Advertisement

Shankar Nethralaya: ಶಂಕರ ನೇತ್ರಾಲಯ ಸಂಸ್ಥಾಪಕ ಡಾ.SS ಬದ್ರಿನಾಥ್‌ ವಿಧಿವಶ

01:18 PM Nov 22, 2023 | Nagendra Trasi |

ಚೆನ್ನೈ: ಪ್ರಸಿದ್ಧ ಶಂಕರ ನೇತ್ರಾಲಯದ ಸಂಸ್ಥಾಪಕ, ವಿಟ್ರೋರೆಟಿನಲ್‌ ಸರ್ಜನ್‌ ಡಾ.ಎಸ್.ಎಸ್.ಬದ್ರಿನಾಥ್‌ (83ವರ್ಷ) ಅವರು ತಮ್ಮ ನಿವಾಸದಲ್ಲಿ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:DK Shivakumar: ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವಿಗೆ ಬದ್ಧ

ಶಂಕರ ನೇತ್ರಾಲಯದ ಅಧಿಕೃತ ವೆಬ್‌ ಸೈಟ್‌ ನಲ್ಲಿರುವ ಮಾಹಿತಿ ಪ್ರಕಾರ, ಡಾ.ಬದ್ರಿನಾಥ್‌ ಅವರು 1940ರ ಫೆಬ್ರವರಿ 24ರಂದು ಚೆನ್ನೈನ ಟ್ರಿಪ್ಲಿಕೇನ್‌ ನಲ್ಲಿ ಜನಿಸಿದ್ದರು. ಮದ್ರಾಸ್‌ ಮೆಡಿಕಲ್‌ ಕಾಲೇಜಿನಲ್ಲಿ ಪದವಿ ಪಡೆದ ನಂತರ 1963ರಿಂದ 1968ರವರೆಗೆ ನ್ಯೂಯಾರ್ಕ್‌ ಯೂನಿರ್ವಸಿಟಿ ಹಾಗೂ ಬ್ರೂಕ್ಲೈನ್‌ ಮೆಡಿಕಲ್‌ ಕಾಲೇಜಿನಲ್ಲಿ ನೇತ್ರವಿಜ್ಞಾನ ಪದವಿ ಪಡೆದಿದ್ದರು.

ಡಾ.ಬದ್ರಿನಾಥ್‌ ಅವರು ಅಮೆರಿಕದಲ್ಲಿದ್ದಾಗ ಡಾ.ವಸಂತಿ ಅವರನ್ನು ಭೇಟಿಯಾಗಿದ್ದರು. ಒಂದು ವರ್ಷದ ಬಳಿಕ ಬದ್ರಿನಾಥ್‌ ಅವರು ಮೆಸಾಚುಸೆಟ್ಸ್‌ ನಲ್ಲಿ ಡಾ.ಚಾರ್ಲ್ಸ್‌ ಎಲ್‌ ಸ್ಕೇಪೆನ್ಸ್‌ ಅವರ ಕೈಕೆಳಗೆ ವೈದ್ಯರಾಗಿ 1970ರವರೆಗೆ ಕಾರ್ಯನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಬದ್ರಿನಾಥ್‌ ಅವರು ಏಕಕಾಲದಲ್ಲೇ ಕೆನಡಾದ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ ಮತ್ತು ಓಪ್ತಾಮೋಲಾಜಿ ಅಮೆರಿಕನ್‌ ಬೋರ್ಡ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

Advertisement

1970ರಲ್ಲಿ ಡಾ.ಬದ್ರಿನಾಥ್‌ ಅವರು ಕುಟುಂಬದ ಜತೆ ಭಾರತಕ್ಕೆ ವಾಪಸ್‌ ಆಗಿದ್ದರು. ತದನಂತರ ಚೆನ್ನೈನ ಅಡ್ಯಾರ್‌ ನಲ್ಲಿ ಸುಮಾರು ಆರು ವರ್ಷಗಳ ಕಾಲ ಕಣ್ಣಿನ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಆ ನಂತರ 1970ರಿಂದ 1972ರವರೆಗೆ ಎಚ್.ಎಂ.ಆಸ್ಪತ್ರೆಯಲ್ಲಿ ಮತ್ತು 1973ರಿಂದ 1978ರವರೆಗೆ ವಿಜಯ ಆಸ್ಪತ್ರೆಯಲ್ಲಿ ಸರ್ಜನ್‌ ಆಗಿ ಕಾರ್ಯನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ಜನಸಾಮಾನ್ಯರಿಗೆ ದುಬಾರಿಯಾಗುತ್ತಿದೆ ಎಂಬುದನ್ನು ಮನಗಂಡ ಡಾ.ಬದ್ರಿನಾಥ್‌ ಅವರು 1978ರಲ್ಲಿ ಮೆಡಿಕಲ್‌ ರಿಸರ್ಚ್‌ ಫೌಂಡೇಶನ್‌ ಶಂಕರ ನೇತ್ರಾಲಯವನ್ನು ಸ್ಥಾಪಿಸಿದ್ದರು. ಈ ಲಾಭರಹಿತ ಚಾರಿಟೇಬಲ್‌ ಸಂಸ್ಥೆಯ ಮೂಲಕ ಡಾ.ಬದ್ರಿನಾಥ್‌ ಅವರು ದೇಶಾದ್ಯಂತ ಲಕ್ಷಾಂತರ ಜನರಿಗೆ ಕೈಗೆಟಕುವ ದರದಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಜನಪ್ರಿಯರಾಗಿದ್ದರು.

ದಶಕಗಳ ಕಾಲ ಚಾರಿಟೇಬಲ್‌ ಕಾರ್ಯದ ಮೂಲಕ ಸೇವೆ ಸಲ್ಲಿಸಿದ್ದ ಡಾ.ಎಸ್.ಎಸ್.‌ ಬದ್ರಿನಾಥ್‌ ಅವರಿಗೆ ದೇಶದ ಪ್ರತಿಷ್ಠಿತ ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next