Advertisement

ಬಸವಣ್ಣನ ಹೆಸರಿನಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯುವವರು ಹುಟ್ಟಿಕೊಂಡಿದ್ದಾರೆ: ಸಚಿವ ಸೇಡಂ

03:02 PM Nov 24, 2023 | Team Udayavani |

ವಾಡಿ: ವಚನ ಸಾಹಿತ್ಯದ ಮೂಲಕ ವ್ಯವಸ್ಥೆಯ ವಿರುದ್ಧ ಬಂಡೆದ್ದ ಬಸವಣ್ಣನ ಹೆಸರಿನಲ್ಲಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯುವವರು ಹುಟ್ಟಿಕೊಂಡಿದ್ದಾರೆ. ಆದರೆ ಬಸವಕಲ್ಯಾಣ ಅಭಿವೃದ್ಧಿ ಕಾಣದೆ ಭಣಗುಡುತ್ತಿದೆ ಎಂದು ಮಾಜಿ ಸಂಸದ ಡಾ.ಬಸವರಾಜ ಪಾಟೀಲ ಸೇಡಂ ಅಸಮಾದಾನ ವ್ಯಕ್ತಪಡಿಸಿದರು.

Advertisement

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ವತಿಯಿಂದ ಚಿತ್ತಾಪುರ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ “ನಾಗಾವಿ ನಾಡಿನ ಸಾಹಿತಿಗಳು” ಗ್ರಂಥ ಲೋಕಾರ್ಪಣೆ, ಪರಿಷತ್ತಿನ ಪ್ರಥಮ ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ತಳಹದಿಯ ಅನುಭವ ಮಂಟಪ ಸ್ಥಾಪನೆಗೊಂಡಿದ್ದ ನೆಲ ಬಸವಕಲ್ಯಾಣ ಇಂದಿಗೂ ಭಾರತದ ಪ್ರವಾಸೋದ್ಯಮದ ಪಟ್ಟಿಯಲ್ಲಿ ಸೇರಿಲ್ಲ. 12ನೇ ಶತಮಾನದ ಶಿವಶರಣೆಯರ ಇತಿಹಾಸವನ್ನೂ ಕಡೆಗಣಿಸಲಾಗಿದೆ. ಶರಣರು ಬದುಕಿ ಬಾಳಿದ ಐತಿಹಾಸಿಕ ಸ್ಥಳಗಳು ಸ್ಮಾರಕಗಳಾಗಿ ಅಭಿವೃದ್ಧಿ ಹೊಂದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಒಳ್ಳೆಯ ಸಾಹಿತಿಗಳು ಬೇಗ ಜಗತ್ತಿಗೆ ಗೊತ್ತಾಗಲ್ಲ. ಅಂತಹ ಪ್ರತಿಭೆಗಳನ್ನು ಗುರುತಿಸಿ ಬೆಳಕು ಚೆಲ್ಲುವ ಕಾರ್ಯ ಸಾಹಿತ್ಯ ವೇದಿಕೆಗಳು ಮಾಡಬೇಕು. ಬರಹ ಲೋಕದಲ್ಲಿ ಬೆಳೆಯಲು ಬಯಸಿದ ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರ ವಾದಗಳಲ್ಲಿ ಸಿಲುಕಿ ಸಂಘರ್ಷದಲ್ಲೇ ಸಾಹಿತ್ಯ ಬದುಕು ಮುಗಿಸಿದರು. ವಾದಗಳು ಭಿನ್ನವಾಗಿದ್ದರೂ ಚರ್ಚೆ ಸಂಘರ್ಷ ನಡೆದರೂ ಒಬ್ಬರನ್ನೊಬ್ಬರು ಪರಸ್ಪರ ಸೇರಲೇಬೇಕು. ಗುಡಿಸಲಲ್ಲಿ ಹಚ್ಚಿದ ಸಾಹಿತ್ಯ ದೀಪ ಸಾವಿರಾರು ಜ್ಯೋತಿ ಗಳಾಗಿ ಬೆಳಗಬೇಕು ಎಂದರು.

ಗ್ರಂಥ ಪರಿಚಯಿಸಿ ಮಾತನಾಡಿದ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ಕಲಬುರಗಿ ಜಿಲ್ಲೆಯಲ್ಲಿ ಸಾಹಿತಿಗಳ ಕೊರತೆಯಿಲ್ಲ. ಚಿತ್ತಾಪುರ ತಾಲುಕಿನಲ್ಲೂ ಬರಹಗಾರ ಕೊರತೆಯಿಲ್ಲ. ಚಿತ್ತಾಪುರ ಸಾಂಸ್ಕೃತಿಕವಾಗಿ ಹಿಂದುಳಿದಿಲ್ಲ. ಬರೆದ ಸಾಹಿತ್ಯವನ್ನು ಪ್ರಕಟಿಸುವಲ್ಲಿ ಚಿತ್ತಾಪುರದ ಬರಹಗಾರರು ಹಿಂದುಳಿದಿದ್ದಾರೆ.

ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಕಾಶೀನಾಥ ಗುತ್ತೇದಾರ ಅಧ್ಯಕ್ಷತೆ ವಹಿಸಿದ್ದರು. ರಾಯಚೂರು ಕೃಷಿ ವಿವಿ ಮಾಜಿ ನಿರ್ದೇಶಕ ವೀರಣ್ಣಗೌಡ ಪರಸರೆಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ, ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬದವರಾಜ ಬಳೂಂಡಗಿ, ಕ್ರೈಂ ಪಿಎಸ್ ಐ ಚಂದ್ರಾಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಜನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ, ಸಾಹಿತಿ ಲಿಂಗಪ್ಪ ಮಲ್ಕನ್, ಸಿದ್ದಯ್ಯಸ್ವಾಮಿ ಮಲಕೂಡ ಸೇರಿದಂತೆ ತಾಲೂಕಿನ ಬರಹಗಾರರು ಪಾಲ್ಗೊಂಡಿದ್ದರು. ವೀರಸಂಗಪ್ಪ ಸುಲೇಗಾಂವ ಸ್ವಾಗತಿಸಿದಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ, ವಂದಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಇದನ್ನೂ ಓದಿ: Shivamogga: ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

Advertisement

Udayavani is now on Telegram. Click here to join our channel and stay updated with the latest news.

Next