Advertisement

ಇಂಗ್ಲೆಂಡ್ ನಿಂದ ರಾಜ್ಯಕ್ಕೆ ಬಂದ 537 ಮಂದಿಯಲ್ಲಿ 138 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಲ್ಲ

06:24 PM Dec 21, 2020 | sudhir |

ಬೆಂಗಳೂರು: ರೂಪಾಂತರಗೊಂಡ ಕೊರೊನಾ ವೈರಸ್ ಹೆಚ್ಚು ವ್ಯಾಪಿಸಿರುವ ಇಂಗ್ಲೆಂಡ್‌ನಿಂದ ಕಳೆದ ಎರಡು ದಿನಗಳಿಂದ 537 ಮಂದಿ ಕರ್ನಾಟಕಕ್ಕೆ ಬಂದಿದ್ದು, ಈ ಪೈಕಿ 138 ಮಂದಿ ಕೊರೊನಾ ಪರೀಕ್ಷೆ ಮಾಡಿಸಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ಯೂರೋಪ್‌ನ ಕೆಲ ದೇಶಗಳಲ್ಲಿ ರೂಪಾಂತರಗೊಂಡ ಕೊರೊನಾ ವೈರಾಣು ಹೆಚ್ಚು ಕಾಣಿಸಕೊಂಡಿದೆ. ಸದ್ಯದ ಕೊರೊನಾ ವೈರಾಣುವಿಗಿಂತ ರೂಪಾಂತರಗೊಂಡ ಕೊರೊನಾ ವೈರಾಣುವಿನ ಹರಡುವ ಪ್ರಮಾಣವು ಸಾಕಷ್ಟು ಹೆಚ್ಚಿದೆ. ಈಗಾಗಲೇ ಕೇಂದ್ರ ಸರ್ಕಾರವು ಮುಂಜಾಗ್ರತಾ ಕ್ರಮ ಕುರಿತು ರಾಜ್ಯಗಳಿಗೆ ಪತ್ರ ಬರೆದಿದೆ. ನಾಳೆ ರಾತ್ರಿಯಿಂದ ಇಂಗ್ಲೆಂಡ್‌ನಿಂದ ಬರುವ ವಿಮಾನಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಈ ನಡುವೆ ಕಳೆದ ಎರಡು ದಿನಗಳಿಂದ ರಾಜ್ಯಕ್ಕೆ ಏರ್ ಇಂಡಿಯಾ ಮತ್ತು ಬ್ರಿಟೀಷ್ ಏರ್ ವೇಸ್‌ನಿಂದ ಬೆಂಗಳೂರೊನ ಕೆಂಪೇಗೌಡ ಅಂತಾರಾಷ್ಟ್ರಿಯಾ ವಿಮಾನ ನಿಲ್ದಾಣಕ್ಕೆ 537 ಮಂದಿ ಆಗಮಿಸಿದ್ದಾರೆ. ಈ ಪೈಕಿ 138 ಮಂದಿ ಕೊರೊನಾ ಪರೀಕ್ಷೆಗೊಳಗಾಗದೇ ನೇರವಾಗಿ ಆಗಮಿಸಿದ್ದಾರೆ. ಇಂತಹವರನ್ನು ಅವರ ಸಂಪರ್ಕ ಪತ್ತೆಗೆ ಮುಂದಾಗಿದ್ದು, ಶೀಘ್ರಪತ್ತೆ ಮಾಡಿ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದರು.

ಇದನ್ನೂ ಓದಿ:ಕೊಕ್ಕಡ ಮನೆಗೆ ನುಗ್ಗಿ ದರೋಡೆ ಪ್ರಕರಣ: ಆರೋಪಿಗಳ ಪತ್ತೆಗೆ 2 ತಂಡ: ಎಸ್ಪಿ ಲಕ್ಷ್ಮಿ ಪ್ರಸಾದ್

ಬ್ರಿಟನ್‌ನಿಂದ ಬಂದವರಿಗೆ ಹೊಸ ಮಾರ್ಗಸೂಚಿ ಹೊರಡಿಸಲಾಗುತ್ತದೆ. ಒಂದು ವಾರ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಕ್ರಮಕೈಗೊಳ್ಳಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೆ ಕಿಯೋಸ್ಕ್ ಇಡಲಾಗುತ್ತದೆ. ಲಕ್ಷಣ ಇದ್ದವರರ ಪರೀಕ್ಷೆಗೆ ಕ್ರಮಕೈಗೊಳ್ಳಲಾಗುತ್ತದೆ. ಕಳೆದ ಎರಡು ವಾರದಿಂದ ಇಂಗ್ಲೆಂಡ್ ಸೇರಿದಂತೆ ನೆರೆಯ ದೇಶಗಳಿಂದ ಬಂದವರು ಆರ್‌ಟಿಪಿಸಿರ್ ಪರೀಕ್ಷೆಗೊಳಗಾಗಬೇಕು, ಒಂದು ವೇಳೆ ಪಾಸಿಟಿವ್ ಸ್ಥಳೀಯ ಆರೋಗ್ಯ ಸಂಸ್ಥೆಗೆ ತೆರಳಬೇಕು. ಅಲ್ಲಿ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ತಿಳಿಸಿದರು.

ರೂಪಾಂತರ ಕೊರೊನಾ ವೈರಸ್ ರಾಜ್ಯದಲ್ಲಿ ಹರಡದಂತೆ ತಡೆಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದ್ಯ ಇರುವ ಪರೀಕ್ಷಾ ಕಿಟ್, ಲಸಿಕೆಯೇ ಇದಕ್ಕೂ ಬಳಸಬಹುದು. ಒಂದು ವೇಳೆ ಈ ವೈರಸ್ ವ್ಯಾಪಿಸಿದರೆ ಲಾಕ್‌ಡೌನ್ ಸಂದರ್ಭದಲ್ಲಿ ಜಾರಿಗೆ ತಂದಿದ್ದ ಎಲ್ಲಾ ನಿಯಮಗಳು ಮತ್ತೆ ಜಾರಿಗೊಳಸಲಾಗುವುದು ಎಂದು ಮಾಹಿತಿ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next