲ್ದಾಣದಲ್ಲಿ ಪ್ರತಿಮೆ ಅನಾವರಣಗೊಳಿಸಿದರು. ಕುಂಬಳಗೋಡು ಬಳಿ ವೀರಕಪುತ್ರ ಶ್ರೀನಿವಾಸ್‌ ಅವರು ಅಭಿಮಾನಿಗಳ ಸಮ್ಮುಖದಲ್ಲಿ ವಿಷ್ಣುವರ್ಧನ್‌ ಪ್ರತಿಮೆ ಅನಾವರಣಗೊಳಿಸಿದ್ದಾರೆ.

ಇದೇ ಸಂದರ್ಭದಲ್ಲಿ “ಕೋಟಿಗೊಬ್ಬ’ ಹೆಸರಿನಲ್ಲಿ ವಿಷ್ಣುವರ್ಧನ್‌ ಅವರ ಭಾವಚಿತ್ರ ಹೊಂದಿರುವ 2018 ರ ಕ್ಯಾಲೆಂಡರ್‌ ಅನ್ನು ಬಿಡುಗಡೆ ಮಾಡಲಾಯಿತು. ನಂತರ ಅಭಿಮಾನ್‌ ಸ್ಟುಡಿಯೋದಲ್ಲೂ ಅಭಿಮಾನಿಗಳು ಅನ್ನ ಸಂತರ್ಪಣೆ ಏರ್ಪಡಿಸಿ, ರಕ್ತದಾನ ಶಿಬಿರ ನಡೆಸಿದ್ದಾರೆ. ಡಾ.ವಿಷ್ಣುವರ್ಧನ್‌ ಅವರ ಎಂಟನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಅನೇಕ ಸಮಾಜಮುಖೀ ಕಾರ್ಯಕ್ರಮ ನಡೆಸುವ ಮೂಲಕ ವಿಶೇಷವಾಗಿ ಸ್ಮರಣೆ ಮಾಡಿದ್ದಾರೆ.

ಅಭಿಮಾನ್‌ ಸ್ಟುಡಿಯೋದಲ್ಲಿ ಅಭಿಮಾನಿಗಳು ಅನ್ನದಾನದ ಜೊತೆಗೆ ರಕ್ತದಾನ ಕೂಡ ನೆರವೇರಿಸಿದ್ದಾರೆ. ಇನ್ನು, ಪುಣ್ಯಸ್ಮರಣೆ ಅಂಗವಾಗಿ ಡಾ.ವಿಷ್ಣುವರ್ಧನ್‌ ಅವರ ಸಮಾಧಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಇಂದು ಬೆಳಗ್ಗೆಯೇ ಪೂಜೆ ಸಲ್ಲಿಸಲಾಯಿತು. ಸಾವಿರಾರು ಅಭಿಮಾನಿಗಳು ಬೆಳಗ್ಗೆಯಿಂದಲೇ ಅಭಿಮಾನ್‌ ಸ್ಟುಡಿಯೋಗಿ ಆಗಮಿಸಿ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next