ಬೆಂಗಳೂರು: ಡಾ. ರಾಜಕುಮಾರ್ ಚಿತ್ರಗಳು ಎಲ್ಲಾ ಕಾಲಕ್ಕೂ ಸಲ್ಲುವಂಥವು. ಅವರ ಪ್ರತಿ ಚಿತ್ರಗಳಲ್ಲೂ ಬದುಕಿನ ಅರ್ಥಗಳಿರುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ರಾಜಕುಮಾರ್ ಚಿತ್ರಗಳು ಅಂದ್ರೆ ಜೀವನಕ್ಕೆ ನಿಘಂಟು ಇದ್ದಂತೆ. ಅದನ್ನ ಅರ್ಥ ಮಾಡಿಕೊಂಡರೆ ಸಾಕು, ಎಲ್ಲರ ಬದುಕಿಗೂ ಅರ್ಥ ಬರುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ ಚಿನ್ನೇಗೌಡ ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಸ್.ಎ ಚಿನ್ನೇಗೌಡ, ವರನಟ ಡಾ. ರಾಜಕುಮಾರ್ ಮತ್ತು ತಮ್ಮ ಚಿತ್ರರಂಗದ ಸುದೀರ್ಘ ಪ್ರಯಣದ ಅನುಭವಗಳನ್ನು ಮೆಲುಕು ಹಾಕಿದರು.
ಇದೇ ವೇಳೆ ಮಾತನಾಡಿದ ಎಸ್.ಎ ಚಿನ್ನೇಗೌಡ, ಇವತ್ತು ಚಿತ್ರರಂಗ ನನ್ನನ್ನು ಒಬ್ಬ ನಿರ್ಮಾಪಕ, ವಿತರಕನಾಗಿ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಕಾರಣ ನಮ್ಮ ಅಕ್ಕ ಪಾರ್ವತಮ್ಮ ಮತ್ತು ಭಾವ ರಾಜಕುಮಾರ್. ಚಾಮರಾಜನಗರದ ಹಳ್ಳಿಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ವಜ್ರೆಶ್ವರಿ ಕಂಬೈನ್ಸ್ ಸಂಸ್ಥೆಯ ಉಸ್ತುವಾರಿಯನ್ನ ವಹಿಸಿಕೊಟ್ಟರು. ಆ ಮೂಲಕ ಚಿತ್ರರಂಗಕ್ಕೆ ನನ್ನನ್ನು ಪರಿಚಯಿಸಿದರು. ಇವತ್ತು ನಾನು ಏನಾಗಿದ್ದೇನೋ ಅದೆಲ್ಲದಕ್ಕೂ ಅವರೇ ಕಾರಣ ಎಂದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ. ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ನಟಿ ಜಯಂತಿ, ಹಿರಿಯ ನಟ ಶಿವರಾಂ, ರಾಘವೇಂದ್ರ ರಾಜಕುಮಾರ್, ಸುಂದರ ರಾಜ್, ಹಿರಿಯ ನಿರ್ದೇಶಕ ಟಿ.ಎಸ್ ನಾಗಾಭರಣ, ಸಾಯಿ ಪ್ರಕಾಶ್, ನಟರಾದ ವಿಜಯ ರಾಘವೇಂದ್ರ, ಶ್ರೀಮುರಳಿ, ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ ಗೋವಿಂದು, ಥಾಮಸ್ ಡಿಸೋಜಾ, ಭಾ.ಮಾ ಹರೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಎಂಎಲ್‌ಸಿ ಆಗುವ ಅವಕಾಶ: 80ರ ದಶಕದಲ್ಲಿ ಅಂದಿನ ಸರ್ಕಾರ ಡಾ. ರಾಜಕುಮಾರ್ ಅವರನ್ನು ಎಂಎಲ್‌ಸಿ ಆಗಿ ನಾಮ ನಿರ್ದೇಶನ ಮಾಡುವ ಯೋಚನೆ ಮಾಡಿತ್ತು. ಆದರೆ ರಾಜಕುಮಾರ್ ತನಗೂ ರಾಜಕಾರಣಕ್ಕೂ ಆಗಿಬರುವುದಿಲ್ಲ ಎನ್ನುವ ಕಾರಣಕ್ಕೆ ಆ ಆಫರ್ ಅನ್ನು ತಿರಸ್ಕರಿಸಿದ್ದರು. ಆಗ ಜೊತೆಯಲ್ಲಿದ್ದ ಕೆಲವರಿಗೆ ರಾಜಕುಮಾರ್ ಅವರ ಬದಲು ಎಸ್.ಎ ಚಿನ್ನೇಗೌಡರನ್ನು ಎಂಎಲ್‌ಸಿ ಮಾಡಬಹುದಲ್ಲ ಎಂಬ ಮಾತಿಗೆ.
ರಾಜಕುಮಾರ್ ಅವರು ಚಿನ್ನೇಗೌಡರು ಆಗುವುದಾದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದಿದ್ದರು. ಆದರೆ ನನಗೆ ಮಾತ್ರ ಅದು ಸುತಾರಾಂ ಇಷ್ಟವಿರಲಿಲ್ಲ. ರಾಜಕುಮಾರ್ ಅವರೇ ಬೇಡವೆಂದ ಹುದ್ದೆ ತನಗೇಕೆ ಎನ್ನುವ ಕಾರಣಕ್ಕೆ ಎಂಎಲ್‌ಸಿ ಆಗುವ ಅವಕಾಶವನ್ನೆ ತಿರಸ್ಕರಿಸಿದೆ ಎಂದರು.