ಬೆಂಗಳೂರು: ಶ್ವೇತ ಕ್ರಾಂತಿಯ ಹರಿಕಾರ ಡಾ.ವರ್ಗೀಸ್ ಕುರಿಯನ್ ಅವರಿಗೆ ಭಾರತ ರತ್ನ ಸಿಗಬೇಕು ಎಂದು ಕೆಎಂಎಫ್ ರಾಯಭಾರಿ, ನಟ ಶಿವರಾಜಕುಮಾರ್ ಹೇಳಿದರು.
ಕೆಎಂಎಫ್ ಸಂಸ್ಥೆ ಜಯನಗರದ ಜೆಎಸ್‌ಎಸ್ ಸಭಾಂಗಣದಲ್ಲಿ ನಡೆದ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಡಾ.ವರ್ಗೀಸ್ ಕುರಿಯನ್ ಅವರ ಜನ್ಮದಿನೋತ್ಸವದಲ್ಲಿ ಮಾತನಾಡಿದರು.
ಅಪ್ಪಾಜಿ ಮತ್ತು ಅಪ್ಪು ಕೆಎಂಎಫ್‌ಗೆ ಎರಡು ಕಣ್ಣು ಇದ್ದಂತೆ. ನಾನೀಗ ಮೂರನೇ ಕಣ್ಣಾಗಿ ಬಂದಿದ್ದೇನೆ. ಅಪ್ಪಾಜಿಯೇ ಎಂದೆಂದಿಗೂ ಕೆಎಂಎಫ್‌ನ ರಾಯಭಾರಿ. ರೈತರು ಎಂದಾಕ್ಷಣ ಅಪ್ಪಾಜಿ ಅವರು ಮರು ಮಾತನಾಡದೆ ಕೆಎಂಎಫ್ ರಾಯಭಾರಿ ಆಗಲು ಒಪ್ಪಿದರು. ನಾನು ಕೂಡ ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದೆ. ಅಪ್ಪಾಜಿಗೆ ನಾನೇ ಹಾಲು ಕುಡಿಸಿದ್ದೇ ಎಂದು ಸ್ಮರಿಸಿದರು. ಗಾಜನೂರಿನಲ್ಲಿರುವಾಗ ಹಸು ಸಾಕಿದ್ದೆವು. ನಾನು ಕೂಡ ಹಸು ಹಾಲು ಕರೆದಿದ್ದೇನೆ. ಮೇವು ಹಾಕಿದ್ದೇನೆ. ಈಗ ನಿಮ್ಮಲ್ಲೂ ಒಬ್ಬ ನಾಗಿರುವುದು ಸಂತಸ ತಂದಿದೆ ಎಂದು ಹೇಳಿದರು. ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮಾನಾಯ್ಕ ಮಾñನಾಡಿ, ಈ ಹಿಂದೆ ಡಾ.ರಾಜಕುಮಾರ್ ಅವರ ಬಳಿಕ ಪವರ್ ಸ್ಟಾರ್ ಪುನೀತ್ ಅವರು ಕೆಎಂಎಫ್ ರಾಯ ಭಾರಿಯಾಗಿದ್ದರು. ಈಗ ಹ್ಯಾಟ್ರಿಕ್‌ಹಿರೋ ಆಗಿರುವುದು ಖುಷಿ ತಂದಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಒಕ್ಕೂಟ ವರನಟ ಡಾ.ರಾಜಕುಮಾರ್ ಕುಟುಂಬಕ್ಕೆ ಚಿರಋಣಿ ಆಗಿರುತ್ತದೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಲಿನ ದರ ಹೆಚ್ಚಳ ಮಾಡುವುದರ ಜತೆಗೆ ಒಕ್ಕೂಟದ ಬೆಳವಣಿಗೆಗೆ ಯೋಜನೆ ರೂಪಿಸಿದೆಂದರು. ಕೆಎಂಎಫ್ ವ್ಯವಸ್ಥಾಪಕ ಜಗದೀಶ್ ಮಾತನಾಡಿ, ಶಿವರಾಜ್‌ಕುಮಾರ್ ಕೆಎಂಎಫ್ ರಾಯಭಾರಿ ಆಗಿರುವುದು ನಮ್ಮ ಭಾಗ್ಯ ಎಂದರು.
ಚಿತ್ರ ಸಾಹಿತಿ ಹಂಸಲೇಖ, ಎಂ.ಪಿ. ಕಾಂತರಾಜು, ಆನಂದಕುಮಾರ್ ಉಪಸ್ಥಿತರಿದ್ದರು.