Advertisement

ಡಾ|ಆರ್‌.ಎ. ರಾಘವೇಂದ್ರರಿಗೆ ಶ್ರೀಮಯ ಕಲಾಪೋಷಕ ಪ್ರಶಸ್ತಿ

02:22 PM Jan 29, 2018 | |

ಹೊನ್ನಾವರ: ಯಕ್ಷಗಾನ ಒಂದು ಗ್ರಾಮೀಣ ಸಾಂಪ್ರದಾಯಿಕ ಸಮಗ್ರ ಕಲೆಯಾಗಿದೆ. ತಮ್ಮ ಉನ್ನತ ಶೈಕ್ಷಣಿಕ ಬೆಳವಣಿಗೆಗೆ
ಬಾಲ್ಯದ ಯಕ್ಷಗಾನ ವೀಕ್ಷಣೆ ಪೂರಕವಾಗಿದೆ. ಸಾವಿರಾರು ವರ್ಷ ಇತಿಹಾಸವಿರುವ ಯಕ್ಷಗಾನ ರಂಗಭೂಮಿಯಲ್ಲಿ
ಶ್ರೀಮಯವು ತನ್ನದೇ ವಿಶಿಷ್ಠ ಪರಂಪರೆ, ಶೈಲಿ ಹಾಗೂ ಸಂಪ್ರದಾಯದಿಂದ ಪ್ರಖ್ಯಾತವಾಗಿ 80ನೇ ಸಂಭ್ರಮ ಕಾಣುತ್ತಿದೆ ಎಂದು ಡಾ| ನಾರಾಯಣ ಸಭಾಹಿತ ಹರ್ಷ ವ್ಯಕ್ತಪಡಿಸಿದರು.

Advertisement

ಅವರು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟೊತ್ಸವದ ಎರಡನೇ ದಿನದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀಮಯ ಕಲಾಪೋಷಕ ಪ್ರಶಸ್ತಿಯನ್ನು ಡಾ| ಆರ್‌.ವಿ. ರಾಘವೇಂದ್ರ, ಬೆಂಗಳೂರು ಇವರಿಗೆ ನೀಡಿ ಪುರಸ್ಕರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಅವರು ಕಲೆಯ ಉತ್ತೇಜನಕ್ಕೆ ನನ್ನ ಅಳಿಲು ಸೇವೆಯಿಂದ ಮಾನಸಿಕ ತೃಪ್ತಿ ಪಡೆದಿದ್ದೇನೆ ಎಂದರು.

ಮುಖ್ಯ ಅತಿಥಿ ಕುಲಸಚಿವ ಡಾ| ನಿರಂಜನ ವಾನಳ್ಳಿ ಮಾತನಾಡಿ ಬೆಳೆಯುತ್ತಿರುವ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ನೀಡಿ ಈ ಕ್ಷೇತ್ರದ ಉತ್ಕರ್ಷಕ್ಕೆ ಕೈ ಜೋಡಿಸುವ ಪ್ರಯತ್ನ ಆರಂಭವಾಗಿದೆ ಎಂದರು. ಯಕ್ಷಗಾನ ಸಾಂಪ್ರದಾಯಿಕ ಕಲೆಗೆ ಶೈಕ್ಷಣಿಕ ಚೌಕಟ್ಟನ್ನು ನೀಡುವ ಕಾರ್ಯವನ್ನು ನಮ್ಮ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದರು. ಡಿಡಿಪಿಐ ಪಿ.ಕೆ. ಪ್ರಕಾಶ ಮಾತನಾಡಿ ಜನಪದ ಕಲೆಗಳಲ್ಲಿ 
ಯಕ್ಷಗಾನವೂ ಒಂದು ವಿಶಿಷ್ಟವಾದ ಕಲೆ ಎಂದರು.

ರಸಾನುಭಾವ, ಭಾವಾನುಭವ ಮತ್ತು ರಸಸಿದ್ಧಿಗಳು ಪರಂಪರಾಗತ ಯಕ್ಷಗಾನದಲ್ಲಿದೆ ಎಂದರು. ಶಿಕ್ಷಣದ ಕಲಿಕೆಯ ಕೆಳಸ್ಥರದಲ್ಲಿ ಯಕ್ಷಗಾನವನ್ನೂ ಸಮನ್ವಯಗೊಳಿಸಿದರೆ ಶೈಕ್ಷಣಿಕ ರಂಗ ಸೃಜನಶೀಲತೆಯನ್ನು ಪಡೆದಂತಾಗುತ್ತದೆ ಎಂದರು. ಬರಹಗಾರರಾದ ಸಂತೋಷಕುಮಾರ ಮೆಹಂದಳೆ ಮಾತನಾಡಿ ಇಂದಿನ ಯುವಕರು ಕಲೆ, ಸಂಸ್ಕೃತಿಯನ್ನು ಮರೆತು ತಮ್ಮದೇ ಲೋಕದಲ್ಲಿ ವ್ಯವಹರಿಸುತ್ತಿರುವುದು ಮುಂದಿನ ತಲೆಮಾರಿನ ಪರಿಶುದ್ಧತೆಗೆ ಅಪಾಯ ಒಡ್ಡುವ ಸಾಧ್ಯತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ ಕೆ.ಎಂ. ಉಡುಪ ಮಾತನಾಡಿ ಗ್ರಾಮೀಣ ಮಟ್ಟದಲ್ಲಿ 9 ವರ್ಷಗಳಿಂದ ನಾಟೊತ್ಸವವನ್ನು ಸಂಭ್ರಮದಿಂದ ನಿರಂತರವಾಗಿ ಏರ್ಪಡಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.ಅನಂತ ಹೆಗಡೆ ದಂತಳಿಕೆಯವರ ಗಣಪತಿ ಪೂಜೆಯೊಂದಿಗೆ
ಶುಭಾರಂಭಗೊಂಡಿತು. ನಾಟೊತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮಿನಾರಾಯಣ ಕಾಶಿ ಸ್ವಾಗತಿಸಿದರು. ಶಿವಾನಂದ ಹೆಗಡೆಯವರು ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next