ಬೆಳ್ತಂಗಡಿ: ಮಹಿಳಾ ಸಶಕ್ತೀಕರಣ ಅಂದರೆ ಮಹಿಳೆಯರಲ್ಲಿರುವ ಶಕ್ತಿ-ಸಾಮರ್ಥ್ಯ ಮತ್ತು ಕೌಶಲದೆಡೆಗೆ ಅವರಿಗೆ ಅರಿವು, ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರ ಸಶಕ್ತೀಕರಣಕ್ಕೆ ಶ್ರೇಷ್ಠ ಅವಕಾಶ, ಪ್ರೇರಣೆ ಮತ್ತು ನಿರಂತರ ಮಾರ್ಗದರ್ಶನ ನೀಡುತ್ತಿದೆ ಎಂದು ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಉದ್ದಿಮೆದಾರರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿ, ಇಂದು ಸರಕಾರ ಮತ್ತು ಸಮಾಜದಿಂದ ಸಿಗುವ ಅವಕಾಶಗಳು, ಶಿಕ್ಷಣ ಹಾಗೂ ಸಾಲ ಸೌಲಭ್ಯದ ಸದುಪಯೋಗ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ವ್ಯವಹಾರದೊಂದಿಗೆ ಯಶಸ್ವಿ ಉದ್ಯಮಿಗಳಾಗಿ ಮಿಂಚುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಮೃತ ಜೀವನ ಪ್ರಯಾಸ್ ಚಿಂತನ ಕೃತಿ ಬಿಡುಗಡೆಗೊಳಿಸಿದ ಸಿಡ್ಬಿ ಅಧ್ಯಕ್ಷ ಶಿವ ಸುಬ್ರಹಮಣ್ಯ ರಾಮನ್ ಮಾತನಾಡಿ, ಸಿಡ್ಬಿಯ ಪ್ರಯಾಸ್‌ಯೋಜನೆಯಡಿ ಉದ್ದಿಮೆ ಆಸಕ್ತರಿಗೆ ಕಡಿಮೆ ಬಡ್ಡಿದರದಲ್ಲಿ ಉತ್ತಮ ಸಾಲ ಒದಗಿಸುತ್ತಿದೆ. ಮಹಿಳಾ ಉದ್ದಿಮೆದಾರರು ಉದ್ಯಮ ನೋಂದಾವಣೆ ಮಾಡಿಕೊಂಡು ಸರಕಾರಕ್ಕೆ ನೀಡುವ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಬೇಕು. ಎಲ್ಲರೂ ಸ್ವಾವಲಂಬನೆಯೊಂದಿಗೆ ಜೀವನ ಮಟ್ಟ ಸುಧಾರಣೆ ಕಂಡುಕೊಳ್ಳಬೇಕು ಎಂದರು.
ಮಂಗಳೂರಿನ ಅನಂತ ಭಟ್, ಡ್ಯಾಫಿನಿ ಸ್ಟೆಲ್ಲಾ ಡಿ’ಸೋಜಾ, ಸಿರಿ ಸಂಸ್ಥೆಯ ಪ್ರಸನ್ನ ಯು. ತೆರಿಗೆ ಪಾವತಿ ಮತ್ತು ಲೆಕ್ಕಪತ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಡಾ| ಹೇಮಾವತಿ ವೀ.ಹೆಗ್ಗಡೆ, ಸಿಡ್ಬಿಯ ಮುಖ್ಯ ಮಹಾಪ್ರಬಂಧಕ ರವಿತ್ಯಾಗಿ ಮತ್ತು ಉಪಮಹಾಪ್ರಬಂಧಕ ನಿತಿನ್ ಶುಕ್ಲಾ ಉಪಸ್ಥಿತರಿದ್ದರು.
Related Articles
ಬಂಟ್ವಾಳದ ಯಶಸ್ವಿ ಮಹಿಳಾ ಉದ್ಯಮಿ ಯೋಗಿತಾ ತಮ್ಮ ಯಶೋಗಾಥೆಯನ್ನು ವಿವರಿಸಿದರು. 350 ಮಹಿಳಾ ಉದ್ಯಮಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಶಿವಾನಂದ ಆಚಾರ್ಯ ವಂದಿಸಿದರು. ಪೂಜಾ ಪಕ್ಕಳ ನಿರ್ವಹಿಸಿದರು.
1000 ಕೋಟಿ ರೂ. ಸಾಲ ಮಂಜೂರಾತಿ ಪತ್ರ ಹಸ್ತಾಂತರ
ಅಮೃತ ಜೀವನ ಪ್ರಯಾಸ್ ಚಿಂತನ ಕೃತಿ ಬಿಡುಗಡೆಗೊಳಿಸಿದ ಸಿಡ್ಬಿ ಅಧ್ಯಕ್ಷ ಶಿವ ಸುಬ್ರಹಮಣ್ಯ ರಾಮನ್ 1000 ಕೋಟಿ ರೂ. ಸಾಲ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥರಿಗೆ ನೀಡಿದರು.