ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳೇ ಗತಿಸಿವೆ. ಈ ಎರಡೂವರೆ ದಶಕದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ನಿರ್ದೇಶನ, ಸಂಗೀತ ಸಂಯೋಜನೆ, ಸಂಭಾಷಣೆ, ನಟನೆ ಹೀಗೆ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಂಡು, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಇಷ್ಟೆಲ್ಲಾ ಸಾಧನೆಗೆ ಹೆಸರಾದವರು ಬೇರಾರೂ ಅಲ್ಲ, ಡಾ.ವಿ.ನಾಗೇಂದ್ರಪ್ರಸಾದ್.
ಹೌದು, ನಾಗೇಂದ್ರಪ್ರಸಾದ್ ಕನ್ನಡ ಚಿತ್ರರಂಗ ಕಂಡ ಅಚ್ಚುಮೆಚ್ಚಿನ ಗೀತಸಾಹಿತಿ. ಭಕ್ತಿಪ್ರಧಾನವಿರಲಿ, ಟಪ್ಪಾಂಗುಚ್ಚಿ ಬರಲಿ, ಪ್ರಣಯ ಸಂದರ್ಭವೇ ಇರಲಿ, ಮಾಸ್, ಕ್ಲಾಸ್ ಏನೇ ಇರಲಿ ಅದ್ಭುತ ಪದಗಳನ್ನು ಪೋಣಿಸಿ, ಚೆಂದದ ಹಾಡು ಕಟ್ಟಿಕೊಡುವ ಗೀತೆರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. “ಶ್ರೀಮಂಜುನಾಥ’ ಚಿತ್ರದ “ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ…’ ಎಂಬ ಭಾವಪರವಶವಾಗುವಂತಹ ಗೀತೆಯನ್ನೂ ಬರೆಯುತ್ತಾರೆ. “ಕರಿಯ’ ಚಿತ್ರದಲ್ಲಿ “ಕೆಂಚಾಲೋ ಮಚ್ಚಾಲೋ ಹೆಂಗೌಲ ನಿಮ್ ಡವ್‌ಗಳು’ ಎಂಬ ಪಕ್ಕಾ ಲೋಕಲ್ ಗೀತೆಯನ್ನೂ ಗೀಚುತ್ತಾರೆ. ಅವುಗಳ ನಡುವೆ ಮಧುರ ಪ್ರೇಮಗೀತೆಗಳಿಗೂ ಪೆನ್ನು ಹಿಡಿಯುತ್ತಾರೆ. ಅಲ್ಲೆಲ್ಲೋ ಪ್ರೀತಿ ಹೆಚ್ಚಿಸಲು “ಕರಿಯ ಐ ಲವ್ ಯು…’ ಅಂತಾರೆ, ಇನ್ನೆಲ್ಲೋ ಭಾವುಕ ಹೆಚ್ಚಿಸುವಂತಹ “ಅಪ್ಪಾ ಐ ಲವ್ ಯೂ ಪಾ’ ಅಂತಾರೆ, ಮಮತೆ ವಾತ್ಸಲ್ಯದ “ಅಮ್ಮಾ ನನ್ನೀ ಜನ್ಮ, ನಿನ್ನಾ ವರದಾನವಮ್ಮ… ಹಾಡಿಗೂ ಕಾರಣವಾಗುತ್ತಾರೆ. ಹೇಳುತ್ತಾ ಹೋದರೆ ಒಂದಾ, ಎರಡಾ? ಸಾವಿರಾರು ಹಾಡುಗಳಲ್ಲಿ ಅದೆಷ್ಟೋ ಯುಗಳ ಗೀತೆ, ವಿರಹ ಗೀತೆ, ಮಾಸು-ಕ್ಲಾಸುಗಳ ಹಾಡುಗಳಿಗೆ ಪೋಣಿಸಿರುವ ಪದಗಳು ಲೆಕ್ಕವಿಲ್ಲ. ಇವೆಲ್ಲವನ್ನೂ ಮೀರುವ ಹಾಡುಗಳಿಗೂ ಇದೀಗ ನಾಗೇಂದ್ರಪ್ರಸಾದ್ ಕಾರಣವಾಗಿದ್ದಾರೆ ಅಂದರೆ ನಂಬಲೇಬೇಕು.
ಹೌದು, ದರ್ಶನ್ ಅಭಿನಯದ “ಕುರುಕ್ಷೇತ್ರ’ದಲ್ಲಿ ನಾಗೇಂದ್ರಪ್ರಸಾದ್ ಏಳು ಗೀತೆಗಳನ್ನು ಬರೆದಿದ್ದಾರೆ. ಪೌರಾಣಿಕ ಸಿನಿಮಾದಲ್ಲಿ ಬರೆಯುವುದು ಸುಲಭದ ಮಾತಲ್ಲ. ಬರೆದರೂ, ಅದು ಹಿಟ್ ಆಗುವುದು ದೊಡ್ಡ ಮಾತೇ ಸರಿ. ಇದೆಲ್ಲವೂ ಈಗ ಸಾಧ್ಯವಾಗಿದೆ. “ಕುರುಕ್ಷೇತ್ರ’ದ “ಚಾರುತಂತಿ ನಿನ್ನ ತನುವು ನುಡಿಸ ಬರುವೆನು ದಿನಾ ಪ್ರತಿದಿನಾ..’ ಹಾಡು ಮೆಚ್ಚುಗೆ ಪಡೆದಿದೆ. ವಿಶೇಷವೆಂದರೆ, ನಾಗೇಂದ್ರಪ್ರಸಾದ್ ಅವರು ದರ್ಶನ್ ಅಭಿನಯದ ಮೊದಲ ಚಿತ್ರ “ಮೆಜೆಸ್ಟಿಕ್’ ಚಿತ್ರಕ್ಕೂ ಎಲ್ಲಾ ಹಾಡು ಬರೆದಿದ್ದರು. ಈಗ ದರ್ಶನ್ ಅಭಿನಯದ 50 ನೇ ಚಿತ್ರ “ಕುರುಕ್ಷೇತ್ರ’ಕ್ಕೂ ಎಲ್ಲಾ ಹಾಡು ಬರೆದಿದ್ದಾರೆ. ಪೌರಾಣಿಕ ಸಿನಿಮಾದಲ್ಲಿ ಹಾಡು ಬರೆಯುವುದೇ ಒಂದು ಚಾಲೆಂಜ್. ಆ ಬಗ್ಗೆ ಹೇಳುವ ನಾಗೇಂದ್ರಪ್ರಸಾದ್, “ನಾನು “ಕುರುಕ್ಷೇತ್ರ’ಕ್ಕೆ ಏಳು ಹಾಡು ಬರೆದಿದ್ದೇನೆ. ಒಂದು ವಾರ್ ಮೇಲಿನ ಹಾಡು ಇದೆ. ಉಳಿದಂತೆ ಆರು ಹಾಡುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ “ಸಾಹೋರೆ ಸಾಹೋ’ ಹಾಡು ಕೂಡ ಮೆಚ್ಚುಗೆ ಪಡೆದಿದೆ. ಚಿತ್ರದಲ್ಲಿ ಬರುವ ಅಭಿಮನ್ಯುವಿಗೊಂದು “ಉತ್ತರೆ ಉತ್ತರೆ ಚಂದ ನೀನು ನಕ್ಕರೆ..’, “ಜುಮ್ಮ ಜುಮ್ಮ ಜುಮ್’ ಎನ್ನುವ ಹಾಡು ಹಾಗೂ ದ್ರೌಪದಿ ಸೀರೆ ಎಳೆಯುವ ಸಂದರ್ಭದಲ್ಲೊಂದು ಬರುವ ಹಾಡು ಬರೆದಿದ್ದೇನೆ. ಇಲ್ಲಿ ಭಾವನೆಗೆ ಹೆಚ್ಚು ಒತ್ತು ಕೊಡಲಾಗಿದೆ. ನಾನು ಈವರೆಗೆ ಎಲ್ಲಾ ಪ್ರಾಕಾರದ ಹಾಡುಗಳನ್ನೂ ಬರೆದಿದ್ದೇನೆ. ಪೌರಾಣಿಕ ಸಿನಿಮಾ ಹಾಡು ಅಂದಾಗ, ದೊಡ್ಡ ಚಾಲೆಂಜ್ ಸಹಜ. ಕಮರ್ಷಿಯಲ್ ಆಗಿರಬೇಕು, ಸಂಸ್ಕೃತ ಇರಬಾರದು. ತೀರಾ ಹೊಸಗನ್ನಡ ಬರೆಯುವಂತಿಲ್ಲ. ಅನ್ಯಭಾಷೆ ಪದಗಳು ಸೇರುವಂತಿಲ್ಲ. ಹಳೆಗನ್ನಡದ ಜೊತೆ ಕಂದ ಪದ್ಯಗಳನ್ನು ಇಲ್ಲಿ ಬಳಸಿದ್ದೇನೆ. ಆದಷ್ಟು ಜನರಿಗೂ ಸುಲಭವಾಗಿ ಅರ್ಥವಾಗಬೇಕು. ಹರಿಕೃಷ್ಣ ಅವರ ಸಂಯೋಜಿಸಿದ ರಾಗಕ್ಕೆ ತಕ್ಕಂತೆಯೇ ಕುಳಿತು ಮೂಡಿಸಿದ ಹಾಡುಗಳಿವು. ಇಂತಹ ಚಿತ್ರಗಳಲ್ಲಿ ಕಲ್ಪನೆಗೆ ತಕ್ಕಂತೆ ಬರೆಯುವಾಗ, ಭಾಷೆಯ ತತ್ವ ಮುಖ್ಯವಾಗುತ್ತೆ’ ಎಂದು ವಿವರ ಕೊಡುತ್ತಾರೆ ಅವರು.
“ಕಮರ್ಷಿಯಲ್ ಚಿತ್ರಗಳ ಹಾಡುಗಳಲ್ಲಿ ಒಮ್ಮೊಮ್ಮೆ ಇಂಗ್ಲೀಷ್ ಪದಬಳಕೆ ಮಾಡಬೇಕಾಗುತ್ತೆ. ಅದು ಪ್ರಾಸಬೇಕೆಂಬ ಕಾರಣಕ್ಕೆ. ಆದರೆ, ಪೌರಾಣಿಕ ಚಿತ್ರದಲ್ಲಿ ಹಾಗೆಲ್ಲ ಮಾಡುವಂತಿಲ್ಲ. “ಕೆಜಿಎಫ್’ ಚಿತ್ರದಲ್ಲಿ “ಸಲಾಂ ರಾಕಿ ಭಾಯ್’ ಎಂದು ಬರೆಯೋಕೆ ಕಾರಣ, ಕಥೆ ಬಾಂಬೆಯಲ್ಲಿ ಶುರುವಾಗಿದ್ದು. ಕೆಲವೊಮ್ಮೆ ಪಾತ್ರಗಳ ಮೇಲೆ ಯೋಚಿಸಿ ಗೀತೆ ಬರೆಯಬೇಕು. ಇಲ್ಲಾ ಅಂದರೆ ಏಕತಾನತೆ ಆಗುತ್ತೆ. “ಟಗರು’ ಚಿತ್ರದಲ್ಲಿ “ಟಗರು ಬಂತು ಟಗರು..’ ಗೀತೆಗೆ ಆ ಪಾತ್ರ ಕಾರಣವಾಯ್ತು. ಹೀಗೆ ಆಯಾ ಸಿನಿಮಾಗಳ ಪಾತ್ರಗಳಿಗೆ ತಕ್ಕಂತೆ ಗೀತೆ ಬರೆಯಬೇಕು. ಆ ಮೂಲಕ ಹೀರೋಗಳ ಇಮೇಜ್ ಕಟ್ಟಿಕೊಡುವ ಪ್ರಯತ್ನ ಕೂಡ ಗೀತೆಯಲ್ಲಾಗಬೇಕು. ಪ್ರತಿ ಹಾಡಿನಿಂದ ಹಾಡಿಗೆ, ಹೀರೋ ಇಮೇಜ್ ಕಟ್ಟಿಕೊಡುವ ಜವಾಬ್ದಾರಿ ಇಟ್ಟುಕೊಂಡೇ ಬರೆಯುತ್ತೇನೆ. ಬಹುತೇಕ ಸ್ಟಾರ್ ನಟರಿಗೆ ಶೀರ್ಷಿಕೆ ಗೀತೆ ಬರೆದ ಹೆಮ್ಮೆ ನನ್ನದು. ಈಗ ಕುರುಕ್ಷೇತ್ರ ಎಂಬ ಪೌರಾಣಿಕ ಚಿತ್ರದಲ್ಲಿ ಬೇರೆ ರೀತಿಯ ಗೀತಪ್ರಯೋಗ ಮಾಡಿದ್ದು ಖುಷಿಕೊಟ್ಟಿದೆ. ಅತ್ತ ಸುದೀಪ್ ಅವರ ಕಮರ್ಷಿಯಲ್ ಸಿನಿಮಾ “ಪೈಲ್ವಾನ್’ ಚಿತ್ರದಲ್ಲೂ ಟ್ರೆಂಡ್ ಸಾಂಗ್ ಹುಟ್ಟುಕೊಂಡಿವೆ ಎನ್ನಲು ಸಂತಸವಾಗುತ್ತೆ’ ಎನ್ನುತ್ತಲೇ ತಮ್ಮ ಪದಪುಂಜಗಳ ಬಗ್ಗೆ ಹೇಳಿ ಸುಮ್ಮನಾಗುತ್ತಾರೆ ನಾಗೇಂದ್ರ ಪ್ರಸಾದ್.
ವಿಭ