Advertisement

‘ಮೊಬೈಲ್‌ಗೆ ಮಕ್ಕಳು ಬಲಿಯಾಗದಂತೆ ಮಾನಸಿಕ ಸ್ಥಿರತೆ ಹೆಚ್ಚಿಸಿ’

01:50 AM Dec 24, 2018 | Team Udayavani |

ಕಟಪಾಡಿ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವು ಹೆಚ್ಚು ದುರುಪಯೋಗ ಆಗುತ್ತಿದ್ದು, ಅದಕ್ಕೆ ತದ್ವಿರುದ್ಧವಾಗಿ ಉದಾತ್ತವಾದ ಆದರ್ಶದ ಮೂಲಕ ಸ್ಮಾರ್ಟ್‌ ಇಂಡಿಯನ್‌ ಶಾಲೆಯು ಶಿಕ್ಷಣದ ಪೋಷಣೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಎ.ವಿ. ಬಾಳಿಗಾ ಮೆಮೋರಿಯಲ್‌ ಆಸ್ಪತ್ರೆಯ ಡಾ| ಪಿ.ವಿ. ಭಂಡಾರಿ ಹೇಳಿದರು. ಅವರು ಶನಿವಾರ ಉದ್ಯಾವರ ಸ್ಮಾರ್ಟ್‌ ಇಂಡಿಯನ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಇದರ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ. ಹೆತ್ತವರು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡುವ ಮೂಲಕ ತಮ್ಮ ಮಕ್ಕಳ ಪ್ರತಿಭೆಯನ್ನು ಚಿವುಟದಿರಿ. ನಕಾರಾತ್ಮಕ, ನ್ಯೂನ್ಯತೆಗಳನ್ನು ಎತ್ತಿ ಹಿಡಿಯದಿರಿ. ಒಳ್ಳೆಯ ಗುಣಗಳನ್ನು ಎಲ್ಲರೆದುರು ಹೊಗಳಿರಿ. ಮೊಬೈಲ್‌ ಸಂಚಿಗೆ ಮಕ್ಕಳು ಬಲಿಯಾಗದಂತೆ ಮಕ್ಕಳ ಮಾನಸಿಕ ಸ್ಥಿರತೆಯನ್ನು ಹೆಚ್ಚಿಸುವಂತೆ ಕರೆ ನೀಡಿದರು.

Advertisement

ಅನ್ನ ನೀಡುವ ಸಾಧಕರಾಗಿ
ಮುಖ್ಯಅತಿಥಿ ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌ ವಿಜ್ಞಾನ ಮಾದರಿ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಿ ಮಾತನಾಡುತ್ತಾ, ದಶಮಾನವನ್ನು ಕಂಡ ಶಾಲೆಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಉತ್ತಮ ಸಾಧಕ ಸಂಸ್ಥೆಯಾಗಿ ಆಧುನಿಕ ವಿದ್ಯಾ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿದೆ. ವಿದ್ಯಾರ್ಥಿಗಳು ಜೀವನ ಪರ್ಯಂತ ಅನ್ನ ನೀಡುವ ವಿದ್ಯೆಯ ಮೂಲಕ ಸಾಧಕರಾಗಿ ಸಮಾಜದ ಋಣವನ್ನು ತೀರಿಸಿರಿ ಎಂದರು.

ಬೆಳಕು ಚೆಲ್ಲಿದೆ
ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ, ಇಂದಿನ ಅವಶ್ಯಕತೆಗೆ ಅನುಗುಣವಾಗಿ ವಿದ್ಯಾಸಂಸ್ಥೆಯು ರೂಪಿತಗೊಂಡು ವಿದ್ಯಾದಾನದ ಮೂಲಕ ಊರಿಗೆ ಬೆಳಕು ಚೆಲ್ಲುವ ಕೆಲಸ ಮಾಡಿದೆ. ಮುಂದಕ್ಕೆ ಉನ್ನತ ವಿದ್ಯಾಸಂಸ್ಥೆಯಾಗಿ ಮೂಡಿಬರಲಿ ಎಂದು ಆಶಿಸಿದರು. ಭದ್ರ ಭವಿಷ್ಯಕ್ಕೆ ಸುವರ್ಣ ಅವಕಾಶ ಉದ್ಯಾವರ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸುಗಂಧಿಶೇಖರ್‌ ಮಾತನಾಡಿ, ಭವಿಷ್ಯವನ್ನು ಭದ್ರವಾಗಿಸುವಲ್ಲಿ ವಿದ್ಯಾರ್ಥಿ ಜೀವನವು ಸುವರ್ಣ ಅವಕಾಶವಾಗಿದೆ. ಶ್ರೇಷ್ಠ ಸಾಧಕರಾದಲ್ಲಿ ಅದುವೇ ನೀವು ಕಲಿತ ಶಾಲೆಗೆ ಕೊಡುವ ಕೊಡುಗೆಯಾಗುತ್ತದೆ ಎಂದರು.

ಸದಿಯ ಸಾಹುಕಾರ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಮಹೇಶ್‌ ಯು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಾಯಕಿ ಕಿರಣಾ ವೇದಿಕೆಯಲ್ಲಿದ್ದರು. ಆಡಳಿತಾಧಿಕಾರಿ ಪ್ರತಿಭಾ ಕೋಟ್ಯಾನ್‌ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಅರ್ಚನಾ ಪೂಜಾರಿ ಪ್ರಸ್ತಾವನೆಗೈದರು. ಆಡಳಿತಾಧಿಕಾರಿ  ಅಪ್ಸರೀ ಖಾನ್‌ ಬಹುಮಾನಿತರನ್ನು ಪರಿಚಯಿಸಿದರು. ಮುಖ್ಯ ಆಡಳಿತಾಧಿಕಾರಿ ವರ್ಷಾಮಹೇಶ್‌ ವಂದಿಸಿದರು. ಉಪಾನ್ಯಾಸಕ ದಯಾನಂದ ಉಗ್ಗೆಲ್‌ಬೆಟ್ಟು, ಶಿಕ್ಷಕಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಶಾಲಾ ಸಿಬಂದಿಗಳು, ಪೋಷಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next