ಚಿಕ್ಕಬಳ್ಳಾಪುರ: 2018ರಲ್ಲಿ ಮುಖ್ಯಮಂತ್ರಿ ಆಗಿದ್ದೂ 35,000ಕ್ಕೂ ಹೆಚ್ಚು ಮತಗಳ ಅಂತರದಿಂದ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರಲ್ಲ, ಆಗ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಅಂತ ಜನ ನಿಮ್ಮನ್ನು ಸೋಲಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಾ.ಕೆ.ಸುಧಾಕರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಚುನಾವಣ ಪ್ರಚಾರದ ವೇಳೆ ಸಿಎಂ ಸಿದ್ದರಾಮಯ್ಯ ಅವರು ಸುಧಾಕರ್ ಹೆಸರು ಪ್ರಸ್ತಾವಿಸದೇ ಎನ್‌ಡಿಎ ಅಭ್ಯರ್ಥಿ ಅವರನ್ನು ಸೋಲಿಸಿ ಎಂಬ ಹೇಳಿಕೆ ಕುರಿತು ಎಕ್ಸ್‌ನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿ ಸಿದ್ದರಾಮಯ್ಯಗೆ ಟಾಂಗ್ ನೀಡಿರುವ ಸುಧಾಕರ್, 2019ರಲ್ಲಿ ನಿಮ್ಮ ನಾಯಕ ರಾಹುಲ್ ಗಾಂಧಿ ಅವರು 55,000ಕ್ಕೂ ಹೆಚ್ಚು ಮತಗಳ ಅಂತರದಿಂದ ಅಮೇಠಿಯಲ್ಲಿ ಸೋತಿದ್ದರು ಎಂದಿದ್ದಾರೆ.
ನಿಮ್ಮ ಪ್ರಕಾರ ರಾಹುಲ್ ಗಾಂಧಿ ಭ್ರಷ್ಟಾಚಾರ ಮಾಡಿದ್ದಕ್ಕೆ ಸೋತಿದ್ದಾ? ನನ್ನ ಮೇಲೆ ತನಿಖೆಗೆ ಆದೇಶ ಮಾಡಿದ್ದೀರಿ. ಆದರೆ ಇನ್ನೂ ತನಿಖೆ ನಡೆಯುತ್ತಿರುವಾಗಲೇ, ಸಾಕ್ಷ್ಯ ಸಿಕ್ಕಿದೆ, ನಮಗೆ ಮಾಹಿತಿ ಇದೆ ಎಂದು ಹೇಳಿದ್ದೀರಿ. ಅದರಲ್ಲೇ ನಿಮ್ಮ ತನಿಖೆ ಎಷ್ಟು ಪೂರ್ವಗ್ರಹ ಪೀಡಿತ, ಎಷ್ಟು ನಿಷ್ಪಕ್ಷಪಾತ ಎಂದು ತಿಳಿಯುತ್ತದೆ ಎಂದು ಡಾ| ಕೆ.ಸುಧಾಕರ್ ಸಿದ್ದರಾಮಯ್ಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಆದರೆ ತಮ್ಮ ಒಕ್ಕಲಿಗ ದ್ವೇಷ ಗುಟ್ಟೇನೂ ಅಲ್ಲ. ಅದು ಇಡೀ ರಾಜ್ಯಕ್ಕೆ ತಿಳಿದಿರುವ ವಿಷಯ. ನನ್ನ ಸೋಲು ಗೆಲುವು ಮತದಾರರು ನಿರ್ಧಾರ ಮಾಡುತ್ತಾರೆ. ನಿಮಗೆ ಒಳ್ಳೆಯದಾಗಲಿ ಎಂದು ಡಾ| ಸುಧಾಕರ್ ಹೇಳಿದ್ದಾರೆ.