Advertisement

ರಾಜ್ ಎಂಬ ಸಾಂಸ್ಕೃತಿಕ ರಾಯಭಾರಿ

10:26 AM Apr 24, 2020 | Suhan S |

ಡಾ.ರಾಜಕುಮಾರ್‌… ಕನ್ನಡ ಚಿತ್ರರಂಗ ಮಾತ್ರವಲ್ಲ. ಭಾರತೀಯ ಚಿತ್ರರಂಗದಲ್ಲೇ ಮರೆಯಲಾಗದ ವ್ಯಕ್ತಿ ಹಾಗು ವ್ಯಕ್ತಿತ್ವ ಇವರದು. ಕನ್ನಡ ನಾಡು,ನುಡಿ,ನೆಲ-ಜಲ ಮತ್ತು ಹೋರಾಟ ಅಂದಾಗ ಚಿತ್ರರಂಗದಲ್ಲಿ ಮೊದಲು ನೆನಪಾಗುವ ಹೆಸರೇ ಡಾ.ರಾಜಕುಮಾರ್‌. ಕನ್ನಡ ಚಿತ್ರರಂಗಕ್ಕೆ ರಾಜಕುಮಾರ್‌ ಹಾಕಿಕೊಟ್ಟ ಭದ್ರ ಬುನಾದಿ ಆಳವಾಗಿ ಬೇರೂರಿದೆ. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕಲೆ ನನ್ನುಸಿರು ಎಂದು ಜೀವಿಸಿದ ಡಾ.ರಾಜಕುಮಾರ್‌, ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಏಪ್ರಿಲ್‌ 24 (ಇಂದು )ಅವರು ಹುಟ್ಟಿದ ದಿನ.  ಅವರ ಅಪಾರ ಅಭಿಮಾನಿಗಳು ಪ್ರತಿ ವರ್ಷವೂ ಅದ್ಧೂರಿಯಾಗಿಯೇ ಹುಟ್ಟುಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ಅವರ 92 ನೇ ಜನ್ಮದಿನವನ್ನೂ ಕೂಡ ಅಭಿಮಾನಿಗಳು ಪ್ರೀತಿಯಿಂದಲೇ ಆಚರಿಸುತ್ತಿದ್ದಾರೆ.  ಅಂದಹಾಗೆ, ಅವರ ಜನ್ಮದಿನದ ಅಂಗವಾಗಿ ಅವರ ಸಿನಿಮಾ, ಹಾಡು, ಹೋರಾಟ, ಕನ್ನಡ ಮೇಲಿದ್ದ ಗೌರವ , ಅಭಿಮಾನಿ ದೇವರುಗಳ ಮೇಲಿನ ಪ್ರೀತಿ ಕುರಿತು ಒಂದು ರೌಂಡಪ್‌.

Advertisement

ಒಬ್ಬ ನಟನ ಚಿತ್ರ ಒಂದು ತಲೆಮಾರಿನ ನಂತರವೂ ಗಾಢ ಪರಿಣಾಮ ಬೀರುತ್ತದೆ. ಹೇಳಿಕೊಳ್ಳಲಾಗದಷ್ಟು ಖುಷಿ ಮತ್ತು ಪುಳಕಗಳಿಗೆ ಕಾರಣವಾಗುತ್ತದೆ. ಅದು ಆ ನಟನ ಸಿನಿಮಾ ಪ್ರೀತಿಯ ಜೊತೆಗೆ ವ್ಯಕ್ತಿತ್ವವೂ ಮುಖ್ಯವಾಗುತ್ತದೆ. ಅಂತಹ ವ್ಯಕ್ತಿತ್ವ ಹಾಗು ಅಗಾಧ ಸಿನಿಮಾ ಪ್ರೀತಿಯನ್ನು ಕನ್ನಡಿಗರು ಮತ್ತು ಕನ್ನಡ ಚಿತ್ರರಂಗ ಕಂಡಿದೆಯೆಂದರೆ, ಅದು ಡಾ.ರಾಜಕುಮಾರ್‌ ಅವರಲ್ಲಿ ಮಾತ್ರ. “ಬೇಡರ ಕಣ್ಣಪ್ಪ ‘ ಸಿನಿಮಾದಿಂದ ಹಿಡಿದು ಅವರ ಕೊನೆಯ ಚಿತ್ರ “ಶಬ್ಧವೇದಿ ‘ ವರೆಗಿನ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳು ಕೇವಲ ಒಂದು ಸಿನಿಮಾವಾಗಿ ಮನಸ್ಸನ್ನು ಕಾಡುವುದಿಲ್ಲ. ಒಂದು ವ್ಯಕ್ತಿತ್ವವಾಗಿ, ಆರೋಗ್ಯಕರ ಸಂದೇಶದ ರೂಪದಲ್ಲಿ ಎಲ್ಲರನ್ನೂ ಹಿಡಿದಿಡುತ್ತವೆ. ಅಂತಹ ಚಿತ್ರಗಳ ಮೂಲಕ ಕನ್ನಡ ನಾಡು, ನುಡಿ ಬಗ್ಗೆ ಅಪಾರ ಪ್ರೀತಿ, ಪ್ರೇಮ, ಕಾಳಜಿ ಹಾಗು ಗೌರವ ಬೆಳೆಸುತ್ತ ಬಂದಂತಹ ಮೇರುನಟರಾಗಿದ್ದವರು. ರಾಜಕುಮಾರ್‌ ಕೇವಲ ಒಬ್ಬ ನಟರಾಗಿ ಗುರುತಿಸಿಕೊಂಡವರಲ್ಲ. ಅದರಾಚೆಗೆ ಕನ್ನಡ ಪ್ರೇಮಿಯಾಗಿ, ನಮ್ಮ ಭಾಷೆ, ಗಡಿ, ನೆಲ-ಜಲದ ಪರ ಹೋರಾಟಗಾರರಾಗಿ ಇತರರಿಗೆ ಮಾದರಿಯಾದವರು.

ಹಾಡು ಸವಿಜೇನು :  ಡಾ.ರಾಜಕುಮಾರ್‌ ನಟರಾಗಿ ಎಷ್ಟು ಎತ್ತರಕ್ಕೆ ಬೆಳೆದಿದ್ದರೋ, ಗಾಯಕರಾಗಿಯೂ ಅಷ್ಟೇ ಎತ್ತರದಲ್ಲಿದ್ದವರು. ಕನ್ನಡ ಚಿತ್ರರಂಗದಲ್ಲಿನ ಕನ್ನಡ ಹಾಡುಗಳನ್ನೊಮ್ಮೆ ನೆನಪಿಸಿಕೊಂಡರೆ, ಅಲ್ಲಿ ಡಾ.ರಾಜಕುಮಾರ್‌ ಅವರ ಕಂಠ ನೆನಪಾಗದೇ ಇರದು. ಕನ್ನಡದ ಬಹುತೇಕ ಚಿತ್ರಗಳಿಗೆ ಹಾಡಿರುವ ಅವರು, ಭಕ್ತಿಗೀತೆ,ದಾಸರ ಪದ, ಸೇರಿದಂತೆ ಹಲವು ಗೀತೆಗಳನ್ನು ಹಾಡಿ ಎಲ್ಲರ ಪ್ರೀತಿಗೆ ಪಾತ್ರರಾದವರು. ಇದರೊಂದಿಗೆ ಕನ್ನಡಕ್ಕೆ ಸಂಬಂಧಿಸಿದ ಗೀತೆಗಳನ್ನೂ ಹಾಡುವ ಮೂಲಕ ಕನ್ನಡಿಗರಲ್ಲಿ ಇನ್ನಷ್ಟು ಉತ್ಸಾಹ ತುಂಬಿದ್ದಾರೆ ಅನ್ನೋದು ವಿಶೇಷ.

ಅಂದಹಾಗೆ,”ಸಂಪತ್ತಿಗೆ ಸವಾಲ್‌’ ಚಿತ್ರದ ಮೂಲಕ ಪೂರ್ಣಪ್ರಮಾಣದ ಗಾಯಕರಾಗಿ ಎಂಟ್ರಿಯಾದ ಆವರು, “ಯಾರೇ ಕೂಗಾಡಲಿ, ಊರೇ ಹೋರಾಡಲಿ ‘ ಹಾಡು ಹಾಡುವ ಮೂಲಕ ತಾನೊಬ್ಬ ಗಾಯಕನೂ ಹೌದು ಎಂಬುದನ್ನು ಸಾರಿ ಹೇಳಿದರು. ಅನೇಕ ಕನ್ನಡ ಸಾಹಿತಿಗಳು ರಚಿಸಿದ ಗೀತೆಗಳಿಗೂ ಧ್ವನಿಯಾದರು. “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ‘ ಎಂಬ ಹಾಡು ಕನ್ನಡಿಗರಿಗೆ ಮರೆಯದ ಹಾಡಾಗಿಯೇ ಉಳಿದಿದೆ. ಇಂದಿಗೂ ಹಲವು ಕಾರ್ಯಕ್ರಮಗಳು, ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಈಹಾಡನ್ನು ಅಭಿಮಾನಿಗಳು ಗುನುಗುತ್ತಿರುತ್ತಾರೆ. ರಾಜಕುಮಾರ್‌ ಅವರು ಹಾಡಿರುವ ಯಾವುದೇ ಹಾಡಿರಲಿ, ಅದನ್ನೊಮ್ಮೆ ಜನರು ಗುನುಗದೆ ಬಿಡದಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಅಂದರೆ ತಪ್ಪಿಲ್ಲ.

ಚಳವಳಿಯಲ್ಲೂ ಮುಂದು : ರಾಜಕುಮಾರ್‌ ಅವರು ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾದವರಲ್ಲ. ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ, ವೇದಿಕೆಯಲ್ಲಿ ಕನ್ನಡಿಗರಿಂದಲೇ ಈ ರಾಜಕುಮಾರ ಇರೋದು ಎಂದು ಪ್ರೀತಿಯ ಮಾತುಗಳನ್ನಾಡುತ್ತಿದ್ದರು. ಹಾಗಾಗಿ, ಕನ್ನಡ ಭಾಷೆ, ನೆಲ,ಜಲ ಹಾಗು ಸಂಸ್ಕೃತಿಗೆ ಧಕ್ಕೆ ಬಂದಾಗ, ಅಲ್ಲಿ ರಾಜಕುಮಾರ್‌ ಇರುತ್ತಿದ್ದರು. ಹೋರಾಟಕ್ಕೂ ಅವರು ಹಿಂಜರಿಯುತ್ತಿರಲಿಲ್ಲ. ಅದಕ್ಕೆ ಉದಾಹರಣೆ ಅಂದರೆ ದೊಡ್ಡ ಮಟ್ಟದ ಚಳವಳಿಗೆ ಕಾರಣವಾದ ಗೋಕಾಕ್‌ ಚಳವಳಿ. ಈ ಚಳವಳಿಗೆ ಕನ್ನಡ ಚಿತ್ರರಂಗ ಧುಮುಕಿತ್ತಲ್ಲದೆ, ರಾಜಕುಮಾರ್‌ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾಗಿತ್ತು. ಆಗ ಆ ಚಳವಳಿಯ ಸ್ವರೂಪ ತೀವ್ರಗೊಂಡಾಗ, ಸರ್ಕಾರ ಗೋಕಾಕ್‌ ವರದಿಯನ್ನು ಜಾರಿಗೊಳಿಸಿತು.

Advertisement

ಕಾದಂಬರಿ ಸಿನಿಮಾ :  ಡಾ.ರಾಜಕುಮಾರ್‌ ಅನೇಕ ಲೇಖಕರ ಕಾದಂಬರಿಗಳನ್ನು ಸಿನಿಮಾ ಮಾಡುವ ಮೂಲಕ ಸಾಹಿತ್ಯ ಲೋಕವನ್ನೂ ಶ್ರೀಮಂತಗೊಳಿಸಿದವರೆಂದರೆ ತಪ್ಪಲ್ಲ. ಕನ್ನಡ ಚಿತ್ರರಂಗದ ಮೊದಲ ಕಾದಂಬರಿ ಆಧಾರಿತ ಸಿನಿಮಾ “ಕರುಣೆಯೇ ಕುಟುಂಬದ ಕಣ್ಣು ‘. ಇದರಲ್ಲಿ ರಾಜಕುಮಾರ್‌ ಅಭಿನಯಿಸಿದ್ದಾರೆ. ಇನ್ನು, ಅವರ ಕೊನೆಯ ಸಿನಿಮಾ “ಶಬ್ಧವೇದಿ ‘ ಕೂಡ ಕಾದಂಬರಿ ಆಧರಿಸಿದ್ದು. ಉಳಿದಂತೆ ಅವರು “ಭೂದಾನ ‘, “ಕುಲವಧು ‘, “ಚಂದವಳ್ಳಿಯ ತೋಟ ‘, “ಸಂಧ್ಯಾರಾಗ ‘, “ಸರ್ವಮಂಗಳಾ ‘ ಸೇರಿದಂತೆ 25 ಕ್ಕೂ ಹೆಚ್ಚು ಚಿತ್ರಗಳು ಕಾದಂಬರಿ ಆಧರಿಸಿವೆ ಎಂಬುದು ವಿಶೇಷ.

ಅದೇನೆ ಇರಲಿ, ಡಾ.ರಾಜಕುಮಾರ್‌ ಇಂದು ನಮ್ಮೊಂದಿಗಿಲ್ಲ. ಆದರೆ, ಅವರು ಮಾನಸಿಕವಾಗಿ ಜೊತೆಗಿದ್ದಾರೆ. ಅವರಿಲ್ಲದ 14 ವರ್ಷ ಕಳೆದಿದ್ದರೂ, ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗವಿರಲಿ, ಅಭಿಮಾನಿಗಳಾಗಲಿ ಅವರನ್ನು ಮರೆತಿಲ್ಲ. ಒಂದಿಲ್ಲ ಒಂದು ಚಿತ್ರಗಳಲ್ಲಿ ಅವರ ಛಾಯೆ ಇದ್ದೇ ಇರುತ್ತೆ. ಅಭಿಮಾನಿಗಳಂತೂ, ಏ.12 ಹಾಗು ಏ.24 ಬಂತೆಂದರೆ, ಹಬ್ಬದ ಸಂಭ್ರಮದಲ್ಲಿರುತ್ತಾರೆ. ಹೀಗಾಗಿ ರಾಜಕುಮಾರ್‌ ಒಬ್ಬ ಅದ್ಭುತ ಶಕ್ತಿಯಾಗಿ, ವ್ಯಕ್ತಿಯಾಗಿ ಮತ್ತು ವ್ಯಕ್ತಿತ್ವದ ಮೂಲಕ ಎಲ್ಲರ ಮನದಲ್ಲಿ ನೆಲೆಸಿದ್ದಾರೆ..­

ಪರಭಾಷೆಯಲ್ಲೂ ರಾಜ್‌ ಚಿತ್ರ :  ಕನ್ನಡದಲ್ಲಿ ಸೂಪರ್‌ಹಿಟ್‌ ಎನಿಸಿಕೊಂಡ ಡಾ.ರಾಜಕುಮಾರ್‌ ಚಿತ್ರಗಳು ಇತರೆ ಭಾಷೆಗಳಲ್ಲೂ ರಿಮೇಕ್‌ ಆಗಿದ್ದು ವಿಶೇಷ. ಅವರ ಸಿನಿಮಾಗಳ ಮೂಲಕ ಕನ್ನಡದ ಸೊಗಡು ಅನ್ಯ ಭಾಷೆಗಳಲ್ಲೂ ಪಸರಿಸಿದೆ. ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಎನ್‌.ಟಿ.ರಾಮರಾವ್‌, ಅಕ್ಕಿನೇನಿ ನಾಗೇಶ್ವರರಾವ್‌, ಎಂ.ಜಿ.ರಾಮಚಂದ್ರನ್‌, ಶಿವಾಜಿ ಗಣೇಶನ್‌, ಅಮಿತಾಭ್‌ ಬಚ್ಚನ್‌, ಧರ್ಮೇಂದ್ರ, ರಾಜೇಶ್‌ ಖನ್ನಾ ಸೇರಿದಂತೆ ಇತರೆ ನಟರು ತಮ್ಮ ಭಾಷೆಗಳಲ್ಲಿ ಡಾ. ರಾಜಕುಮಾರ್‌ ಅವರ ಚಿತ್ರಗಳನ್ನು ರಿಮೇಕ್‌ ಮಾಡುವುದರ ಜೊತೆಗೆ ರಾಜಕುಮಾರ್‌ ಮಾಡಿದ ಪಾತ್ರಗಳಲ್ಲಿ ಮಿಂಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next