Advertisement

ಗಿರಡ್ಡಿ ಶ್ರಮಿಸಿದು ಎಡ-ಬಲದ ಸಮತೋಲನಕ್ಕೆ: ಪ್ರೊ|ಚಂಪಾ

04:48 PM May 27, 2018 | Team Udayavani |

ಧಾರವಾಡ: ಹಿರಿಯ ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ್‌ ಅವರಿಗೆ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌, ಮನೋಹರ ಗ್ರಂಥ ಮಾಲೆ, ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್‌, ಸಾಹಿತ್ಯ ಪ್ರಕಾಶನ, ಚಿತ್ರಾ ಫಿಲ್ಮ್ ಸೊಸೈಟಿ, ರಂಗಾಯಣ ಸೇರಿದಂತೆ ವಿವಿಧ ಸಂಘ-ಸಂಸ್ಥೆಯಿಂದ ಶನಿವಾರ ನುಡಿ ನಮನ ಸಲ್ಲಿಸಲಾಯಿತು.

Advertisement

ನಗರದ ರಂಗಾಯಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, ದೇಶದಲ್ಲಿ ಎಡ-ಬಲಗಳ ಮಧ್ಯೆ ಬಹುದೊಡ್ಡ ಕಂದಕ ನಿರ್ಮಾಣಗೊಳ್ಳುತ್ತಿರುವ ಈ ಸಮಯದಲ್ಲಿ ಅವೆರಡನ್ನೂ ಸಮತೋಲಿಸುವ ಮಹತ್ವದ ಭಾರ ಗಿರಡ್ಡಿ ಮೇಲಿತ್ತು. ಅವರು ಜೀವನಪೂರ್ತಿ ಯಾವುದೇ ಇಸಂಗಳಿಗೆ ಜೋತು ಬೀಳಲಿಲ್ಲ ಎಂದರು.

ಡಾ| ಗಿರಡ್ಡಿ ಬದುಕಿನುದ್ದಕ್ಕೂ ಒಂದೇ ವೇಗ, ಒಂದೇ ಲಯ ಹಾಗೂ ಸಮಾಧಾನವಾಗಿ ಹರಿಯುವ ನದಿಯಂತೆ ಬಾಳಿದ. ರಾಜ್ಯ, ದೇಶದಲ್ಲಿ ನಡೆದ ಯಾವ ಚಳವಳಿಯಲ್ಲೂ ನೇರವಾಗಿ ಭಾಗಿಯಾಗಲಿಲ್ಲ. ಯಾವುದೇ ಚಳವಳಿ ಬಗ್ಗೆಯೂ ನಿರ್ದಿಷ್ಟವಾಗಿ ಮಾತನಾಡಬಲ್ಲವನಾಗಿದ್ದ, ಅಂತಹ ಅಪರೂಪದ ವ್ಯಕ್ತಿ ನಮ್ಮನ್ನು ಬಿಟ್ಟು ಹೋಗಿದ್ದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು.

ಸಾಹಿತಿ ಗುರುಲಿಂಗ ಕಾಪಸೆ ಮಾತನಾಡಿ, ಗಿರಡ್ಡಿ ಅವರ ಓದು ವ್ಯಾಪಕ ಹಾಗೂ ವಿಶಿಷ್ಟವಾಗಿತ್ತು. ಗೋಕಾಕ ಅವರಿಗಿಂತ ಗಿರಡ್ಡಿ ಅವರು ಒಂದು ಹೆಜ್ಜೆ ಮುಂದಿದ್ದರು. ವ್ಯಾಪಕ ಓದು ಅಳವಡಿಸಿಕೊಂಡಿದ್ದರಿಂದಲೇ ಅವರು ವಿಮರ್ಶಕರಾಗಲು ಅನುಕೂಲವಾಯಿತು. ಎಂ.ಎಂ. ಕಲಬುರ್ಗಿ ಹಾಗೂ ಡಾ| ಗಿರಡ್ಡಿ ಗೋವಿಂದರಾಜ್‌ ಅವರನ್ನು ಕಳೆದುಕೊಂಡಿರುವುದು ಅಪಾರ ನಷ್ಟವಾದಂತಾಗಿದೆ ಎಂದರು.

ಸಾಹಿತಿ ಡಾ| ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಗಿರಡ್ಡಿ ಹಾಗೂ ನನ್ನದು 62 ವರ್ಷಗಳ ಸ್ನೇಹ. ಅವನೊಂದಿಗೆ ಮಾಡದಿದ್ದ ಚರ್ಚೆಗಳಿರಲಿಲ್ಲ. ಎಂದೂ ಅವನು ತನ್ನತನವನ್ನು ಬಿಟ್ಟು ಕೊಡಲಿಲ್ಲ. ಕಾಲೇಜು ದಿನಗಳಿಂದಲೇ ವಿಮರ್ಶೆ ಗುಣ ಬೆಳೆಸಿಕೊಂಡ ಗಿರಡ್ಡಿ, ನಮ್ಮ ನಡುವಿನ ಮಧ್ಯಮವೇ ಆಗಿದ್ದರು ಎಂದು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಚನ್ನವೀರ ಕಣವಿ ಮಾತನಾಡಿ, ಈ ವರ್ಷದ ಅಡ್ಡ ಮಳೆ ಹಾಗೂ ಸಿಡಿಲಿನ ಆಘಾತಕ್ಕಿಂತ ಗಿರಡ್ಡಿ ಅವರ ಸಾವು ಬಹು ದೊಡ್ಡ ಆಘಾತ ನೀಡಿದೆ. ಅಪಾರ ಪ್ರತಿಭೆ ಹೊಂದಿದ್ದ ಗಿರಡ್ಡಿ ಅವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ವಿಮರ್ಶೆಯಲ್ಲಿ ಪ್ರಖರ ಹಾಗೂ ಪಕ್ವವಾಗಿದ್ದರು. ಸಾಹಿತ್ಯ ಸಂಭ್ರಮ ಯಶಸ್ಸಿಗೆ ಅವರೇ ಕಾರಣ ಎಂದು ಹೇಳಿದರು.

ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ| ವೀಣಾ ಸಂಕನಗೌಡರ, ರಮಾಕಾಂತ್‌ ಜೋಶಿ, ಅನ್ವೇಷಣಾ ಕೂಟದ ನರಸಿಂಹ ಪರಾಂಜಪೆ, ಆಲೂರು ಟ್ರಸ್ಟ್‌ನ ಟ್ರಸ್ಟಿ ವೆಂಕಟೇಶ ದೇಸಾಯಿ, ಅಭಿನಯ ಭಾರತಿಯ ಅರವಿಂದ ಕುಲಕರ್ಣಿ, ಶಶಿಧರ ತೋಡ್ಕರ, ಆನಂದ ಜುಂಝರವಾಡ, ಎಂ.ಎ. ಸುಬ್ರಹ್ಮಣ್ಯ, ಪ್ರಕಾಶ ಭಟ್‌, ಬಸು ಬೇವಿನಗಿಡದ, ರಾಘವೇಂದ್ರ ಪಾಟೀಲ, ರಜನಿ ಗರುಡ, ಬಿ.ಎಲ್‌. ಪಾಟೀಲ, ನಿರ್ಮಲಾ ಹಂಚಿನಮನಿ, ಮಾಲತೇಶ ಹುಬ್ಬಳ್ಳಿ ಮಾತನಾಡಿದರು. ಸಮೀರ ಜೋಶಿ, ಇತರರು ಇದ್ದರು. ಹಾ.ವೆ. ಕಾಖಂಡಕಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next