ಬೆಳ್ತಂಗಡಿ: ರಾಜ್ಯಸಭೆ ಅಂದರೆ ಹಿರಿಯರ ಸಭೆ. ಇದರ ಸದಸ್ಯನಾಗುವ ಅವಕಾಶ ಸಿಕ್ಕಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮತ್ತು ನಮ್ಮ ಪೂರ್ವಜರಿಗೆ ಸಂದ ದೊಡ್ಡ ಗೌರವ. ಅಮೂಲ್ಯ ದೇಶ ಸೇವೆಗೆ ನನ್ನ ಆಯುಷ್ಯಪೂರ್ಣ ಮೀಸಲಿರಿಸುವೆ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ರಾಜ್ಯಸಭೆಗೆ ನಾಮನಿರ್ದೇಶನ ಗೊಂಡ ಬಳಿಕ ಪ್ರಥಮವಾಗಿ ಶನಿವಾರ ಧರ್ಮಸ್ಥಳಕ್ಕೆ ಆಗಮಿಸಿದ ಅವರು
ತಾಲೂಕಿನ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಚಾರ್ಮಾಡಿಯಲ್ಲಿ ಸ್ವಾಗತವನ್ನು ಸ್ವೀಕರಿಸಿ ಬಳಿಕ ಧರ್ಮಸ್ಥಳದ ನಿವಾಸ(ಬೀಡು)ದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದರು.
ಪ್ರಧಾನಿ ಮೋದಿಯವರು ಧರ್ಮಸ್ಥಳದ ಎಲ್ಲ ಸೇವಾ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ದೂರವಾಣಿ ಮೂಲಕ ಮಾತನಾಡಿ ನನಗೆ ಈ ಅವಕಾಶ ನೀಡಿದ್ದಾರೆ. ಅತ್ಯಂತ ಒತ್ತಡದ ಜವಾಬ್ದಾರಿಯಲ್ಲಿರುವ ಪ್ರಧಾನಿಯವರು ಧರ್ಮಸ್ಥಳದ ಹೆಗ್ಗಡೆ ಅವರ ಸೇವೆಯನ್ನು ಗುರುತಿಸಿ ದ್ದಾರೆ ಎನ್ನುವುದಾದರೆ, ನನ್ನ ಹೊಣೆ ಅದಕ್ಕಿಂತ ದೊಡ್ಡದಲ್ಲ ಅಂದುಕೊಂಡಿ ದ್ದೇನೆ. ಪ್ರಸ್ತುತ ರಾಜ್ಯದಲ್ಲಿರುವ ಧರ್ಮಸ್ಥಳದ ಎಲ್ಲ ಸೇವಾ ಕಾರ್ಯ ಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುವ ಆಲೋಚನೆಯಿದೆ ಎಂದರು.
ಹರೀಶ್ ಪೂಂಜ ಸ್ವಾಗತಿಸಿ, ರಾಜ್ಯದ ಜನತೆಗೆ ಇದು ಅತ್ಯಂತ ಸಂತಸ ದಿನ, ರಾಜ್ಯಸಭೆಗೆ ಡಾ| ಹೆಗ್ಗಡೆಯವರನ್ನು ಆಯ್ಕೆ ಮಾಡುವ ಮೂಲಕ ಗ್ರಾಮೀ ಣಾಭಿವೃದ್ಧಿ ಕಲ್ಪನೆಗೆ ಶಕ್ತಿ ತುಂಬುವ ಕೆಲಸವಾಗಿದೆ ಎಂದರು.
ಡಾ| ಹೇಮಾವತಿ ವೀ.ಹೆಗ್ಗಡೆ, ಡಿ. ಹರ್ಷೇಂದ್ ಕುಮಾರ್, ಕುಟುಂಬ ಸ್ಥರು, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕಸಾಪ ಜಿಲ್ಲಾಧ್ಯಕ್ಷ ಡಾ| ಎಂ.ಪಿ. ಶ್ರೀನಾಥ್, ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್., ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ, ಸಿರಿ ಸಂಸ್ಥೆ ಆಡಳಿತ ನಿರ್ದೇಶಕ ಜನಾರ್ದನ ಕೆ.ಎನ್. ಮತ್ತಿತರರು ಉಪಸ್ಥಿತರಿದ್ದರು.
ಪಕ್ಷಾತೀತ ಅಭಿನಂದನೆ ಸ್ಮರಿಸಿದ ಡಾ| ಹೆಗ್ಗಡೆ
ಎಲ್ಲ ಚಟುವಟಿಕೆಗಳಿಂದ ದೂರ ಉಳಿದಿದ್ದವನು ನಾನು. ಆದರೆ ನನ್ನ ಸೇವಾ ಸಾಧನೆಯನ್ನು ಪ್ರಧಾನಿ ಮೋದಿ ಯವರು ಗುರುತಿಸಿ ಜವಾಬ್ದಾರಿ ನೀಡಿದ್ದರಿಂದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಎಲ್ಲ ರಾಜಕೀಯ ಪಕ್ಷದವರೂ ಪಕ್ಷಾತೀತವಾಗಿ ಅಭಿನಂದಿಸಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾನು ನಿಮ್ಮವನಾಗಿಯೇ ಇರುತ್ತೇನೆ ಎಂದು ಡಾ| ವೀರೇಂದ್ರ ಹೆಗ್ಗಡೆ ಅವರು ನುಡಿದರು.