Advertisement
ಉನ್ನತ ಶಿಕ್ಷಣದ ಕಾಶಿ ಎನಿಸಿರುವ ಮಣಿಪಾಲವೀಗ ಮೊದಲ ಪೀಳಿಗೆ ಬಳಿಕ ಎರಡನೆಯ ಪೀಳಿಗೆಯ ಪ್ರಬುದ್ಧ ಸ್ಥಿತಿಯಲ್ಲಿ ರುವಾಗ ಮೂರನೆಯ ಪೀಳಿಗೆ ಇನ್ನಷ್ಟು ಉಚ್ಛಾಯದ ಲಕ್ಷಣವನ್ನು ತೋರಿಸುತ್ತಿದೆ. ಡಾ|ಟಿಎಂಎ ಪೈಯವರು (30.04.1898- 29.05.1979) ಸಂಸ್ಥೆಗಳನ್ನು ಹುಟ್ಟು ಹಾಕಿ ಅದನ್ನು ಮುನ್ನಡೆಸುವ ಎಲ್ಲ ಮಾರ್ಗೋಪಾಯಗಳನ್ನು ಸೂಚಿಸಿದ್ದರು. ಅವರು ಯಾವ ಕನಸುಗಳನ್ನು ಕಂಡಿದ್ದರೋ ಅದನ್ನು ಆಗಗೊಳಿಸಿದವರು ಎರಡನೆಯ ಪೀಳಿಗೆಯ ಡಾ|ರಾಮದಾಸ್ ಎಂ. ಪೈ ಪ್ರಸ್ತುತ ಮಾಹೆ ಕುಲಾಧಿಪತಿಗಳು.
Related Articles
Advertisement
ಅಮೆರಿಕ, ದುಬಾೖ, ಜಮ್ಶೆಡ್‌ಪುರ, ಸಿಕ್ಕಿಂನಲ್ಲಿ: ಅಮೆರಿಕದ ಆಂಟಿಗುವಾದಲ್ಲಿ ಆರಂಭಗೊಂಡ ಮಣಿಪಾಲದ ಅಮೆರಿಕನ್ ಯುನಿವರ್ಸಿಟಿ ಆಫ್ ಆಂಟಿಗುವಾ ಕಾಲೇಜ್ ಆಫ್ ಮೆಡಿಸಿನ್ (ಎಯುಎ)ನಿಂದ ಅಮೆರಿಕ, ಇಂಗ್ಲೆಂಡ್, ಕೆನಡಾದಲ್ಲಿ ವೈದ್ಯ ವೃತ್ತಿ ನಡೆಸುವವರಿಗೆ ಅನುಕೂಲವಾಗಲಿದೆ. ದುಬಾೖಯಲ್ಲಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ವಿಷಯಗಳಲ್ಲಿ ಕ್ಯಾಂಪಸ್ ತೆರೆಯಲಾಗಿದೆ. ಜಮ್ಶೆಡ್‌ಪುರದಲ್ಲಿ ಟಾಟಾ ಸಂಸ್ಥೆಯೊಂದಿಗೆ ವೈದ್ಯಕೀಯ ಕಾಲೇಜನ್ನು ಆರಂಭಿಸಿದ್ದು ಖಾಸಗಿ ಖಾಸಗಿ ಸಹಭಾಗಿತ್ವದಲ್ಲಿ (ಇದು ಕೂಡ ಪಿಪಿಪಿ). ಸಿಕ್ಕಿಂನಲ್ಲಿ ಸಿಕ್ಕಿಂ ಮಣಿಪಾಲ ವಿ.ವಿ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್ ನಡೆಸುತ್ತಿದೆ. ಜೈಪುರದಲ್ಲಿ ಎಂಜಿನಿಯರಿಂಗ್, ಕಾನೂನು ಮೊದಲಾದ ವಿಷಯಗಳನ್ನು ಒಳಗೊಂಡ ವಿ.ವಿ. ನಡೆಯುತ್ತಿದೆ.
ಬ್ಯಾಂಕಿಂಗ್ ಕ್ಷೇತ್ರಕ್ಕೆ ತರಬೇತಿ: ಬ್ಯಾಂಕಿಂಗ್ ಸಿಬಂದಿಗೆ ತರಬೇತಿ ನೀಡುವ ಐಎಂಎ ಸಂಸ್ಥೆ ಬೆಂಗಳೂರಿನಲ್ಲಿದ್ದು ಇದರ ಪ್ರಯೋಜನವನ್ನು ವಿವಿಧ ಬ್ಯಾಂಕ್‌ಗಳು ಪಡೆಯುತ್ತಿವೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಕನಸೂ ಡಾ|ರಾಮದಾಸ್ ಪೈಯವರದ್ದು. ಇದನ್ನು ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ನಡೆಸುತ್ತಿದ್ದು ಡಾ|ರಂಜನ್ ಪೈಯವರು ಜಾಗತಿಕವಾಗಿ ಮತ್ತಷ್ಟು ವಿಸ್ತರಿಸಿದ್ದಾರೆ.
ಜನಸಾಮಾನ್ಯರ ಕಾಳಜಿ: ಡಾ|ರಾಮದಾಸ್ ಪೈಯವರು ಜಾಗತಿಕವಾಗಿ ಬೆಳೆದಿದ್ದರೂ ಅವರ ಕಲ್ಪನೆ ತಂದೆಗೆ ತತ್ಸಮಾನವಾದುದು. ಜನರಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರಕಬೇಕೆಂದು ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯನ್ನು ಜಾರಿಗೆ ತಂದರು. ಬಹುಹಿಂದೆಯೇ ಮಣಿಪಾಲದ ಎಲ್ಲ ಸಂಸ್ಥೆಗಳ ಸಿಬಂದಿಗೆ ಮೆಡಿಕೇರ್ ಸೌಲಭ್ಯವನ್ನು ಕಲ್ಪಿಸಿದವರೂ ಇವರೇ. ಇವೆರಡೂ ಯೋಜನೆಗಳಿಂದ ಸಾವಿರಾರು ಜನರಿಗೆ ಅನುಕೂಲವಾಗುತ್ತಿದೆ.
ಬಹು ಆಯಾಮಗಳಲ್ಲಿ ವಿಸ್ತರಣೆ: ಮಾನವನ ಆರೋಗ್ಯ ಕಾಪಾಡಲು ತಜ್ಞವೈದ್ಯರ ನಿರ್ಮಾಣದಂತೆ ಹೊಟೇಲ್ ಮ್ಯಾನೇಜ್ಮೆಂಟ್ , ಎಂಜಿನಿಯರಿಂಗ್, ಮಾಧ್ಯಮ, ವಾಣಿಜ್ಯ ಹೀಗೆ ವಿವಿಧ ಕ್ಷೇತ್ರಗಳಿಗೂ ಮಾನವ ಸಂಪನ್ಮೂಲ ಅಗತ್ಯ. ಮಣಿಪಾಲಕ್ಕೆ ಬಂದ ಅತಿಥಿಗಳ ವಸತಿಗಾಗಿ ಡಾ| ಟಿಎಂಎ ಪೈಯವರು ಹೊಟೇಲ್ ವ್ಯಾಲಿವ್ಯೂವನ್ನು ಸ್ಥಾಪಿಸಿದರಾದರೆ ಐಟಿಸಿ ಕಂಪೆನಿ ಜತೆ ಒಡಂಬಡಿಕೆ ಮಾಡಿಕೊಂಡು ಹೊಟೇಲ್ ಅಡ್ಮಿನಿಸ್ಟ್ರೇಶನ್ ಕೋರ್ಸ್‌ನ್ನು ದೇಶದಲ್ಲಿಯೇ ಮೊತ್ತ ಮೊದಲು ಆರಂಭಿಸಿದವರು ಡಾ|ರಾಮದಾಸ್ ಪೈಯವರು. ಈಗ ದೇಶ, ವಿದೇಶಗಳ ಸ್ಟಾರ್ ಹೊಟೇಲ್‌ಗಳಿಗೆ ಮಾನವ ಸಂಪನ್ಮೂಲವನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವುದು ಮಣಿಪಾಲದ ವಾಗಾÏ. ಡಾ|ಎಂ.ವಿ.ಕಾಮತ್ ಮಾರ್ಗದರ್ಶನದಲ್ಲಿ ಮಾಧ್ಯಮ ರಂಗಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕಾಗಿ ಎಂಐಸಿ ಆರಂಭಿಸಿದರು. ವೈದ್ಯಕೀಯದಲ್ಲಿ ಉನ್ನತಾಧ್ಯಯನ ನಡೆಸಿದ ಡಾ|ರಾಮದಾಸ್ ಪೈಯವರು ಹೀಗೆ ಆರೋಗ್ಯಕ್ಕೆ ಹೊರತಾದ 20 ಕ್ಷೇತ್ರಗಳ ಶೈಕ್ಷಣಿಕ ವಿಕಾಸಕ್ಕೂ ವಿಶೇಷ ಗಮನ ಹರಸಿದರು. ಹೀಗಾಗಿಯೇ ಮಾಹೆ ನಿಜವಾದ ಅರ್ಥದಲ್ಲಿ ವಿ.ವಿ. ಎಂಬ ಹೆಗ್ಗಳಿಕೆಗೆ ಪಾತ್ರ ಮತ್ತು ಭಾರತ ಸರಕಾರ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಎಂದು ಮೊದಲ ಪಟ್ಟಿಯಲ್ಲಿಯೇ (2017) ಘೋಷಿಸಿತ್ತು.
ಪದ್ಮತ್ರಯರು: ಡಾ|ಟಿಎಂಎ ಪೈಯವರಿಗೆ 1972ರಲ್ಲಿ ಪದ್ಮಶ್ರೀ, ಮುತ್ಸದ್ಧಿ ಟಿ.ಎ.ಪೈಯವರಿಗೆ 1972ರಲ್ಲಿ ಪದ್ಮ ಭೂಷಣ, ಡಾ| ರಾಮದಾಸ್ ಎಂ. ಪೈಯವರಿಗೆ 2011ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಪುರಸ್ಕರಿಸಿತು.
ಮಗನಿಗೇ ಸೀಟು ಕೊಡದ ತಂದೆ!ಮಾಹೆ ವಿ.ವಿ. ಅಧೀನದ ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ಸಹಜವಾಗಿ ಬೇಡಿಕೆ ಹೆಚ್ಚಿಗೆ ಇದೆ. ಇಲ್ಲಿ ಸೀಟು ಗಿಟ್ಟಿಸಿಕೊಳ್ಳಲು ರಾಷ್ಟ್ರ ಮಟ್ಟದ ನಾಯಕರ ಒತ್ತಡ ಬಂದದ್ದೂ ಇದೆ. “ನಮ್ಮಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ನಿಯಮಾವಳಿ ಇದೆ. ಇದರಲ್ಲಿ ನಾನೂ ಕೂಡ ಹಸ್ತಕ್ಷೇಪ ನಡೆಸುವುದಿಲ್ಲ. ಎನ್‌ಆರ್‌ಐ ಸೀಟು ಕೂಡ ಸರಕಾರದ ನಿಯಮಾವಳಿ ಪ್ರಕಾರವೇ ಹಂಚಿಕೆಯಾಗುತ್ತದೆ’ ಎಂದು ಡಾ| ರಾಮದಾಸ್ ಪೈಯವರು ನಯವಾಗಿ ಹೇಳುತ್ತಿದ್ದರು. ಮಗ ಡಾ|ರಂಜನ್ ಪೈಯವರಿಗೆ ಕೂಡ ಡಾ| ರಾಮದಾಸ್ ಪೈಯವರು ಪ್ರವೇಶಾತಿಯನ್ನು ಕೊಟ್ಟಿರಲಿಲ್ಲ. ದಾವಣಗೆರೆಯ ಶಿವಶಂಕರಪ್ಪನವರು “ನೀವೆಂಥವರು ಮಾರಾಯ್ರೆ. ನಾನು ಸೀಟು ಕೊಡುತ್ತೇನೆ’ ಎಂದು ಅವರ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಟ್ಟರು. “ನಾನೇ ನಿಯಮಾವಳಿ ಉಲ್ಲಂಘನೆ ಮಾಡಬಾರದು’ ಎಂದು ಮಗನಿಗೆ ಡಾ| ಪೈಯವರು ಹೇಳಿದ್ದರು ಎಂಬುದನ್ನು ಸಹಕುಲಾಧಿಪತಿ ಡಾ|ಎಚ್.ಎಸ್.ಬಲ್ಲಾಳ್ ಸ್ಮರಿಸಿಕೊಳ್ಳುತ್ತಾರೆ. ಡಾ|ಟಿಎಂಎ ಪೈಯವರ ಮನಸ್ಸಿನಲ್ಲಿದ್ದ ಯೋಜನೆಗಳನ್ನು ಪೂರ್ತಿಗೊಳಿಸಿದವರು ಡಾ|ರಾಮದಾಸ್ ಪೈಯವರು. ಸಾಮಾನ್ಯ ಜನರ ಆರೋಗ್ಯದ ಬಗೆಗೆ ವಿಶೇಷ ಕಾಳಜಿ ಇದ್ದದ್ದರಿಂದಲೇ ಆರೋಗ್ಯ ಕಾರ್ಡ್‌ನಂತಹ ಯೋಜನೆಗಳನ್ನು ಜಾರಿಗೆ ತಂದರು.
– ಟಿ.ಅಶೋಕ್ ಪೈ,
ಅಧ್ಯಕ್ಷರು, ಡಾ| ಟಿಎಂಎ ಪೈ ಪ್ರತಿಷ್ಠಾನ, ಮಣಿಪಾಲ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಡಾ| ರಾಮದಾಸ್ ಪೈ ಅವರ ಸರಳತನ ಎಲ್ಲರಿಗೂ ಮಾದರಿ. ಅವರಲ್ಲಿ ಯಾವುದೇ ಜಾತೀಯತೆ ಇಲ್ಲ. ಅವರು ಶೂನ್ಯ ಅಹಂ (ಜೀರೋ ಇಗೋ) ವ್ಯಕ್ತಿ. ಮಾತಿಗಿಂತ ಕೃತಿಗೆ ಮಹತ್ವ ನೀಡುವ ವ್ಯಕ್ತಿಯಾದ ಕಾರಣವೇ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ.
– ಡಾ| ಎಚ್.ಎಸ್.ಬಲ್ಲಾಳ್,
ಸಹಕುಲಾಧಿಪತಿಗಳು, ಮಾಹೆ ವಿ.ವಿ. ಮಣಿಪಾಲ ಡಾ|ರಾಮದಾಸ್ ಪೈಯವರ ಮಾದರಿಯನ್ನು ದೇಶದ ಹಲವು ವಿ.ವಿ.ಗಳು ಅನುಸರಿಸುತ್ತಿವೆ. ಅವರು ಮಣಿಪಾಲದ ಮೌಲ್ಯಗಳನ್ನು (ಕೋರ್ ವ್ಯಾಲ್ಯೂಸ್) ಕಠಿನ ಪರಿಶ್ರಮದಿಂದ ಎತ್ತಿಹಿಡಿದರು.
– ಲೆ|ಜ| ಡಾ|ಎಂ.ಡಿ.ವೆಂಕಟೇಶ್,
ಕುಲಪತಿಗಳು, ಮಾಹೆ ವಿ.ವಿ. ಮಣಿಪಾಲ. ನಾನು 1953ರಲ್ಲಿ ತಿರುವನಂತಪುರದಲ್ಲಿ ಎಂಬಿಬಿಎಸ್ ಓದುವಾಗಲೇ ದೇಶದ ಮೊದಲ ಖಾಸಗಿ ವೈದ್ಯಕೀಯ ಕಾಲೇಜನ್ನು ತೆರೆದ ಡಾ|ಟಿಎಂಎ ಪೈಯವರ ದಂತಕಥೆ ಕೇಳಿದ್ದೆ. 1990ರ ದಶಕದ ಕೊನೆಯಲ್ಲಿ ಡಾ|ರಾಮದಾಸ್ ಪೈಯವರು ಬ್ಯಾಂಕ್‌ನಿಂದ 100 ಕೋ.ರೂ. ಸಾಲವನ್ನು ಪಡೆದು ನೇಪಾಳದಲ್ಲಿ ಕ್ಯಾಂಪಸ್ ತೆರೆಯಲು ನಿರ್ಧರಿಸಿದಾಗ ಅಚ್ಚರಿಗೊಂಡೆ. ಇಂತಹ ಅನೇಕ ಎದೆಗಾರಿಕೆಗಳನ್ನು ಕಂಡಿದ್ದೇನೆ. ಇದು ಬ್ರಿಟಿಷ್ ಅರ್ಥಶಾಸ್ತ್ರಜ್ಞ ಕೀನ್ಸ್ ವ್ಯಾಖ್ಯಾನಿಸಿದಂತೆ “ಅನಿಮಲ್ ಸ್ಪಿರಿಟ್’.
– ಡಾ| ಎಂ.ಎಸ್.ವಲ್ಲಿಯತ್ತಾನ್,
ಮೊದಲ ಕುಲಪತಿಗಳು, ಮಾಹೆ ವಿ.ವಿ. ಮಣಿಪಾಲ. -ಮಟಪಾಡಿ ಕುಮಾರಸ್ವಾಮಿ