Advertisement

ಸಂಸಾರ ಸಂಘರ್ಷದ ಕೇಂದ್ರವಾಗದಿರಲಿ

08:26 PM Apr 06, 2021 | Team Udayavani |

ಚಿತ್ರದುರ್ಗ: ಸಂಸಾರ ಸದ್ಗತಿಗೆ ಸೋಪಾನ. ಒಂದು ವೇಳೆ ವಿವಾಹದಲ್ಲಿ ವ್ಯವಹಾರ ಬಂದರೆ ಅದು ವಿವಾದವಾಗುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

Advertisement

ನಗರದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ಸೋಮವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಸಾರ ಸದಾ ಸಂಘರ್ಷದ ಕೇಂದ್ರವಾಗಬಾರದು. ಬದುಕನ್ನು ಮುತ್ತಾಗಿಸುವ ಮಾತುಗಳನ್ನು, ಬದುಕನ್ನು ಉದ್ಧರಿಸುವ ಮಾತುಗಳನ್ನು ಕೇಳಬೇಕು. ಹೃದಯ ಹಗುರವಾಗಿಸುವ ನುಡಿಗಳು ಹಾಗೂ ಪ್ರೀತಿ-ಪ್ರೇಮ ಹೆಚ್ಚಾಗುವ ಮಾತುಗಳು ಬೇಕು. ತನ್ಮೂಲಕ ಸಂಸಾರ ಅಭಿವೃದ್ಧಿಯತ್ತ ಸಾಗಬೇಕು. ಹೆಣ್ಣು-ಗಂಡು ಸಮ ಎಂಬ ಸಿದ್ಧಾಂತವನ್ನು ಬಸವಣ್ಣನವರು ಹೇಳಿದರು. ಆದ್ದರಿಂದ ಸತಿ ಪತಿಗಳು ಸತ್ಕಾರ್ಯಗಳನ್ನು ಮಾಡಬೇಕೆಂದರು.

ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ| ಬಸವ ಜಯಚಂದ್ರ ಸ್ವಾಮಿಗಳು ಮಾತನಾಡಿ, ಇಂದು ಒಂದು ಮದುವೆ ಮಾಡಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದರೆ ಎಷ್ಟೇ ಜನ ಬಂದರೂ ಶ್ರೀಮಠದಲ್ಲಿ ವಿವಾಹ ನಡೆಯುತ್ತದೆ. ಇದು ನಮ್ಮೆಲ್ಲರ ಕಲ್ಯಾಣ. ಶ್ರೀಮಠದಲ್ಲಿ ಜ್ಞಾನ ದಾಸೋಹ, ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಿದೆ. ಶ್ರೀಗಳು ಇಲ್ಲದವರಿಗೆ, ಅಳುವವರಿಗೆ ಕಣ್ಣೀರು ಒರೆಸಿದರು. ಭಕ್ತಿ ಇಲ್ಲ ಎಂದರೆ ಶ್ರದ್ಧೆ ಬರಲು ಸಾಧ್ಯವಿಲ್ಲ. ಹಾಗಾಗಿ ನಾವು ಸಮಾಜಮುಖೀ ಕಾರ್ಯಗಳತ್ತ ಮುಖ ಮಾಡಬೇಕು ಎಂದು ಕರೆ ನೀಡಿದರು.

ದಾವಣಗೆರೆ ತಹಶೀಲ್ದಾರ್‌ ಬಿ.ಎನ್‌. ಗಿರೀಶ್‌ ಮಾತನಾಡಿ, ಶ್ರೀಗಳ ಮಾರ್ಗದರ್ಶನದಲ್ಲಿ ಕಲ್ಯಾಣ ಮಹೋತ್ಸವವಾದರೆ ಯಾವುದೇ ತೊಂದರೆ ಆಗುವುದಿಲ್ಲ. ಅದ್ಧೂರಿಯಾಗಿ ಮದುವೆಯಾದ ಅನೇಕರು ಇಂದು ವಿಚ್ಛೇದನಕ್ಕೆ ಒಳಗಾಗುತ್ತಿದ್ದಾರೆ. ನಾನು ಹೆಚ್ಚು ಎನ್ನುವ ಪರಿಕಲ್ಪನೆಯಿಂದ ಅನೇಕ ಸಂಸಾರಗಳು ಹಾಳಾಗುತ್ತಿವೆ. ಹಾಗಾಗಿ ಬಾಂಧವ್ಯ ಬೆಸುಗೆಯಾಗಬೇಕು. ಪ್ರತಿಯೊಬ್ಬರಿಗೂ ಸಂತೋಷವಾಗಿರಬೇಕೆಂಬ ಬಯಕೆ ಇರುತ್ತದೆ. ಅದಕ್ಕಾಗಿ ನಾವು ಬೇರೆಯವರ ಬಗ್ಗೆ ಮಾತನಾಡುವುದನ್ನು ಬಿಡಬೇಕು ಎಂದರು.

ಇದೇ ಸಂದರ್ಭದಲ್ಲಿ 19 ಜೋಡಿಗಳ ವಿವಾಹ ನೆರವೇರಿತು. ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮಿಗಳು, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಬಿ. ವೆಂಕಟೇಶ್‌, ಎಸ್‌. ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ, ಗುತ್ತಿನಾಡು ಪ್ರಕಾಶ್‌, ದಾಸೋಹಿಗಳಾದ ಯಂಗಮ್ಮ, ಎಂ.ಆರ್‌. ಗೋವಿಂದ ರೆಡ್ಡಿ ದೊಡ್ಡಸಿದ್ದವ್ವನಹಳಿV ಮೊದಲಾದವರು ಪಾಲ್ಗೊಂಡಿದ್ದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ವೀರಭದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next