ಚಿಕ್ಕೋಡಿ: ರೈತರು ಬೆಳೆದ ಬೆಳೆಗಳಿಗೆ ಡ್ರೋನ್ ಮೂಲಕ ಕೀಟನಾಶಕ ಸಿಂಪರಣೆ ಮಾಡುವ ಮೂಲಕ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಡ್ರೋನ್ ನಿಂದ ಕೀಟನಾಶಕ ಸಿಂಪರಣೆಯಿಂದ ಇಳುವರಿ ಹೆಚ್ಚುವರಿಯೊಂದಿಗೆ ಭೂಮಿಯ ಫಲವತ್ತತೆ ಹಾಗೂ ಪರಿಸರವನ್ನು ಕಾಪಾಡಿದಂತಾಗುತ್ತದೆ ಎಂದು ರಾಷ್ಟೀಯ ಸ್ಕೀಲ್ ಡೆವಲಪಮೆಂಟ್ ಕಾರ್ಪೋರೇಷನ್ ಅಂತರರಾಷ್ಟ್ರೀಯ ಸಲಹೆಗಾರ ಡಾ. ಶಂಕರ ಗೋಯೆಂಕಾ ಹೇಳಿದರು.
ತಾಲೂಕಿನ ಶಿರಗಾಂವವಾಡಿ ಗ್ರಾಮದಲ್ಲಿ ಕೃಷಿಕ ಚಂದ್ರಕಾಂತ ಭೋಜೆಪಾಟೀಲ ಅವರ ತೋಟದಲ್ಲಿ ಫರೀದಾಬಾದ್‌ನ ವಾವ್ ಗೋ ಗ್ರೀನ್ ಕೃಷಿ ವಿಮಾನ ಡ್ರೋನ್ ಕಂಪನಿಯು ಆರಂಭಿಸಿರುವ ಡ್ರೋನ್ ಚಾಲನೆ, ದುರಸ್ತಿ ತರಬೇತಿ ಮತ್ತು ಸಿಂಪರಣೆ ಸೇವೆಯ ಕೇಂದ್ರದಲ್ಲಿ ಕೃಷಿಕರಿಗೆ ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪರಣೆ ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.
ನಿರುದ್ಯೋಗಿ ಯುವಕರಿಗೆ ಕೇಂದ್ರದಲ್ಲಿ ಡ್ರೋನ್ ಬಳಕೆ ಕುರಿತು ಉಚಿತ ವಸತಿಯುಕ್ತ ತರಬೇತಿ ನೀಡಲಾಗುವುದು. ತರಬೇತುಗೊಂಡ ಯುವಕರಿಗೆ ಉದ್ಯೋಗವನ್ನೂ ನೀಡಲಾಗುವುದು ಎಂದರು.
ಸಾಂಪ್ರದಾಯಿಕ ಪದ್ದತಿಯಿಂದ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಿದರೆ ಎಕರೆಯೊಂದಕ್ಕೆ ಸುಮಾರು 200 ಲೀ.ನೀರು ಬೇಕಾಗುತ್ತದೆ. ಆದರೆ, ಡ್ರೋನ್ ಮೂಲಕ ಕೇವಲ 10 ಲೀ.ನಲ್ಲಿ ಔಷಧಿ ಬೆರೆಸಿ ಇಂಚಿಂಚೂ ಬಿಡದಂತೆ ಔಷಧಿ ಸಿಂಪರಣೆ ಮಾಡಬಹುದಾಗಿದೆ. ಇದರಿಂದ ಬೆಳೆಯ ಪ್ರತಿ ಎಲೆಗೂ ಔಷಧಿ ತಗಲುತ್ತದೆ. ಭೂಮಿಗೆ ಔಷಧಿ ತಾಗುವುದಿಲ್ಲ. ಇದರಿಂದ ಭೂಮಿಯ ಫಲವತ್ತತೆಯೂ ಹಾಳಾಗುವುದಿಲ್ಲ. ಇದರಿಂದಾಗಿ ಶೇ.8 ರಿಂದ 112 ಬೆಳೆ ಇಳುವರಿ ಹೆಚ್ಚುತ್ತದೆ ಎಂದು ಶಂಕರ ಗೋಯೆಂಕಾ ಹೇಳಿದರು.
ಕೃಷಿಕ ಚಂದ್ರಕಾಂತ ಭೋಜೆಪಾಟೀಲ ಮತ್ತು ವಾವ್ ಗೋ ಗ್ರೀನ್ ಕೃಷಿ ವಿಮಾನ ಡ್ರೋನ್ ಕಂಪೆನಿ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಚ್ಚಿ ಬೀಳಿಸುವ ಘಟನೆ: ತಂದೆಗೆ ಥಳಿಸಿ ಮಗಳನ್ನು ಅಪಹರಿಸಿದ ನಾಲ್ವರ ತಂಡ