Advertisement

ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ಕೌಶಲ್ಯಾಧಾರಿತ ಶಿಕ್ಷಣ :ಡಾ.ಸಿ.ಎನ್‌.ಅಶ್ವತ್ಥನಾರಾಯಣ

06:19 PM Dec 29, 2020 | Team Udayavani |

ಬೆಂಗಳೂರು : ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಿಂದಲೇ ಕೌಶಲ್ಯಾಧಾರಿತ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಕೌಶಲ್ಯಕ್ಕೆ ಮಹತ್ವ ನೀಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು.

Advertisement

ಡೇರಿ ವೃತ್ತದ ಕಲ್ಯಾಣ ಸುರಕ್ಷಾ ಭವನದಲ್ಲಿನ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ನವೀಕೃತ ಕಟ್ಟಡದ ಕಚೇರಿ ಹಾಗೂ ಅಂತಾರಾಷ್ಟ್ರೀಯ ವಲಸೆ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಕೌಶಲ್ಯ ತರಬೇತಿ ಪಡೆದುಕೊಂಡಿರುವ ಯುವಕರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರವು ಮಹತ್ವದ ಮೂರು ಒಪ್ಪಂದಗಳನ್ನು ಮಾಡಿಕೊಂಡಿದೆ. ಇದರಿಂದ ಅನೇಕರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದರು.

ರಾಜ್ಯದಲ್ಲಿ ಅತ್ಯುತ್ತಮ ಮಾನವ ಸಂಪನ್ಮೂಲವಿದ್ದು, ಸದ್ಯದ ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಯುವಜನತೆಗೆ ಕೌಶಲ್ಯ ತರಬೇತಿ ನೀಡಲು ಅನೇಕ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳಿಗೂ ಸರ್ಕಾರ ಆದ್ಯತೆ ನೀಡುತ್ತಿದೆ. ಸಾಂಪ್ರದಾಯಿಕ ಶಿಕ್ಷಣದಿಂದ ಪ್ರಯೋಜನವಿಲ್ಲ. ಜನರಿಗೆ ಹಾಗೂ ಸಮಾಜಕ್ಕೆ ಅಗತ್ಯವಾಗುವ, ದೇಶಕ್ಕೆ ಶಕ್ತಿ ತುಂಬುವ ಶಿಕ್ಷಣವನ್ನು ನೀಡಬೇಕಿದೆ. ಯಾವ ಉದ್ದೇಶಕ್ಕಾಗಿ ಓದಬೇಕು ಎಂಬ ಸ್ಪಷ್ಟತೆ ಮಕ್ಕಳಿಗೆ ಇರಬೇಕು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಹಂತದಿಂದಲೇ ಉದ್ಯೋಗ ಆಧಾರಿತ ಶಿಕ್ಷಣ ನೀಡಲಾಗುವುದು ಎಂದರು.

ಇದನ್ನೂ ಓದಿ:ಭೂಗತ ಪಾತಕಿ ರವಿ ಪೂಜಾರಿಗೆ ಅರೋಗ್ಯ ಸಮಸ್ಯೆ : ಆಸ್ಪತ್ರೆಗೆ ದಾಖಲು

ಕೌಶಲಾಭಿವೃದ್ಧಿ ಪ್ರಾಧಿಕಾರದ ನವೀಕೃತ ಕಟ್ಟಡವನ್ನು ಅತ್ಯಾಧುನಿಕ ಸೌಲಭ್ಯಗಳ ಮೂಲಕ ನವೀಕರಣ ಮಾಡಲಾಗಿದೆ. ಅಂತಾರಾಷ್ಟ್ರೀಯ ವಲಸೆ ಕೇಂದ್ರವು ವಿದೇಶಗಳಲ್ಲಿ ಕೌಶಲ್ಯ ಆಧಾರಿತ ಉದ್ಯೋಗ ಬಯಸುವ ರಾಜ್ಯದ ಉತ್ಸಾಹಿ ಯುವಜನರಿಗೆ ಶಕ್ತಿ ನೀಡಿ ಸೂಕ್ತ ಮಾರ್ಗದರ್ಶನ-ಸಹಕಾರ ನೀಡಲಿದೆ ಎಂದು ಹೇಳಿದರು.

Advertisement

ಪ್ರಮುಖ ಒಪ್ಪಂದಗಳು:
ಪೀಣ್ಯ ಕೈಗಾರಿಕೆ ಪ್ರದೇಶದ ಕೈಗಾರಿಕೆಗಳ ಅಗತ್ಯಕ್ಕೆ ಅನುಗುಣವಾಗಿ ಐಟಿಐ ಸಂಸ್ಥೆಗಳಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಹಾಗೂ ಕೌಶಲ್ಯರಹಿತ ಯುವಕ-ಯುವತಿಯರಿಗೆ ತರಬೇತಿ ಮತ್ತು ಉದ್ಯೋಗ ಕಲ್ಪಿಸಲು ಪೀಣ್ಯ ಕೈಗಾರಿಕೆಗಳ ಸಂಘ, ಕೈಗಾರಿಕಾ ತರಬೇತಿ-ಉದ್ಯೋಗ ಆಯುಕ್ತಾಲಯ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮಗಳ ನಡುವೆ ಒಪ್ಪಂದವಾಗಿದೆ. ಈ ಒಪ್ಪಂದದಿಂದ ಲಕ್ಷಾಂತರ ಯುವಜನತೆಗೆ ಕೆಲಸ ಸಿಗಲಿದೆ ಎಂದು ಹೇಳಿದರು.

ಹೆಚ್ಚಿನ ಅಪ್ರಂಟಿಶಿಪ್‌ ಸ್ಥಾನಗಳನ್ನು ಗುರುತಿಸಲು ಹಾಗೂ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಅಪ್ರಂಟಿಶಿಪ್‌ ಕಾರ್ಯಕ್ರಮ ನೀಡಲು ಟೀಮ್‌ಲೀಸ್‌ ಸ್ಕಿಲ್ಸ್‌ ವಿಶ್ವವಿದ್ಯಾಲಯ ಹಾಗೂ ಕೈಗಾರಿಕಾ ತರಬೇತಿ-ಉದ್ಯೋಗ ಆಯುಕ್ತಾಲಯದ ನಡುವೆ ಒಡಂಬಡಿಕೆ ಆಗಿದೆ. ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಲು ಈ ಒಪ್ಪಂದ ಅನುಕೂಲವಾಗಲಿದೆ. ಸರ್ಕಾರಿ ಐಟಿಐ ವಿದ್ಯಾರ್ಥಿಗಳಿಗೆ ಎಂಟ್ರಪ್ರಿನ್ಯೂರಿಯಲ್‌ ಮೈಂಡ್‌ಸೆಟ್‌ ಕಾರ್ಯಕ್ರಮ ನೀಡುವ ಕುರಿತು ಉದ್ಯಮ್‌ ಲರ್ನಿಂಗ್‌ ಫೌಂಡೇಶನ್‌ ಮತ್ತು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಆಯುಕ್ತಾಲಯಗಳ ನಡುವೆ ಒಪ್ಪಂದ ಆಗಿದೆ ಎಂದು ವಿವರ ನೀಡಿದರು.

ರಾಜ್ಯ ಕೌಶಲಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ರತ್ನಪ್ರಭಾ, ಶಾಸಕ ಉದಯ್‌ ಗರುಡಾಚಾರ್‌, ಕೌಶಲಾವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್‌, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತ ಡಾ.ತ್ರಿಲೋಕ ಚಂದ್ರ, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿ‌ನ್‌ ಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next