Advertisement

ಕೋವಿಡ್ 19 ನಡುವೆಯೇ ವರನಟ ಡಾ. ರಾಜ್‌ ಹುಟ್ಟುಹಬ್ಬ

09:55 AM Apr 25, 2020 | Suhan S |

ಶುಕ್ರವಾರ (ಏ. 24) ಕನ್ನಡದ ಹೆಮ್ಮೆಯ ವರನಟ ಡಾ. ರಾಜ್‌ಕುಮಾರ್‌ ಅವರ 92ನೇ ಜನ್ಮದಿನಾಚರಣೆಯನ್ನು ನಾಡಿನಾದ್ಯಂತ ಆಚರಿಸಲಾಯಿತು. ಈ ವರ್ಷ ಕೋವಿಡ್ 19  ವೈರಸ್‌ ಕಾರಣದಿಂದಾಗಿ ದೇಶಾದ್ಯಂತ ಲಾಕ್‌ ಡೌನ್‌ ಇರುವ ಕಾರಣ ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿತ್ತು. ಮೊದಲೇ ತೀರ್ಮಾನಿಸಿದಂತೆ, ರಾಜ್‌ಕುಮಾರ್‌ ಪುತ್ರ ನಟ ಶಿವರಾಜ್‌ ಕುಮಾರ್‌ ತಮ್ಮ ತಂದೆಯವರ ಹುಟ್ಟುಹಬ್ಬವನ್ನು ಈ ಬಾರಿ ಎಲ್ಲರೂ ಸರಳವಾಗಿ ಮನೆಯಿಂದಲೇ ಆಚರಿಸುವಂತೆ ಮನವಿ ಮಾಡಿದ್ದರು.

Advertisement

ಅದರಂತೆ ಸಾಂಕೇತಿಕವಾಗಿ ವರನಟನ ಜನ್ಮದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರರಂಗ ಮತ್ತು ರಾಜಕೀಯ ರಂಗದ ಹಲವು ಗಣ್ಯರುಕನ್ನಡ ಕಣ್ಮಣಿಯನ್ನು ಸ್ಮರಿಸಿಕೊಂಡಿದ್ದಾರೆ. “ನಟ ಸಾರ್ವಭೌಮ – ಕರ್ನಾಟಕ ರತ್ನ ಡಾ. ರಾಜ್‌ ಕುಮಾರ್‌ರ ಜನ್ಮದಿನದಂದು ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸೋಣ. ತಾಯಿ ಭುವನೇಶ್ವರಿಯ ಸೇವೆಗೆ ಕರೆ ಬಂದಾಗಲೆಲ್ಲ ಎದ್ದು ಬಂದ ಮಹಾನುಭಾವ ರಾಜಣ್ಣನವರು. ಮೂರು ತಲೆಮಾರಿನ ಕನ್ನಡಿಗರಿಗೆಮೌಲ್ಯ ತುಂಬಿದ ಮನರಂಜನೆ ನೀಡಿದ ಅವರನ್ನು ಆದರದಿಂದ ನೆನೆಯೋಣ’ ಎಂದು ಸಿ.ಎಂ ಯಡಿಯೂರಪ್ಪ ಟ್ವೀಟ್‌ ಮಾಡಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, “ಅಭಿಮಾನಿಗಳೇ ದೇವರು’ ಎಂದು ಬಣ್ಣಿಸಿದ ವರನಟ ಡಾ. ರಾಜ್‌ಕುಮಾರ್‌ ಅವರ ನೆನಪು ಎಂದೆಂದಿಗೂ ಅಮರ. ನಾಡು ನುಡಿಯ ಬಗ್ಗೆ ಅವರ ನಿಲುವು ಅನುಕರಣೀಯ.

ಕನ್ನಡದ ಅಸ್ಮಿತೆ ಮತ್ತು ಆದರ್ಶವಾಗಿದ್ದ ರಾಜ್‌ಕುಮಾರ್‌ಅವರ ಸದಭಿರುಚಿಯ ಸಿನಿಮಾಗಳನ್ನು ನೋಡಿ ನಾನು, ನನ್ನಂತಹ ಲಕ್ಷಾಂತರ ಮಂದಿ ಬದುಕಿನಲ್ಲಿ ಸ್ಫೂರ್ತಿ ಕಂಡವರು. ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದ ಇಂತಹ ಮಹಾ ಚೇತನಕ್ಕೆ ನನ್ನ ಪ್ರಣಾಮಗಳು’ ಎಂದು ಟ್ವೀಟ್‌ ಮೂಲಕ ವರನಟನನ್ನು ನೆನೆದಿದ್ದಾರೆ.

ಅಭಿಮಾನಿಗಳಿಲ್ಲದೆ ನಡೆಯಿತು ಅಣ್ಣಾವ್ರ ಸರಳ ಹುಟ್ಟು ಹಬ್ಬ :  ಕೋವಿಡ್ 19 ವೈರಸ್‌ ಮಹಾಮಾರಿಯಿಂದಾಗಿ ಈಗಾಗಲೇ ಸಾರ್ವಜನಿಕ ಸಭೆ, ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ ಬ್ರೇಕ್‌ ಬಿದ್ದಿದೆ. ಈಹಿನ್ನೆಲೆಯಲ್ಲಿ ಡಾ.ರಾಜ್‌ಕುಮಾರ್‌ಹುಟ್ಟುಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಿದೆ.

ಈ ಹಿಂದೆ ಪ್ರತಿವರ್ಷ ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬದಂದು ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋ ಸೇರಿದಂತೆ ಹಲವೆಡೆ ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿದ್ದರು. ಅಲ್ಲದೇ ಪ್ರತಿವರ್ಷ ಏಪ್ರಿಲ್‌ 24ರ ದಿನ ಅಭಿಮಾನಿಗಳು ಡಾ. ರಾಜ್‌ ಸಮಾಧಿ ಮತ್ತು ಮನೆಯ ಸುತ್ತಮುತ್ತ ತುಂಬಿ ತುಳುಕುತ್ತಿದ್ದರು. ಆದರೆ ಇದಕ್ಕೆಲ್ಲಾ ಈ ಬಾರಿ ಕೋವಿಡ್ 19 ವೈರಸ್‌ ಅಡ್ಡಿ ಮಾಡಿದೆ. ಕೋವಿಡ್ 19  ಲಾಕ್‌ ಡೌನ್‌ ಕಾರಣದಿಂದ ಈ ಬಾರಿ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ ಯಾವುದೇ ಅದ್ಧೂರಿ ಆಚರಣೆ ಇಲ್ಲದೆಸರಳವಾಗಿ ನೆರವೇರಿತು.

Advertisement

ಲಾಕ್‌ ಡೌನ್‌ ನಿಂದ ರಾಜ್‌ ಕುಟುಂಬಸ್ಥರನ್ನು ಹೊರತುಪಡಿಸಿದರೆ, ಕಂಠೀರವ ಸ್ಟುಡಿಯೋದಲ್ಲಿ ಜಮಾಯಿಸುತ್ತಿದ್ದ ಅಭಿಮಾನಿಗಳ ಸಂಖ್ಯೆ ಕೂಡ ಕಡಿಮೆಯಾಗಿತ್ತು. ಲಾಕ್‌ ಡೌನ್‌ ನಿಯಮ ಪಾಲಿಸಿದ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌, ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಅವರೊಂದಿಗೆ ಮಾಸ್ಕ್ ಮತ್ತು ಗ್ಲೌಸ್‌ ಧರಿಸಿ ಬಂದು ಸಾಮಾಜಿಕ ಅಂತರ ಕಾಯ್ದುಕೊಂಡು ತಂದೆ-ತಾಯಿ ಇಬ್ಬರ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಬಳಿಕ ದಂಪತಿ ಸಿಹಿವಿತರಿಸಿ ಸರಳವಾಗಿ ರಾಜ್‌ ಹುಟ್ಟುಹಬ್ಬ ಆಚರಿಸಿದರು. ಹೀಗಾಗಿ ಇದೇ ಮೊದಲ ಬಾರಿಗೆ ಅಭಿಮಾನಿಗಳಿಲ್ಲದೆ ಡಾ. ರಾಜ್‌ಕುಮಾರ್‌ ಹುಟ್ಟುಹಬ್ಬ ಆಚರಣೆ ಮಾಡಲಾಯಿತು.

ಇದೇ ವೇಳೆ ಮಾತನಾಡಿದ ನಟ ಶಿವರಾಜ್‌ ಕುಮಾರ್‌, ” ಕೋವಿಡ್ 19 ಟೈಮಲ್ಲಿ ಅಪ್ಪಾಜಿ ಜನ್ಮ ದಿನ ಬಂದಿದೆ. ಏನೂ ಮಾಡೋದಕ್ಕೆ ಆಗೋದಿಲ್ಲ ಎಲ್ಲವನ್ನೂ ಎದುರಿಸಬೇಕು. ಲಾಕ್‌ ಡೌನ್‌ ನಿಯಮಗಳನ್ನೂ ಪಾಲಿಸಲೇಬೇಕು. ಆರೋಗ್ಯದ ದೃಷ್ಟಿಯಿಂದ ಅದು ಅವಶ್ಯಕ. ಏಪ್ರಿಲ್‌ ಅಲ್ಲಿ ಜನ್ಮದಿನ ಆಚರಿಸಲಿಕ್ಕೆ ಆಗದೇ ಇದ್ದರೇ, ಮೇ ಇದೆ. ಜೂನ್‌ ಇದೆ. ಆವಾಗ ಅಭಿಮಾನಿಗಳು ಸೆಲೆಬ್ರೇಟ್‌ ಮಾಡಿದ್ರಾಯ್ತು. ಅದ್ರಲ್ಲಿ ತಪ್ಪೇನು ಇಲ್ಲ. ಅಭಿಮಾನಿಗಳು ಸೋಷಿಯಲ್‌ ಡಿಸ್ಟನ್ಸ್‌ ಕಾಯ್ದುಕೊಳ್ಳಿ, ಆರಾಮ್‌ ಆಗಿ ಮನೆಯಲ್ಲಿರಿ. ಕರೋನಾ ಬಂದಿದೆ ಎಂದು ಭಯಪಡ್ಬೇಡಿ, ಬಂದಿದ್ದು ಹೋಗುತ್ತದೆ. ಲಾಕ್‌ ಡೌನ್‌ ಟೈಮ್‌ ಅಲ್ಲಿ ಮನೆಯಲ್ಲಿಯೇ ಇದ್ದೇನೆ, ಆ್ಯಕ್ಟೀವ್‌ ಆಗಿದ್ದೇನೆ. ದಿನ ಸಿನಿಮಾ ನೋಡುತ್ತೇನೆ, ಎರಡೂ ಹೊತ್ತು ವರ್ಕೌಟ್‌ ಮಾಡುತ್ತೇನೆ’ ಎಂದರು.

ಇನ್ನು ನಟ ಶಿವರಾಜ್‌ ಕುಮಾರ್‌ ಈ ಬಗ್ಗೆ ಟ್ವೀಟ್‌ಮಾಡಿ, “ಪ್ರೀತಿಯ ಅಪ್ಪಾಜಿಯ ಹುಟ್ಟುಹಬ್ಬಕ್ಕೆ ನಮ್ಮ ಅಭಿಮಾನಿಗಳಿಂದ ವಿಶೇಷ ಕಾಮನ್‌ ಡಿಪಿ. ಅಪ್ಪಾಜಿಯ ಹುಟ್ಟುಹಬ್ಬವನ್ನು ಈ ಬಾರಿ ನಿಮ್ಮ ನಿಮ್ಮ ಮನೆಯಲ್ಲೇ ಆಚರಿಸಿ ಮನೆಯವರ ಜೊತೆಯಲ್ಲೇ ಆಚರಿಸಿ’ ಎಂದುಅಭಿಮಾನಿಗಳಿಗೆ ಕರೆ ನೀಡಿದ್ದರು. ಇದರಿಂದಾಗಿ, ಈ ಬಾರಿ ಅಭಿಮಾನಿಗಳು ಮನೆಯಲ್ಲೇ ರಾಜ್‌ ಹುಟ್ಟುಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next