ಪುತ್ತೂರು: ಕಂಪ್ಯೂಟರ್‌ಗೆ ಕನ್ನಡ ಪರಿಚಯಿಸಿದ ವಿಜ್ಞಾನಿ, “ಕೆ.ಪಿ. ರಾವ್ ಕೀಲಿಮಣೆ’ ವಿನ್ಯಾಸ ತಜ್ಞ ಕಿನ್ನಿಕಂಬಳ ಪದ್ಮನಾಭ ರಾವ್ ಅವರಿಗೆ 11ನೇ ವರ್ಷದ ಬಾಲವನ ಪ್ರಶಸ್ತಿ ಪ್ರದಾನ ಅ. 10ರಂದು ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನದಲ್ಲಿ ನಡೆಯಿತು.
ನವೀಕೃತ ಡಾ| ಕಾರಂತರ ಬರಹದ ಮನೆಯನ್ನು ಉದ್ಘಾಟಿಸಿದ ಸಚಿವ ಎಸ್. ಅಂಗಾರ ಮಾತನಾಡಿ, ಕಾರಂತರು ಬಹು ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ಮೂಲಕ ಬಾಲವನ ವನ್ನು ಹತ್ತೂರಿಗೆ ಪರಿಚಯಿಸಿದರು. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಬರಹದ ಮನೆ ಉತ್ತಮ ವೇದಿಕೆಯಾಗಲಿದೆ ಎಂದರು.
ಬಾಲವನ ಪ್ರಶಸ್ತಿ ಪ್ರದಾನ ಹಾಗೂ ಬಾಲವನದಲ್ಲಿ ಭಾರ್ಗವ ಎಂಬ ಸಂಪಾದಿತ ಕೃತಿಯನ್ನು ಬಿಡುಗಡೆಗೊಳಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಾರಂತರ ಜೀವನ ಚರಿತ್ರೆಯನ್ನು ಸಾಕ್ಷ್ಯ ರೂಪದಲ್ಲಿ ದಾಖಲಿಸಿ ಬಾಲವನದಲ್ಲಿ ನಿತ್ಯವೂ ಪ್ರಸರಿಸುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಮೂಲ ಸೌಕರ್ಯಗಳ ಒದಗಣೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದ ಅವರು, ಈ ಪ್ರಶಸ್ತಿಗೆ ಕೆ.ಪಿ. ರಾವ್ ಅವರ ಆಯ್ಕೆ ಅರ್ಥಪೂರ್ಣ ಎಂದರು.
ಮಂಗಳೂರು ವಿ.ವಿ. ಕಾರಂತ ಅಧ್ಯಯನ ಪೀಠದ ಸದಸ್ಯ ಹಾಗೂ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ನರಸಿಂಹ ಮೂರ್ತಿ ಆರ್. ಅವರು ಕಾರಂತರ ಕುರಿತು ಉಪನ್ಯಾಸ ನೀಡಿದರು.
ಕೆ.ಪಿ. ರಾವ್ ಅವರನ್ನು ಬೆಟ್ಟಂಪಾಡಿ ಸರಕಾರಿ ಪ್ರ.ದ. ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ್ ಚಂದ್ರಗಿರಿ ಪರಿಚಯಿಸಿದರು. ಬಾಲವನ ವಿಶೇಷ ಕರ್ತವ್ಯ ಅಧಿಕಾರಿ ಡಾ| ಸುಂದರ ಕೇನಾಜೆ “ಬಾಲವನದ ಭಾರ್ಗವ’ ಕೃತಿ ಪರಿಚಯ ಮಾಡಿದರು.
ಇದನ್ನೂ ಓದಿ:ಜಮೀರ್ ಅಹಮದ್‌ಗೆ ಉತ್ತರಪ್ರದೇಶ ಚುನಾವಣೆ ಪ್ರಚಾರದ ಉಸ್ತುವಾರಿ?
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾಗೌರಿ, ಸದಸ್ಯೆ ದೀಕ್ಷಾ ಪೈ, ತಹಶೀಲ್ದಾರ್ ರಮೇಶ್ ಬಾಬು, ನಗರಸಭೆ ಪೌರಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿದ್ದರು.
ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಡಾ| ಯತೀಶ್ ಉಳ್ಳಾಲ್ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಮತ್ತು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿ ಶ್ರೀದೇವಿ ನಿರೂಪಿಸಿದರು.