ಯಲಬುರ್ಗಾ: ಡಾ| ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ, ಕರವೇ (ಯುವಸೇನೆ ಬಣ) ಪದಾ ಧಿಕಾರಿಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್ ಶ್ರೀಶೈಲ ತಳವಾರಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಯುವ ಸೇನೆ ಜಿಲ್ಲಾಧ್ಯಕ್ಷ ಬಸವರಾಜ ಹಳ್ಳಿ ಮಾತನಾಡಿ, ರಾಜ್ಯದಲ್ಲಿ ಕನ್ನಡಿಗರು ಪರಕೀಯರಂತೆ ಜೀವನ ನಡೆಸುತ್ತಿದ್ದಾರೆ. ರಾಜ್ಯದ ಸಕಲ ಸವಲತ್ತುಗಳನ್ನು ಬಳಸಿಕೊಳ್ಳುವ ಉದ್ಯಮಿಗಳು ಸ್ಥಳೀಯರಿಗೆ ಕೆಲಸ ಕೊಡುವುದರಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ.
ಕನ್ನಡಿಗರು ಕರ್ನಾಟಕದಲ್ಲಿ ಹುದ್ದೆಗಳಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಪರಿಹಾರವಾಗಬೇಕಿದ್ದ ಡಾ| ಸರೋಜಿನಿ ಮಹಿಷಿ ವರದಿ 1986ರಿಂದ ಇಂದಿನವರೆಗೂ ಜಾರಿಯಾಗದೇ ವರದಿ ಪುಟಗಳು ಧೂಳು ತಿನ್ನುತ್ತಿವೆ. 1986ರ ನಂತರ ಬಂದ ಸರಕಾರಗಳು ಮಹಿಷಿ ವರದಿ ಜಾರಿಗೊಳಿಸದೇ ನಿರ್ಲಕ್ಷ್ಯವಹಿಸಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ| ಸರೋಜಿನಿ ಮಹಷಿ ವರದಿ ಜಾರಿಯಾದರೇ ಉದ್ಯಮಿಗಳಿಗೆ ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗ ದೊರೆಯುತ್ತದೆ. ರೈತರ ಆತ್ಮಹತ್ಯೆ ಪ್ರಕರಣಗಳು ತಡೆಯಬಹುದಾಗಿದೆ. ರೈತ ಕುಟುಂಬಗಳು ಇಂದು ಬೀದಿಗಿಳಿದು ಉದ್ಯೋಗಕ್ಕಾಗಿ ಹೋರಾಟ ನಡೆಸುತ್ತಿದ್ದರೂ, ಸರಕಾರ ಗಮನ ಹರಿಸುತ್ತಿಲ್ಲ. ಕೂಡಲೇರೈತ ಕುಟುಂಬಗಳಿಗೆ ಷರತ್ತು ರಹಿತವಾಗಿ ಉದ್ಯೋಗ ನೀಡಲು ಸೂಚಿಸಬೇಕು. ಡಾ| ಮಹಿಷಿ ವರದಿ ಜಾರಿಗೊಳಿಸಿ ಶೇ. 70 ರಷ್ಟು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ
ನೀಡಬೇಕೆಂದು ಒತ್ತಾಯಿಸಿದರು. ರಾಜ್ಯ, ಕೇಂದ್ರ ಸರಕಾರಗಳು ಕನ್ನಡಿಗರ ವಿಶೇಷ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು. ಕನ್ನಡಿಗರಿಗೆ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದರು.
ಪಟ್ಟಣದ ಕನಕದಾಸ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ವಿವಿಧ ವೃತ್ತಗಳ ಮೂಲಕ ಸಂಚರಿಸಿ ಪಟ್ಟಣದ ಹೃದಯ ಭಾಗದಲ್ಲಿರುವ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಶಿವುಕುಮಾರ ನಾಗನಗೌಡ್ರ, ರಾಮನಗೌಡ ಪಾಟೀಲ, ಯಮನೂರಪ್ಪ ನಾಯಕ, ಮಂಜುನಾಥ ಕುರಿ, ಮಹಾಂತೇಶ, ಶಿವು ಬೆಲ್ಲದ, ಜಗದೀಶ ಪೊಲೀಸ್‌ಪಾಟೀಲ, ಮಲ್ಲಪ್ಪ ಕುರಿ ಇತರರಿದ್ದರು.