Advertisement

ದುಶ್ಚಟಮುಕ್ತ ವ್ಯಕ್ತಿಗೆ ಸಾಮಾಜಿಕ ಗೌರವ

01:04 PM Dec 26, 2018 | Team Udayavani |

ಬೆಳ್ತಂಗಡಿ: ದುಶ್ಚಟಕ್ಕೆ ಬಲಿಯಾದ ವ್ಯಕ್ತಿಯ ಮನಸ್ಸು ಶುದ್ಧವಿರಲು ಅಸಾಧ್ಯ. ಆತ ದೇವಸ್ಥಾನಕ್ಕೆ ಹೋದರೂ ಫಲವಿಲ್ಲ. ದುಶ್ಚಟಮುಕ್ತ ವ್ಯಕ್ತಿಗೆ ಸಾಮಾಜಿಕ ಗೌರವ, ಆರ್ಥಿಕ ಅಭಿವೃದ್ಧಿಯ ಜತೆಗೆ ಪುಣ್ಯವೂ ಪ್ರಾಪ್ತವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಮಂಗಳವಾರ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಶತದಿನ ಪೂರೈಸಿದ 3 ಸಾವಿರಕ್ಕೂ ಅಧಿಕ ನವಜೀವನ ಸಮಿತಿ ಸದಸ್ಯರು (ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡವರು) ಮತ್ತು ಅವರ ಕುಟುಂಬದವರಿಗೆ ಸಂದೇಶ ನೀಡಿದರು.

ಪ್ರಜ್ಞೆಯನ್ನು ಚಂಚಲಗೊಳಿಸಿ ಅದರ ದಾಸರನ್ನಾಗಿ ಮಾಡುವ ಶಕ್ತಿ ಮಾದಕ ವಸ್ತುಗಳಿಗಿದೆ. ಮದ್ಯ ಸೇವನೆಗೆ
ಆತನೇ ಕಾರಣ ಎಂದು ಹೇಳಲಾಗುತ್ತಿದ್ದರೂ ಕೆಲವೊಂದು ಸಂದರ್ಭದಲ್ಲಿ ಪರಿಸ್ಥಿತಿ, ಒತ್ತಡಗಳು ವ್ಯಕ್ತಿಯನ್ನು ದುಶ್ಚಟಗಳ ದಾಸನನ್ನಾಗಿ ಮಾಡುತ್ತವೆ. ಈ ಕುರಿತು ಮಹಿಳೆಯರು ಕೂಡ ಎಚ್ಚರಿಕೆ ವಹಿಸಬೇಕಿದ್ದು, ಪತಿ ತಪ್ಪು ಹೆಜ್ಜೆ ಇಡದಂತೆ ಉತ್ತಮವಾಗಿ ನೋಡಿಕೊಳ್ಳುವ ಜವಾಬ್ದಾರಿ ಅವರ ಮೇಲಿದೆ. ಪ್ರೀತಿಯಿಂದ ಅವರ ಮನಸ್ಸು ಗೆದ್ದಾಗ ಮಾತ್ರ ಅವರು ಉತ್ತಮರಾಗಿ ಬದುಕುತ್ತಾರೆ ಎಂದರು.

ಕ್ಷೇತ್ರದ ಜನಜಾಗೃತಿ ವೇದಿಕೆಯಿಂದ ಈಗಾಗಲೇ 1,303 ಮದ್ಯವರ್ಜನ ಶಿಬಿರಗಳು ನಡೆದಿದ್ದು, ಸಾವಿರಾರು ಮಂದಿ ಹೊಸ ಜೀವನ ನಡೆಸುತ್ತಿದ್ದಾರೆ. ದುಶ್ಚಟ ಮುಕ್ತರಾಗಿ ಅಭಿವೃದ್ಧಿ ಹೊಂದಿದ್ದಾರೆ. ಜನಜಾಗೃತಿ ವೇದಿಕೆಯಲ್ಲಿ 26 ಮಂದಿ ಅಧಿಕಾರಿಗಳು ದುಡಿಯುತ್ತಿದ್ದು, ಅವರೇ ವೇದಿಕೆಯ ಶಕ್ತಿಗಳಾಗಿದ್ದಾರೆ ಎಂದರು.

ಪ್ರಶಸ್ತಿ ಪ್ರದಾನ
50ಕ್ಕೂ ಅಧಿಕ ಮಂದಿಯನ್ನು ದುಶ್ಚಟಮುಕ್ತಗೊಳಿಸಿದ ಹರೀಶ್‌ ಕೆ.ಆರ್‌. ಪೇಟೆ ಅವರಿಗೆ ಜಾಗೃತಿ ಅಣ್ಣ, 25ಕ್ಕೂ ಅಧಿಕ ಮಂದಿಯನ್ನು ದುಶ್ಚಟಮುಕ್ತಗೊಳಿಸಿದ ಕುಶಾಲಪ್ಪ ಬಂಟ್ವಾಳ ಮಾಣಿ, ಜಡೇಸ್ವಾಮಿ ಕೊಪ್ಪಳ
ಅವರಿಗೆ ಜಾಗೃತಿ ಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾ ಯಿತು. ಶತದಿನ ಪೂರೈಸಿದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.

Advertisement

ಕೆ.ಎಸ್‌. ರಾಜೇಶ್‌ ಮಂಡ್ಯ, ಅಶ್ವತ್ಥ್ ಪೂಜಾರಿ, ಕಮಲಾಕ್ಷ ನಾಯಕ್‌ ಉಪಸ್ಥಿತರಿದ್ದರು. ವೇದಿಕೆಯ ಶಿಬಿರಾಧಿಕಾರಿ ತಿಮ್ಮಯ್ಯ ನಾಯ್ಕ ವಂದಿಸಿದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ವಿವೇಕ್‌ ವಿನ್ಸೆಂಟ್‌ ಪಾಯಸ್‌ ಕಾರ್ಯಕ್ರಮ ನಿರೂಪಿಸಿದರು.

ನೆಮ್ಮದಿಯ ಜೀವನ
ಶಿಬಿರಾರ್ಥಿ ಮರಳಸಿದ್ದಯ್ಯ ತುಮಕೂರು ಮಾತನಾಡಿ, ಉತ್ತಮ ಕಲಾವಿದನಾಗಿದ್ದ ನನಗೆ ಮದ್ಯದ ಬೆಲೆ ಗೊತ್ತಿತ್ತೇ ವಿನಾ, ದಿನಸಿ ಸಾಮಗ್ರಿಗಳ ಬೆಲೆ ಗೊತ್ತಿರಲಿಲ್ಲ. ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡ ಬಳಿಕ 5 ತಿಂಗಳಲ್ಲಿ 75 ಸಾವಿರ ರೂ. ಸಾಲ ತೀರಿಸಿದ್ದೇನೆ ಎಂದರು.

ಶಿಬಿರಾರ್ಥಿ ಅಶೋಕ್‌ ಅವರ ಪತ್ನಿ ಗಂಗಮ್ಮ ಮಾತನಾಡಿ, ತನ್ನ ಪತಿಯ ಕುಡಿತದ ಚಟ ಯಾವ ಪ್ರಮಾಣದಲ್ಲಿತ್ತೆಂದರೆ ಮಕ್ಕಳ ಮಾರಾಟಕ್ಕೂ ಅವರು ಮುಂದಾಗಿದ್ದರು. ಒಂದು ದಿನವೂ ನಮಗೆ ನೆಮ್ಮದಿ ಇರಲಿಲ್ಲ. ಇದೀಗ ಅವರು ಮದ್ಯಮುಕ್ತರಾದ ಬಳಿಕ ಜೀವನದಲ್ಲಿ  ನೆಮ್ಮದಿ ಕಾಣುತ್ತಿದೆ ಎಂದು ಆನಂದಬಾಷ್ಪ ಹರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next