ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ತಮ್ಮ ಸಂಬಂಧಿ ಶಾಮೀಲು ಆರೋಪ ವಿಚಾರದ ಬಗ್ಗೆ ಸಚಿವ ಅಶ್ವತ್ಥ್ ನಾರಾಯಣ ಅವರು ಸ್ಪಷ್ಟನೆ ನೀಡಿದ್ದು, ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಸುಳ್ಳು ಆರೋಪ ಮಾಡಲಾಗಿದೆ ಎಂದಿದ್ದಾರೆ.
ಪಿಎಸ್ಐ ನೇಮಕಾತಿ ವಿಚಾರದಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೂ ಯಾವುದೇ ಶಿಫಾರಸು, ನೆರವು ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ನಾವು ಸಹಾಯ ಮಾಡುತ್ತೇವೆ ಅಂತ ಒಬ್ಬೇ ಒಬ್ವರಿಗೂ ಹೇಳಲಿಲ್ಲ. ಹೆಸರು ಹೇಳದೇ ಸುಳ್ಳು ಆರೋಪ ಮಾಡಲಾಗಿದೆ. ಕಾಂಗ್ರೆಸ್ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ನಿರಾಧಾರವಾಗಿ, ಸಂಪೂರ್ಣ ದುರುದ್ದೇಶದ ಹೇಳಿಕೆ ಕೊಟ್ಟಿದ್ದಾರೆ ಎಂದರು.
ಈ ಆರೋಪ ಮಾಡಿರುವವರು ಸ್ಪಷ್ಟತೆ ಕೊಡಲಿ.ಇರಬಹುದು, ಮಾಡಿರಬಹುದು, ಅವರ ತಮ್ಮ ಇರಬಹುದು ಅನ್ನುತ್ತಿದ್ದಾರೆ. ಹೇಳಿಕೆ ಸ್ಪಷ್ಟವಾಗಿ ಇರಲಿ. ಮಸಿ ಬಳಿಯಲು ಹೇಳೋದು ಬೇಡ. ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಸುಳ್ಳು ಆರೋಪ ಮಾಡಲಾಗಿದೆ. ತನಿಖೆ ವರದಿ ಬರಲಿ, ಉಪ್ಪು ತಿಂದೋನು ನೀರು ಕುಡಿದೇ ಕುಡೀಯುತ್ತಾನೆ ಎಂದರು.
ಒಂದು ಹೇಳಿಕೆ ಕೊಡಲು ಧೈರ್ಯ ಸ್ಥೈರ್ಯ ಬೇಕು. ಅವರ ನಿರಾಧಾರ ಹೇಳಿಕೆಗೆ ನನ್ನ ಪ್ರಯಿಕ್ರಿಯೆ ಕೇಳಿದ್ದೇ ತಪ್ಪು. ಶಿವಕುಮಾರ್ ಬಾಯಿಯಲ್ಲಿ ಹೇಳಿಕೆ ಬರುತ್ತೆ ಅಂದರೆ ಅದರಲ್ಲಿ ದುರುದ್ದೇಶ ಇದೆ ಎಂದರ್ಥ. ಅಶ್ವತ್ಥ್ ನಾರಾಯಣ್ ಮುಖ್ಯಮಂತ್ರಿ ಆಗಿ ಬಿಡ್ತಾನೆ ಅನ್ನುವ ಭಯ ಡಿಕೆಶಿ ಇದೆ. ನಮ್ಮ ನಾಯಕತ್ವ, ಗುಣದ ಭಯ ಇರಲಿ ಅವರಿಗೆ. ಕಾಂಗ್ರೆಸ್ ನವರು ಆಧಾರ ಸಹಿತ ಮಾತನಾಡುತ್ತಿಲ್ಲ. ನನಗೆ ಯಾರ ಜತೆಗೂ ಸಂಬಂಧ ಇಲ್ಲ. ದರ್ಶನ್ ಗೌಡ ಹೆಸರು ಈಗಲೇ ಕೇಳುತ್ತಿರೋದು ನಾನು. ನಾನು ಭ್ರಷ್ಟಾಚಾರ ಮಾಡಲು ಬಂದವನಲ್ಲ. ಭ್ರಷ್ಟಾಚಾರ ಮಾಡಲು ಬಂದವರೇ ಬೇರೆ ಇದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಕಾಂಗ್ರೆಸ್ ನವರ ಆರೋಪಕ್ಕೆ ಉತ್ತರಿಸುವ ಸಂದರ್ಭ ಇದಲ್ಲ. ಆರ್ಗನೈಸ್ಡ್ ಕ್ರೈಂ ಇದು. ಇವತ್ತಿಂದಲೇ ಡಿಕೆಶಿ ಬಂಡವಾಳ ಬಿಚ್ಚಿಡುತ್ತೇನೆ .ಡಿಕೆಶಿಯ ಕೊಳಕಿನ ಜಾಲ ಬಿಡಿಸುತ್ತೇನೆ ಎಂದರು.
ರಾಮನಗರ ಜಿಲ್ಲೆ ಯಾವತ್ತೂ ಡಿಕೆಶಿಯನ್ನು ಸಂಪೂರ್ಣವಾಗಿ ಒಪ್ಪಿಲ್ಲ.ಡಿಕೆಶಿ ರಾಮನಗರದಲ್ಲಿ ಸೀಮಿತ ನಾಯಕ ಅಷ್ಟೇ. ನಾನೂ ರಾಮನಗರದವನೇ, ನಮ್ಮ ಪೂರ್ವಜರೂ ಅಲ್ಲಿಯವರೇ. ಡಿಕೆಶಿ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟಿದ್ದಾರೆ. ಆಧಾರ ರಹಿತ ಹೇಳಿಕೆ ಕೊಟ್ಟಿದಾರೆ. ಡಿಕೆಶಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ನಾಚಿಕೆ ಆಗುವುದಿಲ್ಲವೇ ಉಗ್ರಪ್ಪಗೆ. ಭ್ರಷ್ಟಾಚಾರ ಮಾಡಿದರೆ ಹೇಳಲಿ. ಉಗ್ರಪ್ಪ ತಮ್ಮ ರಾಜಕೀಯ ಅನುಭವದಿಂದ ಮಾತಾಡಲಿ. 80 ಲಕ್ಷ ಕೊಟ್ಟಿದ್ದಾರೇನ್ರಿ? ಇದು ಕಟು ಸುಳ್ಳು. ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ ಎಂದರು.
ಸತೀಶ್ ಅಂತ ನಮ್ಮಣ್ಣ ಇದ್ದಾರೆ. ಅವರ ಮೇಲೆ ಆರೋಪ ಮಾಡಿದಾರಲ್ಲ, ಸಾಕ್ಷ್ಯ ಕೊಟ್ಟಿದ್ದಾರಾ? ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ, ಅಧಿಕಾರ ದುರ್ಬಳಕೆ ಪದ್ಧತಿ ಇಲ್ಲ. ನಮ್ಮದು ಡಿಕೆಶಿ ಕುಟುಂಬ ಅಲ್ಲ, ಇದೆಲ್ಲ ಪದ್ಧತಿ ಇರುವುದಕ್ಕೆ. ನಮ್ಮಣ್ಣ ಸತೀಶ್ ಗೂ ಪ್ರಕರಣಕ್ಕೂ ನೂರಕ್ಕೆ ನೂರು ಸಂಬಂಧ ಇಲ್ಲ. ಇಂಥ ಸಾವಿರ ಜನ ಪ್ರಯತ್ನ ಮಾಡಿದರೂ ಅಶ್ವಥ್ ನಾರಾಯಣಗೆ ಮಸಿ ಬಳಿಯಲು ಆಗುವುದಿಲ್ಲ ಎಂದು ಕಿಡಿ ಕಾರಿದರು.
ಸಹಾಯಕ ಪ್ರಾಧ್ಯಾಪಕ ಹುದ್ದೆ ಅಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ತನಿಖೆ ನಡೆಯುತ್ತಿದೆ, ತನಿಖೆಯ ವರದಿ ಬರಲಿ ಮಾತನಾಡುತ್ತೇನೆ ಎಂದರು.