Advertisement
ವೈಯಕ್ತಿಕವಾಗಿ ನನಗೆ ಅವರೊಂದಿಗೆ 40 ವರ್ಷ ಗಳಿಗೂ ಹೆಚ್ಚು ಕಾಲ ಪರಿಚಯ, ಸಂಬಂಧ, ಆಪ್ತತೆ, ಒಡನಾಟ ಇರುವ ಕಾರಣ ಅವರ ಸಾಧನೆಗಳ ಪಟ್ಟಿ ಹೇಳುವುದಕ್ಕಿಂತ ಹೆಚ್ಚಾಗಿ ಅವರ ಮನಸ್ಸು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ.
Related Articles
Advertisement
ಕಾರ್ಯಕ್ರಮದ ಮೂಲಕ ಹದಿಹರೆಯದ ಹೆಣ್ಮಕ್ಕಳು, ಗೃಹಿಣಿಯರಿಗೆ ಕೌಟುಂಬಿಕ ದೌರ್ಜನ್ಯದ ಸಮಸ್ಯೆಗೆ, ಮನೋಆಘಾತಕ್ಕೆ ಪರಿಹಾರ ಕೊಡುವುದು ನಡೆದಿದೆ. ಮಹಿಳೆಯರ ಉದ್ಯೋಗಾವಕಾಶಕ್ಕಾಗಿ ಸಿರಿ ಉತ್ಪನ್ನ ಗಳು, ಅದರ ಮಾರಾಟ ವ್ಯವಸ್ಥೆ ರೂಪಿಸಲಾಯಿತು.
ಕುಟುಂಬದಿಂದ ತಿರಸ್ಕೃತಗೊಂಡ ಹಿರಿಯರಿಗೆ ಬೇಕಾದ ಸಲಕರಣೆಗಳನ್ನು ವಾತ್ಸಲ್ಯ ಎಂಬ ಯೋಜನೆ ಮೂಲಕ ನೀಡಲಾಗುತ್ತದೆ. ಈ ಯೋಜನೆಗಳೆಲ್ಲವೂ ಯಶಸ್ವಿಯಾಗಲು ಮುಖ್ಯ ಕಾರಣ ಗ್ರಾಮೀಣ ಜನರು ಅದು ತಮ್ಮದೇ ಕಾರ್ಯಕ್ರಮ ಎಂದು ಸ್ವೀಕರಿಸಿರುವುದು. ಇದರ ಹಿಂದೆ ನಾವು ದುಡಿಯು ವವರು ಎಂಬ ಮನೋಧರ್ಮ, ಸಮಾನತೆ, ಸಮಾಜ ವಾದದ ತತ್ವ ಅಂತರ್ಗತವಾಗಿ ಕೆಲಸ ಮಾಡುತ್ತದೆ.
ಬ್ಯಾಂಕ್‌ಗಳ ಸಹಯೋಗದಲ್ಲಿ ಮಾಡುವ ಕಾರಣ ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ (ರುಡ್‌ಸೆಟಿ) ಅನೇಕರ ಬದುಕಿಗೆ ಬೆಳಕು ತೋರಿಸಿದೆ.
ಸಾಂಸ್ಕೃತಿಕವಾಗಿ ನೋಡಿದರೆ ಧರ್ಮಸ್ಥಳದ “ಮಂಜೂಷಾ ವಸ್ತುಸಂಗ್ರಹಾಲಯಯ’ ನಮ್ಮ ಅನೇಕ ಸಾಂಸ್ಕೃತಿಕ ವಸ್ತುಗಳ ಸಂರಕ್ಷಣೆಗೆ ಪ್ರೇರಣೆ ಕೊಡುತ್ತದೆ. ಅದೇ ರೀತಿ ಧರ್ಮಸ್ಥಳದ ಸಂಸ್ಕೃತಿ ಪ್ರತಿಷ್ಠಾನವೂ ಬೇರೆ ಬೇರೆ ಭಾಷೆಯ, ಲಿಪಿ, ಧರ್ಮಗಳ ತಾಳೆಗರಿಗಳನ್ನು ಹೊಂದಿದೆ.
ನಾನು ಅಲ್ಲಿಗೆ ಹಲವು ವಿದೇಶಿ ವಿದ್ವಾಂಸರನ್ನು ಕರೆದೊಯ್ದಿದ್ದೇನೆ. ಜರ್ಮನಿಯ ಪ್ರೊ| ಕರಿನ್ ಸ್ಟೇನರ್ ಒಮ್ಮೆ ನಂದಿನಾಗರಿ ಲಿಪಿಯಲ್ಲಿದ್ದ ತಾಳೆಗರಿ ಯೊಂದನ್ನು ಕೊಟ್ಟು ಭಾಷಾಂತರಿಸಲು ವಿನಂತಿಸಿದ್ದರು. ಆಗ ಸಂಸ್ಕೃತಿ ಪ್ರತಿಷ್ಠಾನದವರು ಆ ತಾಳೆಗರಿಯನ್ನು ಭಾಷಾಂತರ ಮಾಡಿಕೊಟ್ಟರು. ಇದರಿಂದ ಪ್ರೊ| ಕರಿನ್ ಅವರಿಗೆ ಬಹಳ ಖುಷಿಯಾಗಿತ್ತು.
1989ರಿಂದ ಸುಮಾರು 7-8 ವರ್ಷ ಕಾಲ ಫಿನ್ಲಂ ಡ್‌ನ ಜಾನಪದ ವಿದ್ವಾಂಸ ಪ್ರೊ| ಲೌರಿ ಹಾಂಕೊ ಮತ್ತು ಅವರ ಪತ್ನಿಯೊಂದಿಗೆ ನಾನು, ಡಾ| ಚಿನ್ನಪ್ಪ ಗೌಡರು ಮಾಚಾರಿನ ಗೋಪಾಲ ನಾಯಕರ ಸಿರಿ ಸಂಧಿ ದಾಖಲೀಕರಣಕ್ಕೆಂದು ಧರ್ಮಸ್ಥಳದ ಹಳೆ ಬಂಗ್ಲೆಯಲ್ಲಿ ಸ್ವಲ್ಪ ಕಾಲ ಇದ್ದೆವು. ಆಗ ಡಾ| ಹೆಗ್ಗಡೆಯವರ ಜತೆ ಅನೌಪಚಾರಿಕ ಮಾತುಕತೆ ಹೆಚ್ಚಾಗಿ ನಡೆಯುತ್ತಿತ್ತು. ಅವರ ಚಿಂತನೆಯನ್ನು ನೋಡಿ, ಕೇಳಿ ಪ್ರೊ| ಲೌರಿ ಹಾಂಕೊ ಅವರು ಮೆಚ್ಚಿಕೊಂಡಿದ್ದರು.
ಶಿಕ್ಷಣ ಸಂಸ್ಥೆಗಳ ಮೂಲಕ ಬೌದ್ಧಿಕ ಚಿಂತನೆಯ ಸಾಕಾರ :
ಹೆಗ್ಗಡೆಯವರು ಬೌದ್ಧಿಕ ಚಿಂತನೆಯನ್ನು ಬೆಳೆಸಿ ಕೊಂಡವರು. ಹಾಗಾಗಿಯೇ ವಿವಿಧ ಶಿಕ್ಷಣ ಸಂಸ್ಥೆ ಗಳನ್ನು ಅತ್ಯಾಧುನಿಕವಾಗಿ, ವಿದ್ಯಾರ್ಥಿ ಕೇಂದ್ರಿತವಾಗಿ ಬೆಳೆಸಿದರು. ವಿಶ್ವ ತುಳು ಸಮ್ಮೇಳನ ಉಜಿರೆಯಲ್ಲಿ ನಡೆದಾಗ ಸಾಮಾನ್ಯ ಕಾರ್ಯಕರ್ತರಂತೆ ಮುಕ್ತವಾಗಿರುತ್ತಿದ್ದರು. ಈಗಲೂ ಪುಸ್ತಕ ಓದುತ್ತಾರೆ, ಪ್ರಯಾಣಿಸುವಾಗ ಸಾಹಿತ್ಯದ ಆಡಿಯೋಬುಕ್ ಕೇಳುತ್ತಾರೆ. ಅಂತಹವರು ರಾಜ್ಯಸಭೆಗೆ ಹೋದಾಗ ಈ ವರೆಗೆ ಅವರು ರಾಜ್ಯದಲ್ಲಿ ಮಾಡಿದ ಎಲ್ಲ ಪ್ರಯೋಗಗಳು ದೇಶಕ್ಕೆ ವಿಸ್ತರಿಸುತ್ತವೆ ಎಂಬ ಬಹಳ ದೊಡ್ಡ ಆಶಾಭಾವ ಮತ್ತು ಭರವಸೆ ನಮ್ಮದಾಗಿರುತ್ತದೆ.
ಅವರು ಯೋಚನೆ ಇಲ್ಲದೆ ಮಾತನಾಡುವುದಿಲ್ಲ, ಅವರ ಮಾತಿನಲ್ಲಿ ಅನುಭವ, ಆಳವಾದ ಕಾಳಜಿ ಇರುತ್ತದೆ. ಅವರು ಎಲ್ಲಿ ಹೋದರೂ ಕನಸುಗಳನ್ನು ನಿಜ ಮಾಡುತ್ತಾರೆ. ಇಂದಿನ ಸಂದರ್ಭದಲ್ಲಿ ಅವರಂಥ ಮುತ್ಸದ್ದಿಗಳ ಆವಶ್ಯಕತೆ ಇದೆ, ಸರಕಾರವು ಅವರ ಚಿಂತನೆಗಳನ್ನು ಆಲಿಸಿ, ಕಾರ್ಯಗತ ಗೊಳಿಸಬೇ ಕೆನ್ನುವುದು ನಮ್ಮ ಹಂಬಲ ಕೂಡ.
ಗ್ರಾಮ ಸ್ವರಾಜ್ಯದ ಕನಸು ಸಾಕಾರ :
ಹೆಗ್ಗಡೆ ಅವರ ಮುಖ್ಯವಾದ ಶಕ್ತಿ ಎಂದರೆ ಗಾಂಧೀಜಿಯವರ ಗ್ರಾಮಸ್ವರಾಜ್ಯದ
ಕನಸನ್ನು ಧರ್ಮಕ್ಷೇತ್ರದ ಮೂಲಕ ಸಾಕಾರ ಮಾಡಿರುವುದು. ಬಹಳ ವಿಶೇಷ ಎಂದರೆ ಬಹುತೇಕ ಭಕ್ತರು ಗ್ರಾಮೀಣರೇ ಆದ್ದರಿಂದ ಅವರಿಗೆ ಅನುಕೂಲವಾಗಲು ಗ್ರಾಮಾಭಿವೃದ್ಧಿಯ ಸೂಕ್ಷ್ಮತೆಗಳನ್ನು ಅರಿತುಕೊಂಡು ರೂಪಿಸಿದರು. 35 ವರ್ಷಗಳಲ್ಲಿ 35 ಲಕ್ಷ ಸದಸ್ಯರನ್ನೊಳಗೊಂಡ ಈ ಯೋಜನೆ ಗಾಂಧೀಜಿಯವರ ಗ್ರಾಮಸ್ವರಾಜ್ಯ ಕನಸನ್ನು ಸ್ಪಷ್ಟವಾಗಿ ನಿಜ ಮಾಡಿದೆ. ಅನೇಕ ಬಾರಿ ಸರಕಾರಿ ಯೋಜನೆಗಳ ಜತೆ ಸಹಯೋಗ ಮಾಡಿಕೊಂಡು ಸವಲತ್ತುಗಳು ಜನಸಾಮಾನ್ಯರಿಗೆ ದೊರಕುವ ಹಾಗೆ ಕೊಂಡಿಯಂತೆ ಕೆಲಸ ಮಾಡಿದೆ.
ಸಾಮಾಜಿಕ ಜೀವನಕ್ಕೆ ಕೊಡುಗೆ :
12,576: 1972ರಿಂದ ಈವರೆಗೆ ಶ್ರೀ ಕ್ಷೇತ್ರದಲ್ಲಿ 12,576 ಜತೆ ಉಚಿತ ಸಾಮೂಹಿಕ ವಿವಾಹ ನಡೆಸಲಾಗಿದೆ. ಮಧ್ಯಮ ವರ್ಗದ ಜನರ ಅನುಕೂಲತೆಗಾಗಿ ಬೆಂಗಳೂರು, ಭದ್ರಾವತಿ, ಮೈಸೂರು, ಶ್ರವಣ ಬೆಳಗೊಳ, ಬಂಟ್ವಾಳ, ಸಂಸೆ, ಬೆಳ್ತಂಗಡಿ ಮತ್ತು ಧರ್ಮಸ್ಥಳದಲ್ಲಿ ಕಲ್ಯಾಣ ಮಂಟಪಗಳ ಸ್ಥಾಪನೆ.
30,000 : 1982ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ಥಾಪನೆ. 30,000 ಗ್ರಾಮಗಳು ಮತ್ತು ನಗರಗಳಲ್ಲಿ ಯೋಜನೆಯ ಅಳವಡಿಕೆ. ಈ ಯೋಜನೆಯಡಿ 4.2 ಮಿಲಿಯನ್ ಕುಟುಂಬಗಳು ವಿವಿಧ ಕಲ್ಯಾಣ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿವೆ.
4,87,999 :
ಯುವಜನರಿಗೆ ವಿಭಿನ್ನ ಉದ್ಯೋಗ ಗಳಲ್ಲಿ ತರಬೇತಿಯನ್ನು ಕೊಟ್ಟು ಅವರು ಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಲು ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್‌ನ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರ “ರುಡ್‌ಸೆಟ್’ನ ಸ್ಥಾಪನೆ. ದೇಶದ 17 ರಾಜ್ಯಗಳಲ್ಲಿ 27 ಶಾಖೆ ಗಳನ್ನು ನಿರ್ಮಿಸಲಾಗಿದೆ. ಒಟ್ಟು ಫಲಾನುಭವಿಗಳ ಸಂಖ್ಯೆ 4,87,999 ಈ ತನಕ ಶೇ. 73 ಪ್ರತಿಶತ ಜನರು ಸ್ವ- ಉದ್ಯೋಗಸ್ಥರಾಗಿರುತ್ತಾರೆ. ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯವು ದೇಶದಲ್ಲಿರತಕ್ಕಂತಹ ಎಲ್ಲಾ ಆರ್‌ಸೆಟಿ (ಆರ್‌ಸೆಟಿ) ಗಳನ್ನು ನೋಡಿಕೊಳ್ಳಲು ಪೂಜ್ಯ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಲಹಾ ಸಮಿತಿಯನ್ನು ರಚಿಸಿರುತ್ತದೆ.
ಇದಲ್ಲದೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರಗಳಿಗೂ ಡಾ| ಹೆಗ್ಗಡೆ ಅವರು ಅಪಾರವಾದ ಕೊಡುಗೆಗಳನ್ನು ಸಲ್ಲಿಸಿದ್ದಾರೆ. ಹಲವಾರು ಪುರಸ್ಕಾರ, ಬಿರುದುಗಳಿಗೆ ಭಾಜನರಾಗಿದ್ದಾರೆ.
- ಪ್ರೊ| ಬಿ.ಎ. ವಿವೇಕ ರೈ ವಿಶ್ರಾಂತ ಕುಲಪತಿಗಳು,
ಕನ್ನಡ ವಿಶ್ವವಿದ್ಯಾಲಯ, ಹಂಪಿ