ಮೂಡಬಿದಿರೆ: ಕ್ರೀಡಾ ವಿದ್ಯಾ ರ್ಥಿನಿ ಕಾವ್ಯಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ದಂತೆ ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ತೇಜೋವಧೆ ನಡೆಯುತ್ತಿರುವುದರ ವಿರುದ್ಧ ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಶನಿವಾರ ಅಪರಾಹ್ನ ಬೃಹತ್ ಬೆಂಬಲ ಸಭೆ ಜರಗಿತು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರ ನೇತೃತ್ವದಲ್ಲಿ , ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಗೆ ಅವಿಭಜಿತ ದ.ಕ. ಜಿಲ್ಲೆ ಸಹಿತ ನಾಡಿನ ಎಲ್ಲೆಡೆಗಳಿಂದ ಐದು ಸಾವಿರಕ್ಕೂ ಅಧಿಕ ಸಂಖ್ಯೆಯ ಅಭಿಮಾನಿಗಳು ಆಗಮಿಸಿದ್ದರು.
ಮಳೆಯ ಕಾರಣ ವಿಶಾಲ ವಾದ ಪೆಂಡಾಲ್ ಹಾಕಲಾಗಿತ್ತು. ಸ್ವರಾಜ್ಯ ಮೈದಾನದ ಮೇಲಿನ ಭಾಗದಲ್ಲಿ ಮಾತ್ರವಲ್ಲದೆ ಕೆಳಗಡೆಯೂ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿತ್ತು. ಪೊಲೀಸ್ ವ್ಯವಸ್ಥೆ ಸುವ್ಯವಸ್ಥಿತವಾಗಿತ್ತು. ಉಭಯ ಜಿಲ್ಲೆಗಳ ಶೈಕ್ಷಣಿಕ, ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ, ಧಾರ್ಮಿಕ, ಔದ್ಯಮಿಕ ಮತ್ತಿತರ ರಂಗಗಳ ಗಣ್ಯ ನಾಯಕರು, ಸಂಸ್ಥೆಯ ಹಳೆ ವಿದ್ಯಾರ್ಥಿಗಳು ವಿಶೇಷ ವಾಗಿ ಕ್ರೀಡಾಪಟುಗಳು ಪಾಲ್ಗೊಂಡು ತಮ್ಮ ಅಭಿಪ್ರಾಯವ್ಯಕ್ತಪಡಿಸಿ ಕಾವ್ಯಾ ಸಾವಿಗೆ ಸಂತಾಪ ವ್ಯಕ್ತಪಡಿಸುವ ಜತೆಗೆ ಶಿಕ್ಷಣದೊಂದಿಗೆ ಹಾಸುಹೊಕ್ಕಾದ ಸರ್ವ ರಂಗ ಗಳಲ್ಲೂ ಯುವ ಮನಸ್ಸುಗಳನ್ನು ಕಟ್ಟುವ ಕಾರ್ಯದಲ್ಲಿ ಅವಿರತವಾಗಿ ತೊಡಗಿಸಿಕೊಂಡಿರುವ, ಮೂಡಬಿದಿರೆ ಯನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತಿರುವ ಆಳ್ವಾಸ್ ಪ್ರವರ್ತಕ ಡಾ| ಎಂ. ಮೋಹನ ಆಳ್ವರ ಜತೆ “ನಾವಿದ್ದೇವೆ’ ಎಂದು ಘೋಷಿಸಿದರು. ತನಿಖೆಯಿಂದ ನ್ಯಾಯ ಹೊರಬರಲಿ ಎಂದು ಹಾರೈಸಿದರು. ವಿಷಯ ತಿಳಿದ ಹೊರಜಿಲ್ಲೆಗಳಲ್ಲಿರುವ ಅಭಿಮಾನಿಗಳೂ ಆಗಮಿಸಿದ್ದರು.
ಅಭಿಮಾನಿಗಳಿಗೆ ಮಜ್ಜಿಗೆ, ಎಸ್‌ಕೆಎಫ್ ಎಲಿಕ್ಸರ್ ಒದಗಿಸಿದ ಪರಿಶುದ್ಧ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿತ್ತು.