ಬಳ್ಳಾರಿ: ರಂಗತೋರಣ ಸಂಸ್ಥೆ ಕೊಡಮಾಡುವ ಜೋಳದರಾಶಿ ದೊಡ್ಡನಗೌಡ ರಂಗಪುರಸ್ಕಾರಕ್ಕೆ ಈ ಬಾರಿ ನಾಡಿನ ಕವಿ, ಸಾಹಿತಿ, ನಾಟಕಕಾರ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಅವನ್ನು ಆಯ್ಕೆ ಮಾಡಿದ್ದು, ಜು.29 ರಂದು ಸಂಜೆ 5:45ಕ್ಕೆ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗತೋಣ, ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನ, ರಾಮೇಶ ಟ್ರಸ್ಟ್ ಸಹಯೋಗದಲ್ಲಿ 2016 ರಿಂದ ಆಯೋಜಿಸಲಾಗುತ್ತಿದೆ. ಈ ಬಾರಿ ಉತ್ತರ ಕರ್ನಾಟಕದವರಿಗೆ ನೀಡಬೇಕೆಂಬ ಒತ್ತಡವಿದ್ದ ಹಿನ್ನೆಲೆಯಲ್ಲಿ ಸಾಹಿತಿ, ನಾಟಕಕರರಾದ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕಾರವು 21 ಸಾವಿರ ರೂ. ನಗದು ಮತ್ತು ಆಕರ್ಷಕ ಪ್ರಶಸ್ತಿ ಹೊಂದಿದೆ. ಈಗಾಗಲೇ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲಾಗಿದ್ದು, ಪುರಸ್ಕಾರ ಸ್ವೀಕರಿಸಲು ಆಗಮಿಸಲಿದ್ದಾರೆ ಎಂದವರು ತಿಳಿಸಿದರು.
ದೊಡ್ಡನಗೌಡರ ಜನ್ಮದಿನದಂದು ಜೋಳದರಾಶಿ ಗ್ರಾಮದ ಅವರ ಸಮಾಧಿಯಿಂದ ರಂಗಮಂದಿರದವರೆಗೆ ಬೈಕ್ ರ್ಯಾಲಿಯೊಂದಿಗೆ ಮೆರವಣಿಗೆ ನಡೆಯಲಿದೆ. ನಂತರ ಜು.29 ರಂದು ಸಂಜೆ 5.45ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ರಂಗಪುರಸ್ಕಾರವನ್ನು ಸಿದ್ದಲಿಂಗಪಟ್ಟಣ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಗುತ್ತದೆ ಎಂದವರು ವಿವರಿಸಿದರು.
ಸಿದ್ದಲಿಂಗ ಪಟ್ಟಣಶೆಟ್ಟಿಯವರು ಸತತ 43 ವರ್ಷಗಳ ಕಾಲ ಬೋಧನೆ, ಸಾಹಿತ್ಯ ಕೃಷಿ ಸಾಧನೆಯಲ್ಲಿ ತೊಡಗಿದವರಾಗಿದ್ದಾರೆ. ಧಾರವಾಡದ ಹಳ್ಳಿಯಿಂದ ಬಂದ ಅವರು, ಹಿಂದಿ ನಾಟಕಕಾರ ಮೋಹನ್ ರಾಕೇಶ್ ಮತ್ತು ಕನ್ನಡದ ಗಿರೀಶ್ ಕಾರ್ನಾಡ್ ನಾಟಕಗಳ ತುಲನಾತ್ಮಕ ಸಂಶೋಧನೆಗಾಗಿ ಡಾಕ್ಟರೇಟ್ ಪಡೆದಿದ್ದಾರೆ. ಇವರು ಹಿಂದಿಯಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ಹಿಂದಿಗೆ ಅನುವಾದ, ಕಥೆ, ಕವನ, ಗೀತೆ, ಚರಿತ್ರೆ, ವಿಮರ್ಶೆ, ವ್ಯಕ್ತಿಚಿತ್ರ, ಅಂಕಣ ಲೇಖನಗಳನ್ನು ಬರೆದಿದ್ದಾರೆ. ಕನ್ನಡ, ಹಿಂದಿ ಭಾಷೆಗಳಲ್ಲಿರುವ ಇವರ ಕೃತಿಗಳು ಇಂಗ್ಲೀಷ್, ಉರ್ದು, ತೆಲುಗು ಭಾಷೆಗಳಿಗೆ ಅನುವಾದಗೊಂಡಿವೆ. ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ರಾಜ್ಯೋತ್ಸವ, ನಾಗಪುರ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಸಿದ್ದನಗೌಡ, ರಾಮೇಶ ಟ್ರಸ್ಟ್ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ, ಅಡವಿಸ್ವಾಮಿ, ಕೆ.ಆರ್.ಮಲ್ಲೇಶ್ ಕುಮಾರ್ ಇತರರಿದ್ದರು.