Advertisement
ನಗರದ ಸಿದ್ಧಗಂಗಾ ಮಠದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಸ್ವಾಮೀಜಿಯವರ ಪುಣ್ಯಸ್ಮರಣೆ ಸಮಾರಂಭವನ್ನು 11ನೇ ದಿನವಾದ ಜ.31ರಂದು ಮಠದ ಆವರಣದಲ್ಲಿರುವ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಆಯೋಜಿಸಲಾಗಿದೆ. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಿರಿಗೆರೆಯ ತರಳಬಾಳು ಸಂಸ್ಥಾನ ಮಠದ ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಹಾಗೂ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪುಣ್ಯಸ್ಮರಣೆ ಸಮಾರಂಭ ಜರುಗಲಿದೆ ಎಂದರು.
Related Articles
Advertisement
ಶ್ರೀಗಳ ಮಾರ್ಗದರ್ಶನದಲ್ಲಿ ಮಠವನ್ನು ಮುನ್ನಡೆಸಲಾಗುವುದು. ಈ ಹಿಂದೆ ಮಠದಲ್ಲಿ ಏನೆಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಜಾತ್ಯತೀತವಾಗಿ ನಡೆಯುತ್ತಿತ್ತೋ, ಅದೇ ರೀತಿಯಲ್ಲಿ ಮುಂದೆಯೂ ನಡೆಯಲಿದೆ. ಮಠದಲ್ಲಿ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕಡೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರು ಶಿವಕುಮಾರ ಸ್ವಾಮೀಜಿಯವರ ಕಂಚಿನ ಪುತ್ಥಳಿಯನ್ನು ಮಠಕ್ಕೆ ನೀಡಿದು,್ದ ಅದನ್ನು ವಸ್ತು ಪ್ರದರ್ಶನ ಆವರಣದ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಲಾಗುವುದು. ಮುಂದಿನ ದಿನಗಳಲ್ಲಿ ಶ್ರೀಗಳು ಉಪಯೋಗಿಸುತ್ತಿದ್ದ ಪ್ರತಿಯೊಂದು ವಸ್ತುವನ್ನೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತಿಮ ದರ್ಶನ, ಅಂತ್ಯಕ್ರಿಯೆ, ಮತ್ತಿತರ ಎಲ್ಲಾ ಕಾರ್ಯಗಳನ್ನು ಸುಸೂತ್ರವಾಗಿ ನಡೆಸಲು ಹಗಲಿರುಳು ಶ್ರಮಿಸಿದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ ಶ್ರೀಗಳ ದರ್ಶನಕ್ಕೆ ಅನುವು ಮಾಡಿಕೊಟ್ಟ ರೈಲ್ವೆ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಿಗೆ ಧನ್ಯವಾದ ಅರ್ಪಿಸಿದರು.
ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಶ್ರಮಿಸಿದ ಚೆನ್ನೈನ ರೇಲಾ ಆಸ್ಪತ್ರೆ, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ, ಸ್ಥಳೀಯ ಸಿದ್ಧಗಂಗಾ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯ ಶ್ಲಾಘಿಸಿದರು.
ಶ್ರೀಗಳ ಗದ್ದುಗೆಗೆ ಹರಿದು ಬರುತ್ತಿದೆ ಭಕ್ತ ಸಾಗರ
ಸಿದ್ಧಗಂಗಾ ಮಠಕ್ಕೆ ಭಕ್ತ ಸಾಗರ ಹರಿದು ಬರುವುದು ನಿಂತಿಲ್ಲ. ಗುರುವಾರ ಬೆಳಗ್ಗೆಯಿಂದ ರಾತ್ರಿವರೆಗೂ ರಾಜ್ಯದ ವಿವಿಧ ಭಾಗಗಳಿಂದ ಭಕ್ತರ ದಂಡು ಬರುತ್ತಲೇ ಇದೆ. ಶ್ರೀಗಳ ಗದ್ದುಗೆ ನೋಡಿ ಭಕ್ತರು, ಗಣ್ಯರ ದಂಡು ನಮಿಸುತ್ತಿದ್ದಾರೆ. ಮಾಜಿ ಸಚಿವ ವಿ.ಸೋಮಣ್ಣ , ಮಾಜಿ ಶಾಸಕರಾದ ಚೆಲುವರಾಯಸ್ವಾಮಿ, ಬಾಲಕೃಷ್ಣ ಕೂಡ ಆಗಮಿಸಿ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಈ ಮಧ್ಯೆ, ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಮುಂಜಾನೆಯೇ ಬೆಟ್ಟದ ಮೇಲಿನ ಶ್ರೀ ಸಿದ್ಧಲಿಂಗೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ, ಉದ್ಧಾನ ಶಿವಯೋಗಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಬಳಿಕ, ಪಂಚಾಕ್ಷರ ಮಂತ್ರ ಪಠಿಸಿ ಶ್ರೀಗಳ ಗದ್ದುಗೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗದ್ದುಗೆಗೆ ಮಠದ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿ ನಮಿಸಿದರು. ಇದೇ ವೇಳೆ, ಮಕ್ಕಳ ಮೊದಲ ಪ್ರಾರ್ಥನೆಯಲ್ಲಿ ಶ್ವಾನ ಭಾಗಿಯಾಗಿದ್ದು ವಿಶೇಷವಾಗಿತ್ತು.