Advertisement

ತಯಾರಿಕೆ ಕಂಪನಿಗಳಿಂದಲೇ ಲಸಿಕೆ ನೇರ ಖರೀದಿ ಎಂದ ಡಾ.ಸಿ.ಎನ್.‌ಅಶ್ವತ್ಥನಾರಾಯಣ

04:17 PM May 31, 2021 | Team Udayavani |

ಬೆಂಗಳೂರು : ಜಾಗತಿಕವಾಗಿ ಕೋವಿಡ್‌ ಲಸಿಕೆ ಖರೀದಿ ಮಾಡಲು ಮುಂದಾಗಿರುವ ರಾಜ್ಯಕ್ಕೆ ಇ- ಟೆಂಡರ್‌ ಸಲ್ಲಿಸಿದ್ದ ಎರಡು ಕಂಪನಿಗಳು ಸಕಾಲಕ್ಕೆ ಅಗತ್ಯ ದಾಖಲೆಗಳನ್ನು ನೀಡದ ಕಾರಣಕ್ಕೆ  ಸರಕಾರವೇ ನೇರವಾಗಿ ತಯಾರಿಕಾ ಕಂಪನಿಗಳಿಂದಲೇ ಲಸಿಕೆ ಖರೀದಿಸಲು ಮುಂದಾಗಿದೆ.

Advertisement

ಬೆಂಗಳೂರಿನಲ್ಲಿ ಗುರುವಾರ ಚಲನಚಿತ್ರ ಕಲಾವಿದರ ಸಂಘದಲ್ಲಿ ಕನ್ನಡ ಸಿನಿಮಾ ಕಲಾವಿದರಿಗೆ ಕೋವಿಡ್‌ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ರಾಜ್ಯ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಈ ವಿಷಯ ತಿಳಿಸಿದರು.

ಮೇ 15ರಂದು ಕರೆಯಲಾಗಿದ್ದ ಟೆಂಡರ್‌ನಲ್ಲಿ ಮುಂಬಯಿಯ ಬುಲಕ್‌ ಎಂಆರ್‌ಒ ಇಂಡಸ್ಟ್ರೀಯಲ್‌ ಸಪ್ಲೈ ಹಾಗೂ ಬೆಂಗಳೂರಿನ ತುಳಸಿ ಸಿಸ್ಟಮ್ಸ್‌ ಕಂಪನಿಗಳು ಲಸಿಕೆ ಪೂರೈಕೆ ಮಾಡುವುದಾಗಿ ಮುಂದೆ ಬಂದಿದ್ದವು. ಟೆಂಡರ್‌ಗೆ ಅರ್ಜಿ ಹಾಕಿಕೊಂಡಿದ್ದವು. ಆ ಕಂಪನಿಗಳು ತಯಾರು ಮಾಡುವ ಕಂಪನಿಗಳಿಂದ ಲಸಿಕೆ ಪಡೆದು ರಾಜ್ಯಕ್ಕೆ ಪೂರೈಸುವುದಾಗಿ ಹೇಳಿದ್ದವು. ಇದಕ್ಕೆ ಸಂಬಂಧಿಸಿ ಹಣಕಾಸು ದಾಖಲೆಗಳೂ ಸೇರಿ ʼಪೂರೈಕೆ ಖಾತರಿʼಯ ದಾಖಲೆ ಹಾಗೂ ಲಸಿಕೆಯ ʼತಾಂತ್ರಿಕ ದಾಖಲೆಗಳನ್ನು ಸಲ್ಲಿಸಲಿಲ್ಲ.

ಬದಲಿಗೆ ಎರಡು ಸಲ ವರ್ಚುಯಲ್‌ ಸಭೆಗಳನ್ನು ಕರೆದರೂ ಆಯಾ ಕಂಪನಿಗಳ ಅಧಿಕಾರಿಗಳು ಭಾಗವಹಿಸಲಿಲ್ಲ. ಜತೆಗೆ, ರಷ್ಯಾ ಮೂಲದ ʼಸ್ಪುಟ್ನಿಕ್‌ʼ ಲಸಿಕೆ ತಯಾರಿಸುವ ಕಂಪನಿಯ ಜತೆ ಮಾಡಿಕೊಂಡಿರುವ ಒಪ್ಪಂದದ ದಾಖಲೆಗಳನ್ನು ಸಲ್ಲಿಸುವಲ್ಲಿಯೂ ಆ ಕಂಪನಿಗಳು ವಿಫಲವಾದವು. ಈ ಹಿನ್ನೆಲೆಯಲ್ಲಿ ಜಾಗತಿಕ ಟೆಂಡರ್‌ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

ಜಾಗತಿಕ ಟೆಂಡರ್‌ ತಿರಸ್ಕೃತವಾದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ನೇರವಾಗಿ ಲಸಿಕೆ ಖರೀದಿ ಮಾಡುವ ಉದ್ದೇಶ ಇದೆ. ಜಗತ್ತಿನ ಯಾವುದೇ ಔಷಧ ಕಂಪನಿ ಲಸಿಕೆ ಮಾರಲು ಮುಂದೆ ಬಂದರೆ ಖರೀದಿ ಮಾಡಲಾಗುವುದು. ಈಗಾಗಲೇ ಜಾಗತಿಕ ಮಟ್ಟದಲ್ಲಿ ಲಸಿಕೆ ತಯಾರು ಮಾಡುವ ಎಲ್ಲ ಕಂಪನಿಗಳಿಗೆ ಈ ಸಂದೇಶ ರವಾನಿಸಲಾಗಿದೆ. ಲಸಿಕೆಗಾಗಿ ಕಾಯುತ್ತಾ ಕೂರಲು ಸಾಧ್ಯವಿಲ್ಲ. ಮೂರನೇ ಅಲೆಯ ಭೀತಿ ನಮ್ಮ ಮುಂದಿದೆ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

ಲಾಕ್‌ಡೌನ್‌ ಮುಂದುವರಿಕೆ ಚರ್ಚೆ ನಡೆದಿಲ್ಲ:

ಲಾಕ್‌ಡೌನ್‌ ಮುಂದುವರಿಸಬೇಕೆ ಬೇಡವೇ ಎಂಬ ಬಗ್ಗೆ ಸರಕಾರ ಇನ್ನೂ ಯೋಚನೆ ಮಾಡಿಲ್ಲ. ಆದರೆ, ಕೆಲ ವಿಭಾಗಗಳಲ್ಲಿ ಅನ್‌ಲಾಕ್‌ ಆಗಲೇಬೇಕಿದೆ. ಆದರೆ ಈ ಬಗ್ಗೆ ಇಷ್ಟು ಬೇಗ ಏನೂ ಹೇಳಲಾಗದು ಎಂದು ಡಿಸಿಎಂ ಇದೇ ವೇಳೆ ಹೇಳಿದರು.

“ಲಾಕ್‌ಡೌನ್‌ ಮುಗಿಯಲು ಇನ್ನೂ ಒಂದು ವಾರ ಕಾಲಾವಕಾಶವಿದೆ. ಇಷ್ಟು ಬೇಗ ಏನನ್ನೂ ಹೇಳಲಾಗದು. ಅಂಕಿ-ಅಂಶಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿದೆ. ತಜ್ಞರ ಅಭಿಪ್ರಾಯ ಪಡೆಯಬೇಕಿದೆ. ಆದರೆ, ಜೀವ ಉಳಿಯುವುದರ ಜತೆಗೆ ಜೀವನವೂ ನಡೆಯಬೇಕು. ಹೀಗಾಗಿ ಕೆಲ ರಿಯಾಯಿತಿಗಳನ್ನು ಕೊಡಬೇಕು” ಎಂದರು.

ಎಲ್ಲ ಕಲಾವಿದರಿಗೂ ಲಸಿಕೆ

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ 18 ವರ್ಷ ವಯಸ್ಸಿನ ಮೇಲ್ಪಟ್ಟ 15,000 ಕಲಾವಿದರಿಗೂ ಕೋವಿಡ್‌ ಲಸಿಕೆ ನೀಡಲಾಗುವುದು ಎಂದ ಡಿಸಿಎಂ, ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ಸೇರಿ ಆಹಾರ ಧಾನ್ಯ ನೀಡಲು ಸರಕಾರ ತಯಾರಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವೆ ಎಂದರು.

ಮುಖ್ಯಮಂತ್ರಿಗಳ ಗೃಹ ನಿರ್ಮಾಣ ಯೋಜನೆ ಅಡಿಯಲ್ಲಿ ಬಡ ಕಲಾವಿದರಿಗೆ ರಿಯಾಯಿತಿ ಬೆಲೆಯಲ್ಲಿ ಮನೆ ನೀಡುವ ಬಗ್ಗೆಯೂ ಸರಕಾರ ಉದ್ದೇಶಿಸಿದೆ. ಸದ್ಯದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದ್ದು, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಿಕೊಳ್ಳಬಹುದು ಎಂದು ಡಿಸಿಎಂ ತಿಳಿಸಿದರು.

ನಮ್ಮ ನಾಡಿನ ಕಲೆ ಸಂಸ್ಕೃತಿ ರಕ್ಷಣೆಯಲ್ಲಿ ಕಲಾವಿದರ ಪಾತ್ರ ದೊಡ್ಡದು. ಇವರು ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಹೀಗಾಗಿ ಕಲಾವಿದರು ಸಂಕಷ್ಟಕ್ಕೆ ಸಿಲುಕುವುದನ್ನು ಸರಕಾರ ಇಷ್ಟಪಡುವುದಿಲ್ಲ. ಮೊದಲ ಅಲೆಯ ಕಾಲದಲ್ಲೂ ಚಿತ್ರರಂಗದ ನೆರವಿಗೆ ಸರಕಾರ ಧಾವಿಸಿತ್ತು. ಈಗಲೂ ನೆರವಿಗೆ ಬರಲಿದೆ. ಯಾವ ಕಾರಣಕ್ಕೂ ಸಿನಿಮಾ ರಂಗ ಕಷ್ಟಕ್ಕೆ ಸಿಲಿಕಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.

ಇದೇ ವೇಳೆ ಸಂಸದೆ ಸುಮಲತಾ ಅಂಬರೀಶ್‌, ಕಲಾವಿದರ ಸಂಘದ ಅಧ್ಯಕ್ಷ ರಾಕ್‌ಲೈನ್‌ ವೆಂಕಟೇಶ್‌, ಹಿರಿಯ ಕಲಾವಿದ ದೊಡ್ಡಣ್ಣ ಅವರು ಕಲಾವಿದರ ಸಮಸ್ಯೆಗಳ ಬಗ್ಗೆ ಡಿಸಿಎಂ ಜತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ನಿರ್ದೇಶಕಿ ರೂಪಾ ಅಯ್ಯರ್‌ ಸೇರಿದಂತೆ ಚಿತ್ರರಂಗದ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next