Advertisement

ದ.ಕ. ಎಸ್‌ಪಿ ಅಧಿಕಾರ ಸ್ವೀಕಾರ

11:10 AM Jan 30, 2018 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಬಿ.ಆರ್‌. ರವಿಕಾಂತೇ ಗೌಡ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ನಿಕಟಪೂರ್ವ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ಅವರು ಜ. 23ರಂದು ವರ್ಗಾವಣೆಯಾಗಿ ತೆರಳಿದ್ದರು. ಬಳಿಕ ಅಡಿಶನಲ್‌ ಎಸ್‌ಪಿ ವಿ.ಜಿ. ಸಜಿತ್‌  ಪ್ರಭಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಸೋಮವಾರ ಅವರಿಂದ ಡಾ| ಬಿ.ಆರ್‌. ರವಿಕಾಂತೇ ಗೌಡ ಅಧಿಕಾರ ಸ್ವೀಕರಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಬೆಸಗರಹಳ್ಳಿ ಯವರಾದ ಡಾ| ಬಿ.ಆರ್‌. ರವಿಕಾಂತೇ ಗೌಡ 1999ರಲ್ಲಿ ಡಿವೈಎಸ್‌ಪಿ ಆಗಿ ನೇಮಕಗೊಂಡು ನಂಜನ ಗೂಡಿನಲ್ಲಿ ಪ್ರಥಮವಾಗಿ ಸೇವೆ ಸಲ್ಲಿಸಿದ್ದರು. ಕಳೆದ ಮೂರು ವರ್ಷ ನಾಲ್ಕು ತಿಂಗಳುಗಳಿಂದ ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಪೊಲೀಸ್‌ ಇಲಾಖೆಗೆ ಸೇರುವ ಮೊದಲು ಅವರು ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು, ಬೆಂಗಳೂರು ವಿ.ವಿ. ಮತ್ತು ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

ಬಿಇ, ಎಂ.ಟೆಕ್‌. ಪದವೀಧರರಾಗಿರುವ ಡಾ| ರವಿಕಾಂತೇಗೌಡ ಅವರು ಸಾಹಿತ್ಯ ಮತ್ತು ಸೃಜನಶೀಲ ಚಟುವಟಿಕೆ, 
ಸಂಸ್ಕೃತಿ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರು ಬರೆದಿರುವ ಲೇಖನಗಳು ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾಗಿವೆ.

Advertisement

ಸೇವಾವಧಿಯ ಪ್ರಮುಖ ಸಾಧನೆಗಳು
ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯ ದಂಧೆ ಮತ್ತು ಕೋಮು ಗಲಭೆ ನಿಯಂತ್ರಣ ಮಾಡಿದ್ದು, ರಾಜ್ಯ ಸರಕಾರ ಇದನ್ನು ಪ್ರಶಂಸಿಸಿತ್ತು. ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ ಆಗಿದ್ದಾಗ ಕುಖ್ಯಾತ ಭಯೋತ್ಪಾದಕನನ್ನು ಬಂಧಿಸಿ 2 ಎಕೆ 56 ರೈಫಲ್‌, 450 ಮದ್ದುಗುಂಡು, 10 ಗ್ರೆನೇಡ್‌ ವಶಪಡಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ರೌಡಿಗಳ ವಿರುದ್ಧ ಸತತ ಕಾರ್ಯಾಚರಣೆ ನಡೆಸಿ ನಿಷ್ಕ್ರಿಯಗೊಳಿಸಿದ್ದರು. ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಕೋಮು ಗಲಭೆ ಮಟ್ಟ ಹಾಕಿದ್ದರು. 2002ರಲ್ಲಿ ಮತ್ತು 2007ರಲ್ಲಿ ಒಟ್ಟು ಎರಡು ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದಿದ್ದಾರೆ.
 
ಕನ್ನಡದಲ್ಲಿ  ಕವಾಯತು ಆದೇಶ 
ಪೊಲೀಸ್‌ ವ್ಯವಸ್ಥೆಯಲ್ಲಿ ಕವಾಯತು ಆದೇಶಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನೀಡಲಾಗುತ್ತಿದ್ದು, ಮೊದಲ ಬಾರಿಗೆ ಅದನ್ನು ಪ್ರಾದೇಶಿಕ (ಕನ್ನಡ) ಭಾಷೆಗೆ ಅನುವಾದಿಸಿ ಜಾರಿಗೊಳಿಸಿದ ಕೀರ್ತಿ ಅವರದ್ದು. ಬೆಳಗಾವಿ ಎಸ್‌ಪಿ ಆಗಿದ್ದಾಗ 2016ರ ರಾಜ್ಯೋತ್ಸವ ಸಂದರ್ಭ ಮೊದಲ ಬಾರಿಗೆ ಕನ್ನಡದಲ್ಲಿ ಕವಾಯತು ಆದೇಶಗಳನ್ನು ರೂಪಿಸಿ ಜಾರಿಗೊಳಿಸಿದ್ದರು. ಇದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.

ಸುಧಾರಿತ ಗಸ್ತು ವ್ಯವಸ್ಥೆ
ತಳ ಹಂತದ ಪೊಲೀಸ್‌ ಸಿಬಂದಿಯ ಸಶಕ್ತೀಕರಣ ಹಾಗೂ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಉಪ ಗಸ್ತು ವ್ಯವಸ್ಥೆಯನ್ನು ಬೆಳಗಾವಿ ಜಿಲ್ಲೆ ಯಲ್ಲಿ ಜಾರಿಗೆ ತಂದ ಡಾ| ರವಿಕಾಂತೇ ಗೌಡ ಅವರು, ಅದರ ಆಧಾರದಲ್ಲಿ ಸುಧಾರಿತ ಗಸ್ತು ವ್ಯವಸ್ಥೆಯನ್ನು ರಾಜ್ಯದ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next