ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಗಡಿಯ ಚರ್ಚೆ, ಜಾತಿ ಓಲೈಕೆ ಕುರಿತು ಚರ್ಚೆ ತೀವ್ರವಾಗಿರುವ ವೇಳೆ ಹಿರಿಯ ನಾಯಕ, ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ”ಮಲ್ಲಿಕಾರ್ಜುನ ಖರ್ಗೆ ಹಿರಿಯ ಸಹೋದರರು, ರಾಜಕಾರಣ ಹೊರತುಪಡಿಸಿ ಅವರು ನನಗೆ ಹಿರಿಯರು. ನಮ್ಮ ತಂದೆಗೆ ಅವರ ಜೊತೆ ಒಡನಾಟ ಇತ್ತು. ಒಂದೇ ಕುಟುಂಬದವರಂತೆ ಇದ್ದೇವೆ. ಎಂಬತ್ತು ವರ್ಷದ ಹುಟ್ಟುಹಬ್ಬದ ಕಾರಣ ಶುಭ ಕೋರಲು ಬಂದಿದ್ದೆ ಹೊರತಾಗಿ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ” ಎಂದರು.
”ಈಗಲೇ ಸಿಎಂ ಹುದ್ದೆಯ ಬಗ್ಗೆ ಯಾರೇ ಚರ್ಚಿಸಿದರೂ ಉಪಯೋಗವಿಲ್ಲ. ನಮ್ಮ ನಾಯಕರಿಗೆ ಮನವಿ ಮಾಡುತ್ತೇನೆ. ಮೊದಲು ಪಕ್ಷವನ್ನ ಅಧಿಕಾರಕ್ಕೆ ತರುವ, ಆಮೇಲೆ ಸಿಎಂ ಬಗ್ಗೆ ಮಾತನಾಡೋಣ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಲ್ಲರೂ ಒಮ್ಮತದಿಂದ ಇರಬೇಕು. ಯಾವುದೇ ಕಾರಣಕ್ಕೂ ಗೊಂದಲಕ್ಕೆ ಅವಕಾಶ ನೀಡಬಾರದು” ಎಂದು ಪಕ್ಷದಲ್ಲಿ ನಡೆಯುತ್ತಿರುವ ಸಿಎಂ ಗಾದಿ ಗುದ್ದಾಟಕ್ಕೆ ಪರಮೇಶ್ವರ್ ಬೇಸರ ವ್ಯಕ್ತ ಪಡಿಸಿದರು.
”113 ಸ್ಥಾನಗಳು ಬಂದ ನಂತರ ಸಿಎಂ ಸ್ಥಾನ ಯೋಚನೆ ಮಾಡಬೇಕು, ಅಷ್ಟಕ್ಕೂ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ. ಪಕ್ಷಕ್ಕೆ ಬಹುಮತ ಬಂದ ಬಳಿಕ ಕೇಂದ್ರದಿಂದ ರಾಜ್ಯಕ್ಕೆ ವೀಕ್ಷಕರನ್ನ ಹೈಕಮಾಂಡ್ ಕಳುಹಿಸಲಿದೆ. ಬಳಿಕ ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಾರೆ. ಅದಾದ ಬಳಿಕ ಹೈಕಮಾಂಡ್ ಗೆ ಮಾಹಿತಿ ನೀಡಿ ಆ ನಂತರವಷ್ಟೇ ಸಿಎಂ ಆಯ್ಕೆ ನಡೆಯುವುದು ವಾಡಿಕೆ” ಎಂದರು.
”ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ” ಎಂಬ , ಡಿ.ಕೆ. ಶಿವಕುಮಾರ್ ಹೇಳಿಕೆಯನ್ನ ಸಮರ್ಥಿಸಿಕೊಂಡ ಮಾಜಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ”ಕೆಪಿಸಿಸಿ ಅಧ್ಯಕ್ಷರಾಗಿ ಆ ಮಾತನ್ನ ಹೇಳಲೇಬೇಕು. ನಾನು ಕೂಡ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಇಂತಹ ಸಂದರ್ಭದಲ್ಲಿ ನಾನು ಅಷ್ಟು ಕಟುವಾಗಿ ಹೇಳದೇ ಇರಬಹುದು. ಆದರೂ ನನ್ನದೇ ಆದ ರೀತಿಯಲ್ಲಿ ಪಕ್ಷದ ಕೆಲಸ ಮಾಡಿ ಎನ್ನುತ್ತಿದ್ದೆ. ಅದರಲ್ಲಿ ತಪ್ಪೇನು ಇಲ್ಲ” ಎಂದರು.
ಡಿಕೆಶಿಯಿಂದ ಒಕ್ಕಲಿಗ ಸಮುದಾಯದ ಓಲೈಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಒಕ್ಕಲಿಗ ಸಮುದಾಯದ ಓಲೈಕೆ ತಪ್ಪೇನಿಲ್ಲ. ಸಮುದಾಯದ ಮುಂದೆ ಕೇಳಬಾರದು ಅನ್ನಲು ಆಗುತ್ತಾ ? ಆ ಸಮುದಾಯ ಆಸೆ ಪಟ್ಟರೆ ಬೇಡ ಅಂತ ಹೇಳಲು ನಾವು ಯಾರು ? ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಹೋಗಲಿದೆ. ಒಟ್ಟಿಗೆ ಹೋಗವ ಇಚ್ಛಾಶಕ್ತಿ ಎಲ್ಲರಲ್ಲೂ ಇರಬೇಕು” ಎಂದರು.