ಬೆಳ್ತಂಗಡಿ: ಪ್ರಪಂಚದ ಪರಿವರ್ತನೆಯಲ್ಲಿ ಕೃತಕವಾಗಿ ಬದುಕದೆ ಸ್ವಾಭಾವಿಕವಾಗಿ ಜೀವಿಸುವುದನ್ನು ಕಲಿತಾಗ ಎಲ್ಲವೂ ಸುಂದರ ಕ್ಷಣವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದಲ್ಲಿ ಹೆಗ್ಗಡೆಯವರ ನಿವಾಸದಲ್ಲಿ ಕಲಾವಿದ, ಬಹುಶ್ರುತ ವಿದ್ವಾಂಸರಾದ ಡಾ| ಎಂ.ಪ್ರಭಾಕರ ಜೋಶಿ ಅವರು ಬರೆದ ಲೇಖನಗಳ ಸಂಕಲನ “ಶ್ರೀ ವೀರೇಂದ್ರ ಹೆಗ್ಗಡೆ ದೃಷ್ಟಿ -ಸೃಷ್ಟಿ’ ಎಂಬ ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಗ್ರಂಥ ಲೋಕಾರ್ಪಣೆ ಮಾಡಿದ ಉಜಿರೆಯ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ಮಾತನಾಡಿ, ಸೂರ್ಯನ ಮಹಾಶಕ್ತಿಯನ್ನು ಅನುಭವಿಸಿದಷ್ಟು ವರ್ಣಿಸಲು ಸಾಧ್ಯವಿಲ್ಲ. ಹೆಗ್ಗಡೆ ಅವರ ವ್ಯಕ್ತಿತ್ವವೂ ಅದೇ ರೀತಿಯದಾಗಿದೆ. ಅಂದು ವೀರೇಂದ್ರ ಕುಮಾರ್ ಜನಿಸಿದಾಗ ಧರ್ಮಸ್ಥಳದ ಜ್ಯೋತಿ ಬೆಳಗಿತು ಎಂದು ಹಿರಿಯರು ಹೇಳಿದ್ದರಂತೆ. ಆದರೆ, ಈಗ ಹೆಗ್ಗಡೆಯವರು ಭುವನದ ಜ್ಯೋತಿಯಾಗಿ ಬೆಳೆಯುತ್ತಿದ್ದಾರೆ ಎಂದು ಬಣ್ಣಿಸಿದರು.
ಡಾ| ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಬಹಳ ದಿನಗಳ ಕಲ್ಪನೆ ಮತ್ತು ಆಸೆಯೊಂದಿಗೆ ಪುಸ್ತಕ ಪ್ರಕಟಿತವಾಗಿದೆ. ಆನೆಯನ್ನು ಕನ್ನಡಿಯಲ್ಲಿ ತೋರಿಸಿದ ರೀತಿ, ಆಕಾಶವನ್ನು ಹನಿ ನೀರಿನ ಬಿಂದುವಿನಲ್ಲಿ ತೋರಿಸಿದಂತೆ ಹೆಗ್ಗಡೆ ಅವರ ವಿಶಾಲ ವ್ಯಕ್ತಿತ್ವವನ್ನು ಕಟ್ಟಿಡುವುದು ಕಷ್ಟ. ಆದರೂ ನನ್ನದೊಂದು ಸಣ್ಣ ಪ್ರಯತ್ನ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಮುಂಬಯಿ ಟೆಸ್ಟ್ ಪಂದ್ಯಕ್ಕೆ ಶೇ. 25 ವೀಕ್ಷಕರಿಗಷ್ಟೇ ಪ್ರವೇಶ
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಡಾ| ಎಂ.ಪಿ.ಶ್ರೀನಾಥ್, ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್, ಶ್ರೀ ಕ್ಷೇ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಮಂಜುನಾಥ್, ಬಿ. ಭುಜಬಲಿ ಮುಂತಾದವರು ಉಪಸ್ಥಿತರಿದ್ದರು.ಉಜಿರೆ ಅಶೋಕ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಡಾ| ಪ್ರಭಾಕರ ಜೋಶಿಯವರು ಸಮಗ್ರ ಅಧ್ಯಯನ ಮಾಡಿ, ನೋಡಿ, ತಿಳಿದು, ಮಾಹಿತಿ ಕಲೆ ಹಾಕಿ ಉತ್ತಮ ಪುಸ್ತಕವನ್ನು ರಚಿಸಿದ್ದಾರೆ. ಪುಸ್ತಕ
ಬಿಡುಗಡೆ ಸಮಾರಂಭವು ನಾನು ಕನ್ನಡಿಯ ಎದುರು ನಿಂತ ಅನುಭವವನ್ನು ನೀಡಿದೆ.
– ಡಾ| ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ