ಇಸ್ಲಾಮಾಬಾದ್: ಪಾಕಿಸ್ಥಾನದ ಕರ್ತಾರ್ಪುರ ಕಾರಿಡಾರ್ ಉದ್ಘಾಟನೆಗೆ ಭಾರತ ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರನ್ನು ಪಾಕಿಸ್ಥಾನ ಸರಕಾರ ಕಳೆದ ವಾರ ಆಹ್ವಾನಿಸಿದೆ. ಆಹ್ವಾನವನ್ನು ಡಾ| ಸಿಂಗ್ ಅವರು ಸ್ವೀಕರಿಸಿದ್ದು ಕಾರ್ಯಕ್ರಮಕ್ಕೆ ತೆರಳುವ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಡಾ| ಸಿಂಗ್ ಅವರು ಈ ಕಾರ್ಯಕ್ರಮವನ್ನು ಬಹಿಷ್ಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ರವಿವಾರ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಅವರು ಡಾ| ಸಿಂಗ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಮ್ಮತಿಸಿದ್ದಾರೆ. ನವೆಂಬರ್ 9ರಂದು ಅವರು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ಡಾ| ಸಿಂಗ್ ಅವರು ವಿಶೇಷ ಅತಿಥಿಯಾಗಿ ಬರಲು ಒಪ್ಪಿಕೊಂಡಿಲ್ಲ ಆದರೆ ಸಮಾನ್ಯ ಅಥಿತಿಯಾಗಿ ಬರಲಿದ್ದಾರೆ ಎಂದು ಖುರೇಶಿ ಹೇಳಿದ್ದಾರೆ.
ಗುರು ನಾನಕ್ ಅವರ 550ನೇ ಜನ್ಮದಿನದ ಅಂಗವಾಗಿ ಕರ್ತಾರ್ಪುರ ಕಾರಿಡಾರ್ ನಿರ್ಮಾಣವಾಗಿದೆ. ”ಕರ್ತಾರ್ಪುರ ಕಾರಿಡಾರ್ ಮಹತ್ವದ ಹಾಗೂ ದೊಡ್ಡ ಯೋಜನೆಯಾಗಿದೆ. ಇದನ್ನು ದೊಡ್ಡ ಅದ್ಧೂರಿ ಸಮಾರಂಭದಲ್ಲಿ ಉದ್ಘಾಟಿಸಲಾಗುತ್ತಿದೆ. ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಅವರನ್ನು ಸಿಖ್ಖ್ ಸಮುದಾಯದ ಪ್ರತಿನಿಧಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಸಿಂಗ್ ನಿರಾಕರಣೆ
ಕಾಶ್ಮೀರ ವಿಚಾರದಲ್ಲಿ ದಿನಕ್ಕೊಂದು ತಗಾದೆ ತೆಗೆಯುತ್ತಿರುವ ಪಾಕಿಸ್ಥಾನದ ಆಹ್ವಾನವನ್ನು ಡಾ| ಮನಮೋಹನ್ ಸಿಂಗ್ ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಪಾಕ್ ಆಹ್ವಾನದ ಮೇರೆಗೆ ತೆರಳಿದರೆ ಸೌಹಾರ್ದತೆ ಬದಲು ಹೊಸ ಸಂಘರ್ಷ ಹುಟ್ಟಿಕೊಳ್ಳುವ ಅಪಾಯ ಇದೆ ಎಂಬುದನ್ನು ಅರಿತು ಸಿಂಗ್ ಆಹ್ವಾನ ನಿರಾಕರಿಸಿದ್ಧಾರೆ ಎನ್ನಲಾಗಿದೆ.
ಪಂಜಾಬ್‌ನ ದೇರಾ ಬಾಬಾ ನಾನಕ್ ಮಂದಿರದಿಂದ ಪಾಕಿಸ್ಥಾನದ ಕರ್ತಾರ್ಪುರದ ದರ್ಬಾರ್ ಸಾಹೇಬ್ ಮಂದಿರದ ವರೆಗೆ ಈ ಕಾರಿಡಾರ್ ಸಂಪರ್ಕ ಕಲ್ಪಿಸಲಿದೆ.