ನವದೆಹಲಿ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನ ಮಾಜಿ ಅಧ್ಯಕ್ಷ, ದೇಶದ ಪ್ರಸಿದ್ಧ ವೈದ್ಯರಲ್ಲಿ ಒಬ್ಬರಾದ ಡಾ.ಕೆಕೆ ಆಗರ್ವಾಲ್ ಕೋವಿಡ್ 19 ಸೋಂಕಿನಿಂದ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸ್ನೇಹಿತರ ಜತೆ ಸೇರಿ ಪತಿ ಹತ್ಯೆ ಮಾಡಿಸಿದ ಪತ್ನಿ.!
ಕಳೆದ ಕೆಲವು ವಾರಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ಹೇಳಿವೆ.
ಕೆಕೆ ಆಗರ್ವಾಲ್ ಅವರು ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. 62 ವರ್ಷದ ಡಾ.ಅಗರ್ವಾಲ್ ಎರಡು ಲಸಿಕೆಯನ್ನು ಪಡೆದಿದ್ದರು ಎಂದು ವರದಿ ತಿಳಿಸಿದೆ. ವೈದ್ಯರಾಗಿ ವೃತ್ತಿ ಆರಂಭಿಸಿದ ನಂತರ ಕೆಕೆ ಅವರು ತಮ್ಮ ಜೀವಮಾನವಿಡೀ ಸಾರ್ವಜನಿಕರ ಹಿತಕ್ಕಾಗಿ ಹಾಗೂ ಆರೋಗ್ಯ ಜಾಗೃತಿ ಮೂಡಿಸಲು ಮುಡಿಪಾಗಿಟ್ಟಿದ್ದರು.
ಕೋವಿಡ್ 19 ಸೋಂಕಿನ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಡಾ.ಅಗರ್ವಾಲ್ ಅವರು ಕೋವಿಡ್ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಶ್ರಮಪಟ್ಟಿದ್ದರು. ಅಷ್ಟೇ ಅಲ್ಲ ನೂರಾರು ವಿಡಿಯೋಗಳ ಮೂಲಕ 100 ಮಿಲಿಯನ್ ಗೂ ಅಧಿಕ ಜನರನ್ನು ತಲುಪುವ ಮೂಲಕ ಲೆಕ್ಕವಿಲ್ಲದಷ್ಟು ಜನರ ಪ್ರಾಣವನ್ನು ಉಳಿಸಿರುವುದಾಗಿ ಪ್ರಕಟಣೆ ತಿಳಿಸಿದೆ.