Advertisement

ಡಾ|ಸಂಧ್ಯಾ ಪೈ, ಊರ್ಮಿಳಾ ಅವರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ

01:00 AM Mar 04, 2019 | Harsha Rao |

ಉಳ್ಳಾಲ: ವೀರ ರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ನಡೆಸಿದ ಸಾಧನೆಗಾಗಿ “ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ| ಸಂಧ್ಯಾ ಎಸ್‌. ಪೈ ಮತ್ತು ಸಾಹಿತ್ಯೇತರ ಕ್ಷೇತ್ರದಲ್ಲಿ ಊರ್ಮಿಳಾ ರಮೇಶ್‌ ಕುಮಾರ್‌ ಅವರಿಗೆ ಅಬ್ಬಕ್ಕ ಪ್ರಶಸ್ತಿ 2018-19 ನೀಡಿ ಸಮ್ಮಾನಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಂಯುಕ್ತವಾಗಿ ಉಳ್ಳಾಲ ಮೊಗವೀರಪಟ್ಣ ಕಡಲ ಕಿನಾರೆಯಲ್ಲಿ ಎರಡು ದಿನಗಳ ಈ ಉತ್ಸವವನ್ನು ಆಯೋಜಿಸಿದ್ದವು. 

Advertisement

ಆಬ್ಬಕ್ಕ ಪ್ರಶಸ್ತಿ ಪುರಸ್ಕಾರ ನೆರವೇರಿಸಿದ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅನೇಕ ವೀರರಲ್ಲಿ ಉಳ್ಳಾಲವನ್ನು ಆಳಿದ್ದ ವೀರರಾಣಿ ಅಬ್ಬಕ್ಕ ಒಬ್ಬರು. ತನ್ನ ಆಳ್ವಿಕೆಯ ಸಂದರ್ಭ ಆರು ಬಾರಿ ದಾಳಿಯಾದಾಗ ಐದು ಬಾರಿ ಹಿಮ್ಮೆಟ್ಟಿಸಿದ ಕೀರ್ತಿ ಅಬ್ಬಕ್ಕಳದ್ದು. ಈ ನೆಲದ ಜನರ ಸಂಕಷ್ಟಗಳಿಗೆ ಧ್ವನಿಯಾಗಿದ್ದ ರಾಣಿಯನ್ನು ಸ್ಮರಿಸಿಕೊಳ್ಳುವ ನಿಟ್ಟಿನಲ್ಲಿ ಉತ್ಸವ ಆಚರಣೆ ಶ್ಲಾಘನೀಯ.

ಈ ಸಂದರ್ಭ ಸಾಧಕ ಇಬ್ಬರು ಮಹಿಳೆಯರನ್ನು ಸಮ್ಮಾನಿಸುತ್ತಿರುವುದು ಅಭಿನಂದನೀಯ ಎಂದರು.
ಅಬ್ಬಕ್ಕ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ| ಸಂಧ್ಯಾ ಎಸ್‌. ಪೈ ಅವರು, ಗೌಡ ಸಾರಸ್ವತ ಸಮಾಜಕ್ಕೆ ಮತ್ತು ರಾಣಿ ಅಬ್ಬಕ್ಕಳಿಗೆ ಅವಿನಾಭಾವ ಸಂಬಂಧವಿದೆ. ಗೋವಾದಲ್ಲಿ ಗೌಡ ಸಾರಸ್ವತ ಸಮಾಜದ ಮೇಲೆ
ಪೋರ್ಚುಗೀಸರ ದಾಳಿಯ ಬಳಿಕ ನಮ್ಮ ಸಮಾಜದ ಜನರು ಮಂಗಳೂರು ಸೇರಿದಂತೆ ಕರಾವಳಿಗೆ ವಲಸೆ ಬಂದರು.

ಮಂಗಳೂರಿನಲ್ಲಿ ಪೋರ್ಚುಗೀಸರ ವಿರುದ್ಧ ರಾಣಿ ಅಬ್ಬಕ್ಕಳ ಹೋರಾಟದ ವಿಚಾರ ತಿಳಿದ ಗೌಡ ಸಾರಸ್ವತ ಸಮಾಜದವರು ಆಕೆಯ ಸೈನ್ಯದಲ್ಲಿ ಸೇರ್ಪಡೆಯಾಗಿ ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿದ್ದರು ಎಂದರು.
ಅಬ್ಬಕ್ಕ ಪ್ರಶಸ್ತಿ ಪುರಸ್ಕೃತ ಊರ್ಮಿಳಾ ರಮೇಶ್‌ ಕುಮಾರ್‌ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌, ಶ್ರೀಕಾಂತ್‌ ರಾವ್‌, ಜಿಲ್ಲಾ  ಪಂಚಾಯತ್‌ ಸದಸ್ಯೆ ಮಮತಾ ಡಿ. ಎಸ್‌. ಗಟ್ಟಿ, ಬಂಟ್ವಾಳ ತಾಲೂಕು  ಪಂಚಾಯತ್‌ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್‌ ಕುಮಾರ್‌ ಉಳ್ಳಾಲ ಉಪಸ್ಥಿತರಿದ್ದರು. ಪಿ.ಡಿ. ಶೆಟ್ಟಿ ಹಾಗೂ ನಮಿತಾ ಶ್ಯಾಂ ಪ್ರಶಸ್ತಿ ಪತ್ರ ವಾಚಿಸಿದರು.

Advertisement

ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಉದಯವಾಣಿ ಸುದ್ದಿ ವಿಭಾಗದ ಮುಖ್ಯಸ್ಥ  ಮನೋಹರ್‌ ಪ್ರಸಾದ್‌ ಹಾಗೂ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್‌ ಕುಮಾರ್‌ ಉಳ್ಳಾಲ್‌ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಶ್‌ ಬಿ. ವಂದಿಸಿದರು.

ಅಬ್ಬಕ್ಕಳ ಸ್ಮರಣೆಯಿಂದ ವೀರಾವೇಶ
ಮೊದಲ ಸ್ವಾತಂತ್ರÂ ಸಂಗ್ರಾಮ ಪ್ರಾರಂಭಗೊಂಡದ್ದು ಉಳ್ಳಾಲದ ರಾಣಿ ಅಬ್ಬಕ್ಕಳಿಂದ. ಮೊತ್ತಮೊದಲಿಗೆ ಈ ದೇಶದ ಮಣ್ಣಿಗಾಗಿ ನೆಲಕ್ಕಾಗಿ, ಮಣ್ಣಿನ ಜನರಿಗಾಗಿ ತನ್ನ ಜೀವನವನ್ನು ತ್ಯಾಗ ಮಾಡಿದ್ದರು. ಅನಂತರದ ದಿನಗಳಲ್ಲಿ ಝಾನ್ಸಿ ರಾಣಿ, ಚೆನ್ನಮ್ಮ, ಮಂಗಲ್‌ಪಾಂಡೆಯಂಥವರು ಈ ಸಂಗ್ರಾಮವನ್ನು ಮುಂದುವರಿಸಿದ್ದರು.

ಅಬ್ಬಕ್ಕಳ ತ್ಯಾಗ ಬಲಿದಾನ, ದೇಶಕ್ಕಾಗಿ ಮಾಡಿದ ನಿಸ್ವಾರ್ಥ ಸೇವೆ ಇಂದಿಗೂ ಪ್ರಸ್ತುತವಾಗಿದ್ದು, ಅವರ ಸ್ಮರಣೆ ಮಾಡಿದಾಗ ದೇಹದಲ್ಲಿ ವೀರಾವೇಶ ಸಂಚಾರ ಆಗುತ್ತದೆ. ಅಬ್ಬಕ್ಕಳನ್ನು ನೆನಪಿಸುವ ಕಾರ್ಯ ಒಂದು ದಿನಕ್ಕೆ ಸೀಮಿತವಾಗಬಾರದು. ಈ ದೇಶಕ್ಕಾಗಿ ನಾವು ನಮ್ಮ ಮಟ್ಟದಲ್ಲಿ ಕೈಲಾದ ಸೇವೆ ಮಾಡಬೇಕು ಎಂದು ಡಾ| ಸಂಧ್ಯಾ ಎಸ್‌. ಪೈ ಹೇಳಿದರು .

Advertisement

Udayavani is now on Telegram. Click here to join our channel and stay updated with the latest news.

Next