ಎಚ್.ಎಚ್.ಬೇಪಾರಿ
ಅಮೀನಗಡ: ಇಳಕಲ್ ತಾಲೂಕಿನ ಗುಡೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಪಟ್ಟಣದ ಡಾ| ಹರ್ಷವರ್ಧನ ಸಜ್ಜನ ಕೃಷಿಯಲ್ಲಿ ಭರವಸೆಯ ಹೆಜ್ಜೆ ಮೂಡಿಸಿದ್ದಾರೆ.
ಜನರ ಆರೋಗ್ಯದ ಕಾಳಜಿಯ ಜತೆಗೆ ಭೂಮಿಯ ಆರೈಕೆ, ಉತ್ತಿ-ಬಿತ್ತಿ-ಬಂಪರ್ ಬೆಳೆ ತೆಗೆದು ಭರವಸೆಯ ಕೃಷಿಕನಾಗಿ ಹೊರಹೊಮ್ಮಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಮಗ್ರ ತೋಟಗಾರಿಕೆ ಕೈಪಿಡಿ ಅಧ್ಯಯನ ಮಾಡಿ ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಮೊದಲ ಬಾರಿಗೆ ಮಲೆನಾಡ ಬೆಳೆ ಶುಂಠಿ ಅದರ ಜತೆ ಇನ್ನೊಂದು ಅಂತರ ಬೆಳೆ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ತಂದೆ-ತಾಯಿ ಸರ್ಕಾರಿ ನೌಕರಿಯಲ್ಲಿದ್ದರೂ ಇವರ ಅಜ್ಜನವರು ಮೂಲತಃ ಕೃಷಿ ಕುಟುಂಬದವರು. ಹೀಗಾಗಿ ತಾವೂ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಜಮೀನಿನಲ್ಲಿ ಕಾಲಿಟ್ಟ ಇವರು ಮೊದಲ ಪ್ರಯತ್ನದಲ್ಲೇ ಸಾಧನೆ ಮೆರೆದಿದ್ದಾರೆ.
34 ಕ್ವಿಂಟಲ್ ಶುಂಠಿ ಲಾಭ: ಪರಿಚಯಸ್ಥ ಶಿಕ್ಷಕರೊಬ್ಬರು ಶುಂಠಿ ಬೆಳೆಯಿಂದ ಹೆಚ್ಚು ಲಾಭ ಇದೆ ಎಂದು ತಿಳಿಸಿದ್ದರು. ಗೆಳೆಯನ ಜಮೀನಿನಲ್ಲಿ ಬೆಳೆದ ಶುಂಠಿ ತೋರಿಸಿದ್ದರು. ಇದನ್ನೇ ಪ್ರೇರಣೆಯಾಗಿರಿಸಿಕೊಂಡ ಡಾ| ಹರ್ಷವರ್ಧನ ತಮ್ಮ ಅರ್ಧ ಎಕರೆ ಜಮೀನಿನಲ್ಲಿ 40 ಸಾವಿರ ರೂ. ಖರ್ಚು ಮಾಡಿ 3 ಕ್ವಿಂಟಲ್ ಶುಂಠಿ ಜತೆಗೆ ಮೆಣಸಿನಕಾಯಿಯನ್ನು ಅಂತರ ಬೆಳೆಯಾಗಿ ಬೆಳೆದು 34 ಕ್ವಿಂಟಲ್ ಶುಂಠಿ ಹಾಗೂ 40 ಸಾವಿರ ರೂ. ಮೆಣಸಿನಕಾಯಿ ಬೆಳೆ ಪಡೆದು 1.20 ಲಕ್ಷ ರೂ. ಲಾಭ ಗಳಿಸಿದ್ದಾರೆ.
ಎಂಬಿಬಿಎಸ್ ಕೊನೆಯ ವರ್ಷ ಅಧ್ಯಯನ ಮಾಡುವ ಸಂದರ್ಭದಲ್ಲೇ ತಮ್ಮ ಒಟ್ಟು 12 ಎಕರೆ ಜಮೀನಿನ ಜವಾಬ್ದಾರಿ ಪಡೆದು ವಿವಿಧ ರೀತಿಯ ಬೆಳೆ ತೆಗೆದಿದ್ದಾರೆ. ಅಧ್ಯಯನ ಮುಗಿದ ನಂತರ ಗುಡೂರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತ ಕೃಷಿಯಲ್ಲೂ ಸಾಧನೆ ಮಾಡಿ ಚಿಕ್ಕ ವಯಸ್ಸಿನಲ್ಲಿಯೇ ಹುಬ್ಬೇರಿಸುವಂತೆ ಮಾಡಿದ್ದಾರೆ.
ತಮ್ಮ 12 ಎಕರೆ ಜಮೀನಿನಲ್ಲಿ ತೇಗದ ಗಿಡ, ಮಾವಿನ ಗಿಡ, ಸುಗಂಧ ರಾಜ ಹೂ ಗಿಡ, ಚೆಂಡು ಹೂ, ಹತ್ತಿ, ಮೆಣಸಿನಕಾಯಿ, ಪಪ್ಪಾಯಿ, ಗೋದಿ, ಹಾಗಲಕಾಯಿ, ಶುಂಠಿ ಹೀಗೆ ಹಲವಾರು ಬೆಳೆ ಬೆಳೆದಿದ್ದಾರೆ. ಸಾವಯವ ಗೊಬ್ಬರ ಹೆಚ್ಚು ಬಳಸಿ ಅವಶ್ಯವಿದ್ದಾಗ ಮಾತ್ರ ರಾಸಾಯನಿಕ ಗೊಬ್ಬರ ಬಳಸಿ ಅಲ್ಪಾವಧಿಯಲ್ಲಿಯೇ ಉತ್ತಮ ಕೃಷಿಕರೆನಿಸಿದ್ದಾರೆ.